ಭಟ್ಕಳ: ಟಿಪ್ಪರ್ ಲಾರಿ ಹಾಗೂ ಆಟೋ ರಿಕ್ಷಾ ಡಿಕ್ಕಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಫಿರ್ಧೋಸ ನಗರದಲ್ಲಿ ನಡೆದಿದೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಿನಗರದ ಜಾಲಿ ಕ್ವಾಟ್ರ‍್ರಸ್ ನಿವಾಸಿ ಮೊಹಮ್ಮದ್ ಮರ್ಧಾನ್ (25) ಹಲ್ಲೆಗೆ ಒಳಗಾದ ಟಿಪ್ಪರ್ ಚಾಲಕ ಎಂದು ಗುರುತಿಸಲಾಗಿದೆ.
ಬದ್ರಿಯಾ ಕಾಲೋನಿಯ ಅಬ್ದುಲ್ ಬಾಸಿತ್ (29) ಮತ್ತು ಅಬ್ದುಲ್ ಮಾಜೀದ್ (32) ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
ಏಪ್ರಿಲ್ ೨ರಂದು ಸಂಜೆ ವೇಳೆ ಫಿರ್ಧೋಸ ನಗರದ ಕೋಳಿ ಫಾರ್ಮ್ ಹತ್ತಿರ ಘಟನೆ ನಡೆದಿದೆ. ಟಿಪ್ಪರ್ ಲಾರಿಯನ್ನು ಫಿರ್ಧೋಸ ನಗರದಿಂದ ಬೆಂಡೆಖಾನ್ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ, ಅಬ್ದುಲ್ ಮಾಜೀದ್ ಚಾಲನೆ ಮಾಡುತ್ತಿದ್ದ ಆಟೋ ರಿಕ್ಷಾ ಏಕಾಏಕಿ ಬಲಭಾಗಕ್ಕೆ ತಿರುಗಿ ಟಿಪ್ಪರ್ ಲಾರಿಗೆ ಹಿಂಬದಿ ಬಲಭಾಗದಲ್ಲಿ ತಗುಲಿದುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಕೆರಳಿದ ಆರೋಪಿಗಳು ಟಿಪ್ಪರ್ ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಲಾರಿಯ ಶೋ ಗ್ಲಾಸ್ ಒಡೆದು, ಬಂಪರ್‌ಗೆ ಹಾನಿ ಮಾಡಿದ್ದು, ಬಾಗಿಲು ಎಳೆದಾಡಿ ಹಾನಿಗೊಳಿಸಿದ್ದಾರೆ, ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

