Saturday, 23 Jan, 11.26 pm ಉದಯವಾಣಿ

ಟಾಪ್ 40 ಸುದ್ದಿ
ಭಾರತವನ್ನು ಸೋಲಿಸಲು ಮೈದಾನದಾಚೆಗೂ ಆಸೀಸಿಗರ ಕಿತಾಪತಿ

ಮುಂಬೈ: ಭಾರತೀಯ ಕ್ರಿಕೆಟ್‌ ತಂಡ; ಆಸ್ಟ್ರೇಲಿಯಕ್ಕೆ ಇನ್ನಿಲ್ಲದ ಮುಖಭಂಗ ಉಂಟು ಮಾಡಿ ಸ್ವದೇಶಕ್ಕೆ ಮರಳಿದೆ. ಟೀವಿಯಲ್ಲಿ ಆಟಗಾರರ ಆಟವನ್ನು ನೋಡಿದ ನಮಗೆ, ಅವರು ಸೋತಿದ್ದು, ಗೆದ್ದಿದ್ದು ಮಾತ್ರ ಕಂಡಿದೆ. ಆದರೆ ಟೀವಿಯಲ್ಲಿ ತೋರಿಸದ ಒಂದಷ್ಟು ಸಂಗತಿಗಳಿವೆ. ಗೆಲ್ಲಲು ಆಸ್ಟ್ರೇಲಿಯ ಯಾವ ಮಟ್ಟಕ್ಕೂ ಇಳಿಯಬಹುದು ಎನ್ನುವುದನ್ನು ತಿಳಿಸುವ ಘಟನೆಗಳಿವು. ಅವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಕ್ಷೇತ್ರರಕ್ಷಣೆ ತರಬೇತುದಾರ ಆರ್‌.ಶ್ರೀಧರ್‌ ಮತ್ತು ಸ್ಪಿನ್ನರ್‌ ಆರ್‌.ಅಶ್ವಿ‌ನ್‌.

ನ.10ಕ್ಕೆ ಐಪಿಎಲ್‌ ಮುಗಿಯಿತು. ಭಾರತೀಯ ಆಟಗಾರರು ಆಸ್ಟ್ರೇಲಿಯಕ್ಕೆ ಹೊರಡಲು ಸಿದ್ಧವಾಗುತ್ತಿದ್ದರು. ಸರಿಯಾಗಿ 2 ದಿನಗಳ ಮುನ್ನ ಆಟಗಾರರ ಕುಟುಂಬವನ್ನು ಕರೆತರಲು ಸಾಧ್ಯವಿಲ್ಲವೆಂದು ಆಸೀಸ್‌ ಕ್ರಿಕೆಟ್‌ ಮಂಡಳಿ ತಿಳಿಸಿತು. 7 ಆಟಗಾರರು ತಮ್ಮ ಕುಟುಂಬವನ್ನು ಜೊತೆಗೆ ಹೊಂದಿದ್ದರು. ಇದು ಹೇಗೆ ಸಾಧ್ಯ? ಕೂಡಲೇ ತಂಡದ ತರಬೇತುದಾರ ರವಿಶಾಶಾಸ್ತ್ರೀ ಮಧ್ಯಪ್ರವೇಶಿಸಿದರು. ಅವರು ಬಿಸಿಸಿಐನೊಂದಿಗೆ ಸಭೆ ನಡೆಸಿ, ಕುಟುಂಬವನ್ನು ಜೊತೆಗೊಯ್ಯಲು ಬಿಡದಿದ್ದರೆ, ನಾವ್ಯಾರೂ ಆಸ್ಟ್ರೇಲಿಯಕ್ಕೆ ತೆರಳುವುದಿಲ್ಲ ಎಂದರು. ಅದನ್ನು ಬಿಸಿಸಿಐ, ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿಗೆ ತಿಳಿಸಿತು. ಕೂಡಲೇ ಎಚ್ಚೆತ್ತ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ ರಾತ್ರೋರಾತ್ರಿ ಕುಟುಂಬವನ್ನು ಜೊತೆಗೊಯ್ಯಲು ಅನುಮತಿ ನೀಡಿತು!

ಅಲ್ಲಿಂದಲೇ ಆಸ್ಟ್ರೇಲಿಯ ತಂಡ ಭಾರತೀಯ ತಂಡದೊಂದಿಗೆ ಮಾನಸಿಕ ಯುದ್ಧ ಶುರು ಮಾಡಿತ್ತು ಎನ್ನುವುದು ಶ್ರೀಧರ್‌ ಅಭಿಪ್ರಾಯ. ಇದರ ಬಗ್ಗೆ ರವಿಶಾಸ್ತ್ರೀ ಹೇಳಿದ್ದು ಹೀಗೆ: ನಾನು 40 ವರ್ಷದಿಂದ ಆ ದೇಶಕ್ಕೆ ಹೋಗಿ ಬರುತ್ತಿದ್ದೇನೆ. ಅವರ ಬಗ್ಗೆ ನನಗಿಂತ ಚೆನ್ನಾಗಿ ತಿಳಿದವರಿಲ್ಲ. ಅವರೊಂದಿಗೆ ಹೇಗೆ ಮಾತುಕತೆಯಾಡಬೇಕೆಂದು ನನಗೆ ಚೆನ್ನಾಗಿ ಗೊತ್ತು!

ಭಾರತೀಯರು ಗೆಲ್ಲುತ್ತಿದ್ದಂತೆ ವರಸೆ ಬದಲಿಸಿದ ಆಸೀಸ್‌ :

ಒಂದುಕಡೆ ನಿರಂತರ ಅಣಕವಾಡುತ್ತಿದ್ದ ಆಸ್ಟ್ರೇಲಿಯ ಆಟಗಾರರು, ಮತ್ತೂಂದು ಕಡೆ ಅಲ್ಲಿನ ಕ್ರಿಕೆಟ್‌ ಮಂಡಳಿಯ ನಾಟಕ. ಆರಂಭದಲ್ಲಿ ಭಾರತೀಯರಿಗೆ 14 ದಿನಗಳ ಕ್ವಾರಂಟೈನ್‌ ಮುಗಿಸಿದರೆ ಹೊರಗೆ ಕಾಫಿ ಕುಡಿಯಬಹುದು, ಊಟ ಮಾಡಬಹುದು ಎಂದು ತಿಳಿಸಲಾಗಿತ್ತು. ಭಾರತ ಮೆಲ್ಬರ್ನ್ನಲ್ಲಿ ಗೆದ್ದು, ಸರಣಿ 1-1ರಿಂದ ಸಮಬಲವಾದ ಕೂಡಲೇ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿಯ ವರಸೆ ಬದಲಾಯಿತು. ಭಾರತೀಯರಿಗೆ ಹೋಟೆಲ್‌ ಕೊಠಡಿಯಿಂದ ಹೊರಹೋಗುವಂತಿಲ್ಲವೆಂದು ಆಸೀಸ್‌ ಮಂಡಳಿ ತಿಳಿಸಿತು. ಇದನ್ನು ಒಪ್ಪಲು ಆಟಗಾರರು ಸಿದ್ಧರಿರಲಿಲ್ಲ.

ಇದರ ಬಗ್ಗೆ ಅಶ್ವಿ‌ನ್‌ ವಿವರವಾಗಿ ಮಾತನಾಡಿದ್ದಾರೆ. ಸಿಡ್ನಿಯಲ್ಲಿ ಎರಡೂ ತಂಡಗಳ ಆಟಗಾರರು ಒಂದೇ ಜೈವಿಕ ಸುರಕ್ಷಾ ವಲಯದಲ್ಲಿ ಇದ್ದರೂ, ಇಬ್ಬರನ್ನೂ ನಡೆಸಿಕೊಳ್ಳುವ ರೀತಿಯಲ್ಲಿ ವ್ಯತ್ಯಾಸವಿತ್ತು. ಒಂದು ವೇಳೆ ಆಸ್ಟ್ರೇಲಿಯ ಕ್ರಿಕೆಟಿಗರು ಲಿಫ್ಟ್ನಲ್ಲಿದ್ದರೆ, ಅದಕ್ಕೆ ಭಾರತೀಯರನ್ನು ಸೇರಿಸುತ್ತಿರಲಿಲ್ಲ. ಇದು ತಮ್ಮೆಲ್ಲರಿಗೂ ನೋವು ತರಿಸಿತ್ತು. ಇವೆಲ್ಲ ಅವರ ಕುತಂತ್ರದ ಒಂದು ಭಾಗವೆಂದು ಅಶ್ವಿ‌ನ್‌ ಹೇಳಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top