ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಜ್ಞಾನಭಾರತಿ ಆವರಣದ ಭೂ ಗಡಿಸಂರಕ್ಷಣೆ, ಭದ್ರತೆ ಹಾಗೂ ಭೂಮಿಯ ಸುಸ್ಥಿರ ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಮಗ್ರ ಜಿಯೋ ಫೆನ್ಸಿಂಗ್ ಹಾಗೂ ಕ್ಯಾಂಪಸ್ ಗಡಿ ಸಂರಕ್ಷಣಾ ಯೋಜನೆ ಕೈಗೊಳ್ಳಲು ಮುಂದಾಗಿದೆ.
ಬೆಂಗಳೂರು ವಿವಿಯು ಸುಮಾರು 1,200 ಎಕರೆ ಜಮೀನು ಹೊಂದಿದ್ದು, ಈ ಪೈಕಿ ಸುಮಾರು 83 ಎಕರೆ ಜಮೀನು ಒತ್ತುವರಿಯಾಗಿ ರುವುದು ಪತ್ತೆಯಾಗಿದೆ. ವಿವಿಗೆ ಒತ್ತುವರಿದಾರರಿಂದ ತನ್ನ ಜಮೀ ನನ್ನು ಕಾಪಾಡಿಕೊಳ್ಳುವುದೇ ದೊಡ್ಡ ತಲೆನೋವಾಗಿದೆ. ಈ ಬಗ್ಗೆ "ಉದಯವಾಣಿ' ಜುಲೈ 3 ರಂದು ಬೆಂಗಳೂರು ವಿವಿಯ 83 ಎಕರೆ ಜಮೀನು ಒತ್ತುವರಿ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
ತನ್ನ ಜಮೀನಿನ ಒತ್ತುವರಿ ತೆರವು ತಡೆಯಲು ಈಗಾಗಲೇ ನ್ಯಾಯಾಲಯದಲ್ಲಿ ಹಲವು ಒತ್ತುವರಿ ದಾರರ ವಿರುದ್ಧ ನ್ಯಾಯಾಲಯಗಳಲ್ಲಿ ದಾವೆ ಹೂಡಿರುವ ವಿವಿಯು, ಇನ್ನು ಕೆಲವರ ವಿರುದ್ಧ ಕಾನೂನು ಹೋರಾಟ ನಡೆಸಲು ಪೂರ್ವತಯಾರಿ ನಡೆಸುತ್ತಿದೆ. ಜೊತೆಗೆ ವಿವಿಯು ಕೆಲ ಸರ್ಕಾರಿ ಸಂಸ್ಥೆಗಳಿಗೆ ಗುತ್ತಿಗೆ ಆಧಾರದಲ್ಲಿ ಜಮೀನು ನೀಡಿದ್ದರೂ ಸಹ ಆ ಸಂಸ್ಥೆಗಳು ಕರಾರು ಮೀರಿ ಜಮೀನು ಬಳಸಿಕೊಳ್ಳುತ್ತಿರುವುದು ವಿವಿಯ ಗಮನಕ್ಕೆ ಬಂದಿದೆ. ಹೀಗಾಗಿ ವಿವಿಯು ತನ್ನ ಜಮೀನನ್ನು ಬಂದೋಬಸ್ತು ಮಾಡಿಕೊಳ್ಳಲು ತನ್ನ ಸಂಪೂರ್ಣ ಜಮೀನಿಗೆ ಸಮಗ್ರ ಜಿಯೋ ಫೆನ್ಸಿಂಗ್ ಮಾಡಲು ತೀರ್ಮಾನಿಸಿದೆ.
ಜಿಯೋ ಫೆನ್ಸಿಂಗ್ ಯೋಜನೆಯು ಬೆಂಗಳೂರು ವಿಶ್ವವಿದ್ಯಾಲಯದ ಭೂ ಆಸ್ತಿಯ ಸಂರಕ್ಷಣೆ, ಆಡಳಿ ತಾತ್ಮಕ ನಿರ್ವಹಣೆ ಹಾಗೂ ಆಧುನಿಕ ತಂತ್ರಜ್ಞಾನ ಆಧಾರಿತ ಕ್ಯಾಂಪಸ್ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಜಿಯೋ ಫೆನ್ಸಿಂಗ್ ಮೂಲಕ ವಿಶ್ವವಿದ್ಯಾಲಯದ ವಿಶಾಲ ಆವರಣದ ಭದ್ರತೆಯನ್ನು ಹೆಚ್ಚಿಸುವುದು, ಅತಿಕ್ರಮಣವನ್ನು ತಡೆಗಟ್ಟುವುದು ಹಾಗೂ ಪರಿಸರ ಸಂಪತ್ತಿನ ಸಂರಕ್ಷಣೆಯನ್ನು ಖಾತ್ರಿಪಡಿಸುವುದು ವಿವಿಯ ಉದ್ದೇಶ. ಜೊತೆಗೆ ವಿವಿಯ ಆವರಣದೊಳಗೆ ವಿವಿಗೆ ಸಂಬಂಧಿಸದ ವ್ಯಕ್ತಿಗಳ ಓಡಾಟ, ವಿವಿಯ ಆವರಣವನ್ನು ದುರುಪಯೋಗ ಪಡಿಸಿಕೊಳ್ಳುವುದು, ಅಕ್ರಮ ಪ್ರವೇಶ, ಅನುಚಿತ ವರ್ತನೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂಬುದು ವಿವಿಯ ನಂಬಿಕೆ. ಹಾಗೆಯೇ ವಿವಿಯ ರಸ್ತೆ ಬದಿಯಲ್ಲಿ ಕಸ ಎಸೆದು ಪರಾರಿ ಆಗುವವರಿಗೂ ಲಗಾಮು ಬೀಳಬಹುದು ಎಂಬುದು ವಿವಿಯ ಲೆಕ್ಕಾಚಾರ.
ಪ್ರಸ್ತುತ ವಿಶ್ವವಿದ್ಯಾಲಯದ ಆವರಣದ ಒಳಭಾಗದಲ್ಲಿ 1,112 ಮೀಟರ್‌ಉದ್ದದ ಬೇಲಿ ಹಾಗೂ ಬಿಬಿಎಂಪಿ ವತಿಯಿಂದ ನಿರ್ಮಿಸಲಾದ 226 ಮೀಟರ್ ಉದ್ದದ ಅಲಂಕಾರಿಕ ಬೇಲಿ ಇದೆ. ವಿಶ್ವವಿದ್ಯಾಲಯದ ಹೊರಭಾಗದಲ್ಲಿ ಒಟ್ಟು 9500 ಮೀಟರ್‌ಉದ್ದದ ಕಾಂಪೌಂಡ್ ಗೋಡೆ ನಿರ್ಮಾಣಗೊಂಡಿದೆ. ಜಿಯೋ ಫೆನ್ಸಿಂಗ್ ಯೋಜನೆಯ ಅನುಷ್ಠಾನದಿಂದ ವಿವಿಯ ಗಡಿಯನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದರ ಜೊತೆಗೆ ಅತಿಕ್ರಮಣ ತಡೆ, ಭದ್ರತಾ ವ್ಯವಸ್ಥೆ ಬಲಪಡಿಸುವುದು, ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಯನ್ನು ಸುಧಾರಿಸುವುದು ಹಾಗೂ ವಿಶ್ವವಿದ್ಯಾಲಯದ ಅಮೂಲ್ಯ ಹಸಿರು ಸಂಪತ್ತು ಮತ್ತು ಜೀವ ವೈವಿಧ್ಯತೆಯನ್ನು ಮುಂದಿನ ಪೀಳಿಗೆಗಳಿಗೆ ಸಂರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ವಿಶ್ವವಿದ್ಯಾಲಯದಲ್ಲಿ ಜಿಯೋ ಫೆನ್ಸಿಂಗ್ ಕಾಮಗಾರಿಗಳು ವಿವಿಯಲ್ಲಿ 2395 ಮೀಟರ್‌ಉದ್ದದ ಅಲಂಕಾರಿಕ ಬೇಲಿ ನಿರ್ಮಾಣ, 4590 ಮೀಟರ್‌ಉದ್ದದ ಚೈನ್ ಲಿಂಕ್ ಫೆನ್ಸಿಂಗ್ ಅಳವಡಿಕೆ, 203 ಮೀಟರ್‌ಉದ್ದದ ರಿಟೈನಿಂಗ್ ವಾಲ್ ನಿರ್ಮಾಣ, 1182 ಮೀಟರ್ ಉದ್ದದ ಹೊಸ ಕಾಂಪೌಂಡ್ ಗೋಡೆ ನಿರ್ಮಾಣ, 325 ಮೀಟರ್‌ವ್ಯಾಪ್ತಿಯಲ್ಲಿ ಪ್ರಸ್ತಾವಿತ ಗೇಟ್ ಸಂಖ್ಯೆ-39 ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
ಜಿಯೋ ಫೆನ್ಸಿಂಗ್ ಯೋಜನೆ ಪೂರ್ಣಗೊಂಡ ಬಳಿಕ ವಿಶ್ವವಿದ್ಯಾಲಯದ ಸಂಪೂರ್ಣ ಗಡಿ ಸುರಕ್ಷಿತವಾಗಿ ಗುರುತುಗೊಳ್ಳಲಿದ್ದು, ಅತಿಕ್ರಮಣ ತಡೆ, ಪರಿಸರ ಸಂರಕ್ಷಣೆ ಹಾಗೂ ಸುಸಜ್ಜಿತ ಮತ್ತು ಸುರಕ್ಷಿತ ಶೈಕ್ಷಣಿಕ ವಾತಾವರಣ ನಿರ್ಮಾಣ ಸಾಧ್ಯವಾಗಲಿದೆ. ●ಡಾ.ಜಯಕರ ಎಸ್.ಎಂ. ಬೆಂಗಳೂರು ವಿವಿ ಕುಲಪತಿ
ರಾಕೇಶ್.ಎನ್.ಎಸ್.

