Dailyhunt
Bengaluru City University; 85 ವಿನೂತನ ಕೋರ್ಸ್‌

Bengaluru City University; 85 ವಿನೂತನ ಕೋರ್ಸ್‌

ಬೆಂಗಳೂರು: ವಿದ್ಯಾರ್ಥಿಗಳ ಸಂಖ್ಯೆ ಕುಸಿತವನ್ನು ತಡೆಗಟ್ಟುವ ಉದ್ದೇಶದ ಜೊತೆಗೆ ಪ್ರಸ್ತುತ ಕಾಲಘಟ್ಟದ ಔದ್ಯೋಗಿಕ ಸವಾಲುಗಳನ್ನು ಎದುರಿಸಲು ಅಗತ್ಯವಾದ ಕೌಶಲ್ಯಗಳನ್ನು ಕಲಿಸಲು, ವಿದ್ಯಾರ್ಥಿಗಳು 'ಜಾಬ್‌ ರೆಡಿ' ಆಗಿ ಕಾಲೇಜಿನಿಂದ ಹೊರ ಬರಬೇಕು ಎಂಬ ಉದ್ದೇಶ ದಿಂದ ಡಾ.ಮನಮೋಹನ್‌ ಸಿಂಗ್‌ ಬೆಂಗಳೂರು ನಗರ ವಿಶ್ವ ವಿದ್ಯಾಲಯ 80ಕ್ಕೂ ಹೆಚ್ಚು ವಿನೂತನ ಕೋರ್ಸ್‌ಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪರಿಚಯಿಸಲಿದೆ.

ವಿವಿಯ ಸಂಯೋಜಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತ ಸಾಗಿದೆ. ವಿವಿಯಲ್ಲಿ 200ಕ್ಕಿಂತಲೂ ಹೆಚ್ಚು ಸಂಯೋಜಿತ ಕಾಲೇಜುಗಳಿವೆ. 2024ರಲ್ಲಿ ವಿವಿ ಸಂಯೋಜಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 29,068 ಇದ್ದರೆ 2025-26 ರಲ್ಲಿ ವಿದ್ಯಾರ್ಥಿಗಳ ಸಂಖ್ಯೆ 26,490ಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ವಿನೂತನ ಕೋರ್ಸ್‌ ಗಳನ್ನು ಪರಿಚಯಿಸುವ ಪ್ರಯತ್ನಕ್ಕೆ ವಿವಿ ಮುಂದಾಗಿದೆ.

ಬಿಎಸ್‌ಸಿಯಲ್ಲಿ ಜೆಮ್ಸ್‌ ಮತ್ತು ಜ್ಯುವೆಲ್ಲರಿ, ಕ್ವಾಂಟಂ ಫಿಸಿಕ್ಸ್‌, ಎಂಎಸ್ಸಿಯಲ್ಲಿ ಕ್ರಿಮಿನಲಜಿ ಮತ್ತು ವಿಧಿ ವಿಜ್ಞಾನ, ಗಾಯ ಮತ್ತು ದುಃಖ ಆಪ್ತ ಸಮಾಲೋಚನೆ, ಬಿಸಿಎ ಕ್ವಾಂಟಂ ಕಂಪ್ಯೂಟರಿಂಗ್‌, ಬಿಎಸ್ಸಿ ಸೆಮಿ ಕಂಡಕ್ಟರ್‌ಟೆಕ್ನಾಲಜಿ, ಬಿಸಿಎ ಜನರೇಟಿವ್‌ ಎಐ ಮುಂತಾದ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಬಿ.ಕಾಂ.ನಲ್ಲೂ ಇವೆಂಟ್‌ ಮ್ಯಾನೇಜ್‌ಮೆಂಟ್‌, ಬಿಬಿಎ ಡಿಜಿಟಲ್‌ ಮಾರ್ಕೆಟಿಂಗ್‌, ಸಾಮಾಜಿಕ ಮಾಧ್ಯಮ ನಿರ್ವಹಣೆ, ಬಿಕಾಂನ ಎಸಿಸಿಎ, ಸಿಐಎಂಎ ವೃತ್ತಿಪರ ಕೋರ್ಸ್‌ಗಳು, ಎಂಬಿಎ ಹೆಲ್ತ್ ಕೇರ್‌ ಮ್ಯಾನೇಜ್‌ ಮೆಂಟ್‌ ಕೋರ್ಸ್‌ ಗಳಿಗೆ ಅನುಮೋದನೆ ನೀಡಿದೆ.

ಇನ್ನು ಹತ್ತು ಹಲವು ಸರ್ಟಿಫಿಕೇಟ್‌ ಕೋರ್ಸ್‌ಗಳು, ಡಿಪ್ಲೊಮಾ ಕಾರ್ಯಕ್ರಮಗಳು ಪರಿಚಯವಾಗಲಿದ್ದು ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಲವು ಆಯ್ಕೆಗಳನ್ನು ನೀಡಲಿವೆ. ಇದರ ಜೊತೆಗೆ ಫಿಟ್‌ನೆಸ್‌ ಟ್ರೈನಿಂಗ್‌, ಮೌಲ್ಯ ಶಿಕ್ಷಣ, ಒಳಗೊಳ್ಳುವ ಶಿಕ್ಷಣ, ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆ, ಶಿಕ್ಷಣ ತಂತ್ರಜ್ಞಾನ, ಶಿಕ್ಷಣ ಆಡಳಿತ ಮತ್ತು ನಾಯಕತ್ವ, ಜೀವನ ಕೌಶಲ್ಯ, ಕ್ಲಾಸ್‌ ರೂಂ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಕೋರ್ಸ್‌ ಆರಂಭಿಸಲಿದೆ.

ಕಂಟೆಂಟ್‌ ಬರಹ, ನ್ಪೋಕನ್‌ ಇಂಗ್ಲಿಷ್‌, ಅಕಾಡೆಮಿನಕ್‌ ರೈಟಿಂಗ್‌ ಮತ್ತು ಪಬ್ಲಿಕೇಷನ್‌, ವಿಕಲಚೇತನ ಅಧ್ಯಯನ ಮತ್ತು ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿ, ಪುನಶ್ಚೇತನ ಮತ್ತು ಮಾನಸಿಕ ಬೆಂಬಲ ಮುಂತಾದ ವಿಷಯಗಳಲ್ಲಿ ಪಿಜಿ ಡಿಪ್ಲೊಮಾ, ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಆರಂಭಿಸಲಿದೆ. ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಅನಿಮೇಷನ್‌, ಸೈಬರ್‌ಸೆಕ್ಯುರಿಟಿ, ಕೃತಕ ಬುದ್ಧಿಮತ್ತೆ, ಉದ್ಯಮಶೀಲತೆ, ನರ್ಸಿಂಗ್‌ ಮ್ಯಾನೇಜ್‌ಮೆಂಟ್‌, ಹವಾಮಾನ ಬದಲಾವಣೆ, ಕ್ರೀಡೆ ಮತ್ತು ಪೌಷ್ಟಿಕ ಆಹಾರ ವಿಷಯಳಲ್ಲೂ ಪಿಜಿ ಡಿಪ್ಲೊಮಾ, ಸರ್ಟಿಫಿಕೇಟ್‌ ಕೋರ್ಸ್‌ ಗಳನ್ನು ಪರಿಚಯಿಸಲಿದೆ.

ಸ್ವಾಯತ್ತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ
ವಿವಿಯ ಸಂಯೋಜಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದ್ದರೆ ಸ್ವಾಯತ್ತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸ್ವಾಯತ್ತ ಕಾಲೇಜುಗಳಲ್ಲಿ 2024-25ರಲ್ಲಿ ಯುಜಿಯಲ್ಲಿ 7,295 ಮತ್ತು ಪಿಜಿಯಲ್ಲಿ 1,931 ವಿದ್ಯಾರ್ಥಿಗಳಿದ್ದರೆ, 2025-26ರಲ್ಲಿ ಯುಜಿಯಲ್ಲಿ 8,868 ಮತ್ತು ಪಿಜಿಯಲ್ಲಿ 2,006 ವಿದ್ಯಾರ್ಥಿಗಳಿದ್ದರು.

ಎಲ್‌ಕೆಜಿ, ಯುಕೆಜಿ ಬೋಧನೆಗೆ ಡಿಪ್ಲೊಮಾ:ರಾಜ್ಯದಲ್ಲೇ ಮೊದಲು
ನಗರದಲ್ಲಿ ಪ್ರಸ್ತುತ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಪೂರ್ವ ಪ್ರಾಥಮಿಕ ಶಾಲೆಗೆ ಕಳುಹಿಸುತ್ತಾರೆ. ಆದರೆ, ಪೂರ್ವ ಪ್ರಾಥಮಿಕ ಶಾಲೆಗಳಿಗೆ ನಿಯಮವಾಗಲಿ, ಅಲ್ಲಿನ ಸಿಬ್ಬಂದಿಗೆ ಶೈಕ್ಷಣಿಕ ಮಾನದಂಡವಾಗಲಿ ಇಲ್ಲ. ಈ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಆಸಕ್ತಿಯನ್ನು ಗಮನಿಸಿರುವ ವಿವಿಯು ರಾಜ್ಯದಲ್ಲೇ ಮೊದಲ ಬಾರಿಗೆ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಡಿಪ್ಲೋಮಾ ಕೋರ್ಸ್‌ ಆರಂಭಿಸಿದೆ.

ವಿದ್ಯಾರ್ಥಿಗಳನ್ನು ನಮ್ಮ ಕಾಲೇಜುಗಳಿಗೆ ಸೆಳೆಯಲು ವಿವಿಯ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಡೀನ್‌, ಬೋಧಕರು ಮತ್ತು ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರ ಶಿಫಾರಸುಗಳ ಮೇಲೆ ನಾವು ಸುಮಾರು 85 ಪದವಿ, ಸ್ನಾತಕೋತ್ತರ ಪದವಿ, ಪ್ರಮಾಣ ಪತ್ರ, ಯುಜಿ ಡಿಪ್ಲೊಮಾ ಮತ್ತು ಪಿಜಿ ಡಿಪ್ಲೊಮಾ ಕೋರ್ಸ್‌ ಗಳನ್ನು ಪರಿಚಯಿಸಲು ಮುಂದಾಗಿದ್ದೇವೆ. ಈ ಎಲ್ಲ ಕೋರ್ಸ್‌ ಗಳನ್ನು ಪ್ರಸ್ತುತ ಕಾಲಘಟ್ಟದ ಔದ್ಯೋಗಿಕ ಮತ್ತು ಶೈಕ್ಷಣಿಕತೆಯನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರುತ್ತೇವೆ.
●ಪ್ರೊ.ಬಿ.ರಮೇಶ್‌, ಕುಲಪತಿ, ನಗರ ವಿವಿ

ರಾಕೇಶ್‌.ಎನ್‌.ಎಸ್‌

Dailyhunt
Disclaimer: This content has not been generated, created or edited by Dailyhunt. Publisher: Udayavani