ಬೆಂಗಳೂರು: ಕಲ್ಲು ಕ್ವಾರಿಯಲ್ಲಿ ಕುಸಿದು ಬಿದ್ದ ಬೃಹತ್ ಬಂಡೆಯಡಿ ಸಿಲಿಕಿ 7 ಮಂದಿ ಕೂಲಿ ಕಾರ್ಮಿಕರು ಸಾವಿಗೀಡಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಗ್ರಾಮದಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಮುಂಜಾನೆ 5 ಗಂಟೆ ಸುಮಾರಿಗೆ ದುರಂತ ಸಂಭವಿಸಿದ್ದು, ಸುಮಾರು 40 ಅಡಿ ಮೇಲಿಂದ ಬಂಡೆ ಬಿದ್ದ ಪರಿಣಾಮ ದೊಡ್ಡ ಪ್ರಮಾಣ ಸಾವುನೋವು ಉಂಟಾಗಿದೆ.
ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ದುರಂತ ಸ್ಥಳದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಾವೇರಿ ಕ್ರಷರ್‌ನಲ್ಲಿ ಘಟನೆ ನಡೆದಿದ್ದು, ಈ ವೇಳೆ 10-15 ಮಂದಿ ಬಿಹಾರದವರು, 2-3 ಮಂದಿ ಸ್ಥಳೀಯರು ಕೆಲಸ ಮಾಡುತ್ತಿದ್ದರು. ಹಿಟಾಚಿಯಿಂದ ಕೆಲಸ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಘಟನೆಯಲ್ಲಿ 5 ಜನ ಕೂಲಿ ಕಾರ್ಮಿಕರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಜರಾಜೇಶ್ವರಿ.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಾವರೆಕೆರೆ ಠಾಣೆ ಪೊಲೀಸರು ಆಗಮಿಸಿದ್ದು ಕ್ವಾರಿ ಮಾಲಕ ಆನಂದ ಸ್ವಾಮಿ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

