Dailyhunt Logo
  • Light mode
    Follow system
    Dark mode
    • Play Story
    • App Story
ಭಾರೀ ಮಳೆ: ಜನಜೀವನ ಅಸ್ತವ್ಯಸ್ತ- ಪುಣೆಯ ಶಾಲೆಗಳಿಗೆ ರವಿವಾರದವರೆಗೆ ರಜೆ

ಭಾರೀ ಮಳೆ: ಜನಜೀವನ ಅಸ್ತವ್ಯಸ್ತ- ಪುಣೆಯ ಶಾಲೆಗಳಿಗೆ ರವಿವಾರದವರೆಗೆ ರಜೆ

ಪುಣೆ : ಪುಣೆ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಜಿಲ್ಲೆಯ ಆಳಂದಿ ಮತ್ತು ದೇಹು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವುದರಿಂದ, ವಾರ್ಕರಿ (ವಿಠಲ ಭಕ್ತರು) ಸಮುದಾಯದವರಿಗೆ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಪುಣೆ ಮಹಾನಗರ ಪಾಲಿಕೆಯ 101 ಶಾಲೆಗಳಿಗೆ ಮಂಗಳವಾರದಿಂದ ರವಿವಾರದವರೆಗೆ ರಜೆ ಘೋಷಿಸಲಾಗಿದೆ.

ಆದರೆ, ಈ ಅವಧಿಯಲ್ಲಿ ಪಾಲಿಕೆಯ ಇತರ ಶಾಲೆಗಳು, ನಗರದ ಎಲ್ಲ ಖಾಸಗಿ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಪುಣೆ ಮಹಾನಗರ ಪಾಲಿಕೆಯ ಮೇಯರ್‌ ಮಂಜುಷಾ ನಾಗಪುರೆ ಸ್ಪಷ್ಟಪಡಿಸಿದ್ದಾರೆ.

ದೇಹು-ಆಳಂದಿಯಲ್ಲಿ ಹೈ-ಅಲರ್ಟ್‌

ಹವಾಮಾನ ಇಲಾಖೆಯು ದೇಹು ಮತ್ತು ಆಳಂದಿ ಭಾಗದಲ್ಲಿ ಅತ್ಯಂತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಸದ್ಯ ಸುರಿಯುತ್ತಿರುವ ಮಳೆಗೆ ಇಂದ್ರಯಾಣಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಗೆ ಅಡ್ಡಲಾಗಿ ಕಟ್ಟಲಾದ ಪ್ರಮುಖ ನಾಲ್ಕು ಸೇತುವೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಇದರಿಂದಾಗಿ ದೇಹು-ಆಳಂದಿ ಭಾಗದಲ್ಲಿ ಸಂಪೂರ್ಣ ಸಂಚಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರ ಸಂಚಾರಕ್ಕೆ ಭಾರಿ ಸಮಸ್ಯೆಯಾಗಿದೆ.

ವಾರ್ಕರಿಗಳಿಗೆ ಸಿಎಂ ಫಡ್ನವೀಸ್‌ ಮನವಿ

ಮುಂಬಯಿ: "ರಾಜ್ಯದಲ್ಲಿ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ಸರಕಾರ ನಿರಂತರವಾಗಿ ಗಮನಿಸುತ್ತಿದೆ. ಆಷಾಢ ಪಲ್ಲಕ್ಕಿ ಉತ್ಸವದ ಸಮಯದಲ್ಲಿ ವಾರ್ಕರಿ ಭಕ್ತರು ತಮ್ಮ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಇಂದ್ರಯಾಣಿ ನದಿ ತುಂಬಿ ಹರಿಯುತ್ತಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸದಂತೆ ತಡೆಯಲು ಭಕ್ತರು ಜಿಲ್ಲಾಡಳಿತದೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು' ಎಂದು ಸಿಎಂ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ.

ನೇರವಾಗಿ ಪುಣೆಗೆ ಬನ್ನಿ

ಪ್ರಸಿದ್ಧ ಸಂತ ಜ್ಞಾನೇಶ್ವರ ಮತ್ತು ಸಂತ ತುಕಾರಾಂ ಮಹಾರಾಜರ ಪಲ್ಲಕ್ಕಿ ಸಮಾರಂಭವು ಜು. 10 ರಂದು ಪುಣೆ ನಗರವನ್ನು ಪ್ರವೇಶಿಸಲಿದೆ. ಪ್ರಸ್ತುತ ಅಲ್ಲಿನ ವಿಷಮ ಪರಿಸ್ಥಿತಿಯನ್ನು ಗಮನಿಸಿದರೆ ದೇಹು ಅಥವಾ ಆಳಂದಿಗೆ ಭೇಟಿ ನೀಡುವುದು ಅತ್ಯಂತ ಅಪಾಯಕಾರಿಯಾಗಿದೆ. ಆದ್ದರಿಂದ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಳಂದಿ ಮತ್ತು ದೇಹುನಲ್ಲಿ ಜಮಾಯಿಸುವ ಬದಲು ನೇರವಾಗಿ ಪುಣೆಗೆ ಆಗಮಿಸಬೇಕು ಎಂದು ಮುಖ್ಯ ಮಂತ್ರಿಗಳು ಕೋರಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani