Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರು ವಿಶ್ವವಿದ್ಯಾಲಯದ 83 ಎಕರೆ ಜಮೀನು ಒತ್ತುವರಿ

ಬೆಂಗಳೂರು ವಿಶ್ವವಿದ್ಯಾಲಯದ 83 ಎಕರೆ ಜಮೀನು ಒತ್ತುವರಿ

ಬೆಂಗಳೂರು: ರಾಜ್ಯದ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಬೆಂಗಳೂರು ವಿಶ್ವವಿದ್ಯಾಲಯ (ಬೆಂವಿವಿ)ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 83 ಎಕರೆ ಜಮೀನು ಒತ್ತುವರಿಯಾಗಿರುವುದು ಪತ್ತೆಯಾಗಿದೆ. ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆ, ಇನ್ನು ಕೆಲ ಸರ್ಕಾರಿ ಸಂಸ್ಥೆಗಳು ಕರಾರು ಮೀರಿ ಹೆಚ್ಚಿನ ಜಾಗವನ್ನು ತನ್ನ ಸ್ವಾಧೀನದಲ್ಲಿರಿಸಿಕೊಂಡಿವೆ.

ದಾಖಲೆಗಳ ಪ್ರಕಾರ ವಿವಿಗೆ ಒಟ್ಟು 1201.23 ಎಕರೆ ಜಮೀನು ಮಂಜೂರು ಆಗಿತ್ತು. ಆದರೆ, ಸರ್ಕಾರದ ಅನುಮತಿಯಂತೆ ಇದುವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಟ್ಟು 25 ಶೈಕ್ಷಣಿಕ ಹಾಗೂ ಇತರ ಸರ್ಕಾರಿ ಸಂಸ್ಥೆಗಳಿಗೆ ಒಟ್ಟು 281.06 ಎಕರೆ ಪ್ರದೇಶವನ್ನು ವಿವಿಯು ದೀರ್ಘಾವಧಿ ಭೋಗ್ಯಕ್ಕೆ ನೀಡಿದೆ. ಆದರೆ, ಈ ಸಂಸ್ಥೆಗಳು ಕರಾರು ಮೀರಿ ವಿವಿಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಸಂಸ್ಥೆಗಳು ಒಟ್ಟು 321.08 ಎಕರೆ ಪ್ರದೇಶವನ್ನು ಉಪಯೋಗಿಸುತ್ತಿವೆ. ಅಂದರೆ ಕರಾರು ಆಗಿರುವ ಅಳತೆಗಿಂತ ಹೆಚ್ಚುವರಿಯಾಗಿ 40 ಎಕರೆಗಳನ್ನು ಸರ್ಕಾರಿ ಸಂಸ್ಥೆಗಳು ಉಪಯೋಗಿಸುತ್ತಿವೆ ಎಂಬುದು ಇತ್ತೀಚೆಗೆ ವಿವಿ ನಡೆಸಿದ ಸಮೀಕ್ಷೆಯಲ್ಲಿ ಪತ್ತೆಯಾಗಿದೆ.

ಹಲವು ಸಂಸ್ಥೆಗಳಿಗೆ ಜಮೀನು ಗುತ್ತಿಗೆ

ಭಾರತೀಯ ಕ್ರೀಡಾ ಪ್ರಾಧಿಕಾರ, ಅನ್ವೇಷಣೆ ಮತ್ತು ಸಂಶೋಧನೆಗಾಗಿನ ಆಟೋಮಿಕ್‌ ಖನಿಜಗಳ ನಿರ್ದೇಶನಾಲಯ, ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್‌ (ನ್ಯಾಕ್‌), ಕೇಂದ್ರೀಯ ಶಿಕ್ಷಣ ಮಂಡಳಿ, ಮೌಲನಾ ಅಜಾದ್‌ ರಾಷ್ಟ್ರೀಯ ಉರ್ದು ವಿವಿ, ಕಲಾ ಗ್ರಾಮ, ಧನ್ವಂತರಿ ವನ, ಸಾಹಿತ್ಯ ಅಕಾಡೆಮಿ, ಬಿಸಿಎಂ ಹಾಸ್ಟೆಲ್‌ಗ‌ಳು ಹೀಗೆ ಹಲವು ಸಂಸ್ಥೆಗಳಿಗೆ ವಿವಿಯು ಭೋಗ್ಯದ ಮೇಲೆ ಜಮೀನು ನೀಡಿದೆ. ಅಳತೆ ಮೀರಿ ಜಮೀನು ಸ್ವಾಧೀನ: ಆದರೆ, ಈ ಪೈಕಿ ಕೆಲ ಸಂಸ್ಥೆಗಳು ಕರಾರಿನ ಅಳತೆ ಮೀರಿ ಜಮೀನನ್ನು ಸ್ವಾಧೀನ ಪಡಿಸಿಕೊಂಡಿವೆ ಎಂದು ವಿವಿಯ ಅಧಿಕಾರಿಗಳು ಹೇಳುತ್ತಾರೆ.

ಕಲಾ ಗ್ರಾಮದ ಬಳಿಯೇ ಕರಾರು ಮೀರಿ 7ರಿಂದ 8 8 ಎಕರೆ ಜಮೀನು ವಶದಲ್ಲಿದೆ. ಇನ್ನೂ ಕೆಲ ಸಂಸ್ಥೆಗಳು ಸಹ ಗುತ್ತಿಗೆ ಪಡೆದಕ್ಕಿಂತ ಹೆಚ್ಚು ಜಮೀನನ್ನು ಬಳಸಿಕೊಳ್ಳತ್ತಿವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಗಣ್ಯರು, ಖಾಸಗಿ ವ್ಯಕ್ತಿಗಳಿಂದಲೂ ಒತ್ತುವರಿ: ಉಳಿದಂತೆ ಸಮಾರು ಒಟ್ಟು 43.24 ಎಕರೆ ಜಮೀನು ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳಿಂದ ಒತ್ತುವರಿಯಾಗಿದೆ. ಕಲಾಗ್ರಾಮದ ಕಡೆ, ಪಂತರಪಾಳ್ಯದ ಕಡೆ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ವ್ಯಕ್ತಿಗಳಿಂದ, ಸಂಘ ಸಂಸ್ಥೆಗಳಿಂದ ಜಮೀನು ಒತ್ತುವರಿಯಾಗಿದೆ. ಖಾಸಗಿ ವ್ಯಕ್ತಿಗಳಾದ ಎನ್‌.ಮೂರ್ತಿ ಎಂಬವರು 3.31 ಎಕರೆ, ಸೂರಪ್ಪ ಫಾರ್ಮರ್ಸ್‌ (ನಾಗರಾಜು) 3.21 ಎಕರೆ, ಪಂಚಜನ್ಯ ವಿದ್ಯಾ ಪೀಠ ಟ್ರಸ್ಟ್‌ 2.37 ಎಕರೆ, ಎನ್‌ ಜಿಇಎಫ್‌ ಅಪಾರ್ಟ್‌ಮೆಂಟ್‌ನಿಂದ 23 ಗುಂಟೆ ಒತ್ತುವರಿ ಮಾಡಿದ್ದಾರೆ ಎಂದು ಭೂ ಕಬಳಿಕೆ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ವಿವಿಯ ಭೂಮಿಯ ಒತ್ತುವರಿಗೆ ಸಂಬಂಧಿ ಸಿದಂತೆ, ದಾಖಲೆಗಳನ್ನು ಕ್ರೋಢೀಕರಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಒಟ್ಟು 33 ಪ್ರಕರಣಗಳನ್ನು ವಿವಿ ದಾಖಲಿಸಿದೆ. ಉಳಿದ ಒತ್ತುವರಿ ಜಮೀನಿಗೆ ಸಂಬಂಧಿಸಿದಂತೆಯೂ ದಾಖಲಾತಿಗಳನ್ನು ಕ್ರೋಢೀಕರಿಸಿ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಲು ವಿವಿ ಪ್ರಯತ್ನ ನಡೆಸುತ್ತಿದೆ.

ಸರ್ಕಾರಿ ಸಂಸ್ಥೆಗಳು ಕರಾರು ಮೀರಿ ವಿವಿಯ ಜಮೀನು ಬಳಸಿಕೊಳ್ಳುತ್ತಿದ್ದ ರೂ ನಮ್ಮ ಮತ್ತು ಅವರ ಮಧ್ಯೆ ಎಷ್ಟು ಜಮೀನು ನೀಡಿದ್ದೇವೆಂಬ ಸ್ಪಷ್ಟ ಒಪ್ಪಂದ ಇರುವ ಕಾರಣ ನಾವು ಸದ್ಯ ಆ ಜಮೀನು ವಶಕ್ಕೆ ಪ್ರಯತ್ನಿಸಿಲ್ಲ. ಖಾಸಗಿ ಒತ್ತುವರಿದಾರರಿಂದ ಜಮೀನು ವಶಕ್ಕೆ ಸಕಲ ಪ್ರಯತ್ನ ನಡೆಸುತ್ತಿದ್ದೇವೆ. ●ಡಾ.ಜಯಕರ ಎಸ್‌ ಎಂ, ಕುಲಪತಿ, ಬೆಂಗಳೂರು

ಜಿಬಿಎ, ರೈಲೆ ಇಲಾಖೆಯಿಂದಲೂ ಒತ್ತುವರಿ ಇನ್ನು ವಿವಿಯ ಜೊತೆ ಭೂ ಬಳಕೆಯ ಬಗ್ಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲದಿದ್ದರೂ ಬಿಡಿಎ ಬಡಾವಣೆ ನಿವಾಸಿಗಳು 2.12 ಎಕರೆ ವಿವಿ ಜಮೀನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಭೂ ಕಬಳಿಕೆ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದೆ. ಜಿಬಿಎಯು 21 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿದ್ದು, ಈ ಬಗ್ಗೆ ಇನ್ನೂ ದೂರು ದಾಖಲಾಗಿಲ್ಲ. ಇನ್ನು ರೈಲೈ ಇಲಾಖೆ 2.21 ಎಕರೆ ಒತ್ತುವರಿ ಮಾಡಿಕೊಂಡಿದ್ದು, ಇಲಾಖೆಗೆ ವಿವಿಯು ಈ ಬಗ್ಗೆ ಪತ್ರ ಬರೆದಿದೆ. ಒಟ್ಟಾರೆ ಒತ್ತುವರಿ ಆಗಿರುವ ಜಮೀನನ್ನು ಮರಳಿ ವಶಕ್ಕೆ ಪಡೆದುಕೊಳ್ಳಲು ವಿವಿ ಕಾರ್ಯತತ್ಪರವಾಗಿದೆ. ಈಗಾಗಲೇ ಖಾಸಗಿಯವರ ವಶದಲ್ಲಿರುವ ಒಟ್ಟು 15.29 ಎಕರೆ ಜಮೀನಿಗೆ ಸಂಬಂಧಿಸಿದಂತೆ ಅಧೀನ ಮತ್ತು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಉಳಿದಂತೆ 19.38 ಎಕರೆ ಜಮೀನಿಗೆ ಸಂಬಂಧಿಸಿದಂತೆ ವ್ಯಾಜ್ಯಗಳಿವೆ ಎಂದು ವಿವಿ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ರಾಕೇಶ್‌. ಎನ್‌.ಎಸ್‌

Dailyhunt
Disclaimer: This content has not been generated, created or edited by Dailyhunt. Publisher: Udayavani