ಬೆಳ್ತಂಗಡಿ: ಬಡಗಕಾರಂದೂರು ಗ್ರಾಮದ ಅರ್ಕಿಜಡ್ಡ ಪ್ರದೇಶದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ವೃದ್ಧರೊಬ್ಬರು ಮೃತಪಟ್ಟಿದ್ದು, ಸಹೋದರಿ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೃಷ್ಣಪ್ಪ ಮೂಲ್ಯ (63) ಮೃತಪಟ್ಟವರು.
ಕೃಷ್ಣಪ್ಪ ಮೂಲ್ಯ ಅವರ ಪತ್ನಿ ಮೃತಪಟ್ಟಿದ್ದು, ಹಲವು ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.
ಮೂವರು ಪುತ್ರರು ಇದ್ದರೂ ಸುಮಾರು 15 ವರ್ಷಗಳ ಹಿಂದೆ ತಂದೆಯಿಂದ ದೂರವಿದ್ದಾರೆ ಎನ್ನಲಾಗಿದೆ. ಮೃತರ ಸಹೋದರಿ ಮುತ್ತಮ್ಮ ಅವರು ಪ್ರತಿದಿನ ಊಟ-ತಿಂಡಿ ನೀಡುತ್ತಿದ್ದರು. ಸುಮಾರು 15 ದಿನಗಳ ಹಿಂದೆ ಕೃಷ್ಣಪ್ಪ ಮೂಲ್ಯ ಅವರು ಜೇನು ತೆಗೆಯುವ ವೇಳೆ ಹುತ್ತಕ್ಕೆ ಕೈ ಹಾಕಿದಾಗ ಎಡ ಕೈಗೆ ಕಚ್ಚಿ ಗಾಯಗೊಂಡಿದ್ದು, ಅದಕ್ಕೆ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದರು ಎನ್ನಲಾಗಿದೆ.
ಗುರುವಾರ ಮಧ್ಯಾಹ್ನ ವೇಳೆಗೆ ಅವರು ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಗಾಯದ ಪರಿಣಾಮದಿಂದಲೋ ಅಥವಾ ಇತರ ಕಾರಣಗಳಿಂದಲೋ ಸಾವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಘಟನೆ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

