Dailyhunt
'ಬಿಎಸ್‌ವೈ ಅಭಿಮಾನೋತ್ಸವ' ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ: ಬಿ.ವೈ.ವಿಜಯೇಂದ್ರ

'ಬಿಎಸ್‌ವೈ ಅಭಿಮಾನೋತ್ಸವ' ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ: ಬಿ.ವೈ.ವಿಜಯೇಂದ್ರ

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕಾರಣಕ್ಕೆ 5 ದಶಕಗಳು ತುಂಬಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ 'ಬಿಎಸ್‌ವೈ ಅಭಿಮಾನೋತ್ಸವ' ಕಾರ್ಯಕ್ರಮ ಚಿತ್ರದುರ್ಗದಲ್ಲಿ ಮೇ 9ರಂದು ಮಧ್ಯಾಹ್ನ 2 ರಿಂದ ಸಂಜೆ 5ಗಂಟೆವರೆಗೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.

ವಿಜಯೇಂದ್ರ ತಿಳಿಸಿದರು.

ಬುಧವಾರ 'ಅಭಿಮಾನೋತ್ಸವ'ದ ಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 9ರಂದು ಬೆಳಗ್ಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮವಿದೆ. ಆದ್ದರಿಂದ 'ಅಭಿಮಾನೋತ್ಸವ' ಬೆಳಗ್ಗೆ ಬದಲಾಗಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. 3.45ರ ವೇಳೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ ಎಂದರು.

ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ಭರದ ಸಿದ್ಧತೆ ನಡೆದಿದ್ದು 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸಲಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಗೆ ಹೋಗಿ ಸ್ವಾಮೀಜಿಗಳಿಗೆ ಆಮಂತ್ರಣ ಪತ್ರ ನೀಡಲು ಯೋಜಿಸಿದ್ದೆವು. ಆದರೆ, ಸಮಯದ ಅಭಾವದಿಂದ ಎಲ್ಲರ ಭೇಟಿ ಸಾಧ್ಯವಾಗಿಲ್ಲ. ನಾಡಿನ ಎಲ್ಲ ಹರಗುರು ಚರಮೂರ್ತಿಗಳು, ಮಠಾಧೀಶರು, ಸ್ವಾಮೀಜಿಗಳು ಈ ಐತಿಹಾಸಿಕ ಅಭಿಮಾನೋತ್ಸವದಲ್ಲಿ ಪಾಲ್ಗೊಂಡು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

10 ಸಾವಿರ ಬಸ್‌, 50 ಸಾವಿರ ಕಾರು:
ಬಿಎಸ್‌ವೈ ಅಭಿಮಾನೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಲು 10 ಸಾವಿರ ಬಸ್‍ಗಳನ್ನು ಬುಕ್ ಮಾಡಲಾಗಿದೆ. 45 ರಿಂದ 50 ಸಾವಿರ ಕಾರು ಮತ್ತಿತರ ನಾಲ್ಕು ಚಕ್ರದ ವಾಹನಗಳು ಬರಲಿವೆ. ನಮ್ಮ ನಿರೀಕ್ಷೆಗೂ ಮೀರಿ ಸ್ಪಂದನೆ ಲಭಿಸುತ್ತಿದೆ ಎಂದರು.

2 ಗ್ರಂಥ ಲೋಕಾರ್ಪಣೆ:
ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸಮಾಜಸೇವೆ, ಜೀವನ ಚರಿತ್ರೆಯನ್ನು ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಸಾಂಸ್ಕೃತಿಕ ಹಬ್ಬದಂತೆ ಆಚರಿಸಲು ನಿರ್ಧರಿಸಿದ್ದೇವೆ. ಬಿಎಸ್‌ವೈ ಅವರ ಜೀವನಚರಿತ್ರೆ ಮತ್ತು ಸದನದಲ್ಲಿ ಯಡಿಯೂರಪ್ಪನವರು ಎಂಬ ಕುರಿತು 'ಕೆಂದಾವರೆ- ಕಮಲದಲ್ಲಿ ಅರಳಿದ ಹೂ', 'ಸದನದಲ್ಲಿ ಶಿಕಾರಿ' ಎಂಬ ಎರಡು ಗ್ರಂಥಗಳನ್ನು ಅಂದು ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ ಕಾರಜೋಳ ತಿಳಿಸಿದರು.

ಮೇ 8ರಂದು ಸಂಜೆ ಯಡಿಯೂರಪ್ಪನವರ ಪುರ ಪ್ರವೇಶ ನಡೆಯಲಿದೆ. 24 ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ. ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಾಜಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಎಸ್‌.ಕೆ.ಬಸವರಾಜನ್‌, ಹಿಂದುಳಿದ ಮೋರ್ಚಾದ ರಘು ಕೌಟಿಲ್ಯ, ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ ರಾವ್, ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಮುಖಂಡರಾದ ಎಸ್‌. ಲಿಂಗಮೂರ್ತಿ, ಸಂಪತ್ ಕುಮಾರ್, ಸೌಭಾಗ್ಯ ಬಸವರಾಜನ್, ಲೋಕೇಶ್, ನಾಗರಾಜ್, ಸೋಮೇಂದ್ರ, ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಯಶವಂತ ಇತರರು ಇದ್ದರು.

ಪುರ ಪ್ರವೇಶದಲ್ಲಿ ನವಧಾನ್ಯಗಳ ಪೂಜೆ
ಬಿ.ಎಸ್‌.ಯಡಿಯೂರಪ್ಪ ಪುರಪ್ರವೇಶ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ರೈತ ಮೋರ್ಚಾದಿಂದ ನಗರದ ಹೊಳಲ್ಕೆರೆ ರಸ್ತೆಯ ಚಂದ್ರವಳ್ಳಿ ಮೈದಾನದಲ್ಲಿ ನವಧಾನ್ಯಗಳ ರಾಶಿ ಹಾಕಿ ಅಲ್ಲಿ ಯಡಿಯೂರಪ್ಪ ಅವರಿಂದ ಪೂಜೆ ಸಲ್ಲಿಸಿ ನಂತರ ಪುರಪ್ರವೇಶ ಮಾಡಿಸಲಾಗುವುದು ಎಂದು ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್‌ 'ಉದಯವಾಣಿ'ಗೆ ತಿಳಿಸಿದ್ದಾರೆ.

ಬೆಳ್ಳಿ ಸಾರೋಟಿನಲ್ಲಿ ಯಡಿಯೂರಪ್ಪ ಒಬ್ಬರು ಮಾತ್ರ ಆಸೀನರಾಗಲಿದ್ದು, ಚಂದ್ರವಳ್ಳಿ ಕ್ರಾಸ್‌ನಿಂದ ಹೊಳಲ್ಕೆರೆ ರಸ್ತೆ ಮಾರ್ಗವಾಗಿ ಕನಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಅಂಬೇಡ್ಕರ್‌ ವೃತ್ತದ ಮೂಲಕ ಮದಕರಿ ನಾಯಕ ವೃತ್ತದವರೆಗೆ ಮೆರವಣಿಗೆ ಸಾಗಲಿದೆ. ಮೆರವಣಿಗೆಯಲ್ಲಿ ಹತ್ತಾರು ಕಲಾ ತಂಡಗಳು, ಟ್ಯಾಬ್ಲೋಗಳು, ನೂರಾರು ಕಲಾವಿದರು ಹಾಗೂ ಯಡಿಯೂರಪ್ಪ ಅವರ ಸಹಸ್ರಾರು ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಭಿಮಾನೋತ್ಸವ ಪಕ್ಷಾತೀತ ಕಾರ್ಯಕ್ರಮ: ಯಡಿಯೂರಪ್ಪ
ಬೆಂಗಳೂರು: ಕಾರ್ಯಕರ್ತರು ನನ್ನ ಮೇಲೆ ಅಭಿಮಾನದೊಂದಿಗೆ ಶ್ರಮಪಟ್ಟು ಚಿತ್ರದುರ್ಗದಲ್ಲಿ ಅಭಿಮಾನೋತ್ಸವ ಆಚರಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. ಪಕ್ಷಾತೀತವಾಗಿ ನೂರಾರು ಸ್ವಾಮೀಜಿಗಳು, ಅನೇಕ ಹಿರಿಯರನ್ನು ಕರೆದು ಸಂಭ್ರಮಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂದು ಬರುತ್ತಿರುವುದು ಬಹಳ ವಿಶೇಷ. ಇದು ಅಭೂತಪೂರ್ವ ಕಾರ್ಯಕ್ರಮವಾಗಲಿದೆ ಎಂದರು.

ಪಕ್ಷ ಸಂಘಟನೆ ಕುರಿತ ಪ್ರಶ್ನೆಗೆ ಉತ್ತರಿಸಿ, ಮುಂದಿನ ದಿನಗಳಲ್ಲಿ ವಾರಕ್ಕೆ ಒಂದು ದಿನ ಒಂದೊಂದು ಜಿಲ್ಲೆಗೆ ತೆರಳಿ ಪಕ್ಷವನ್ನು ಬಲಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಜೀವರಾಜ್‌ ಅವರನ್ನು ಗೆಲ್ಲಿಸಿದ ಶೃಂಗೇರಿಯ ಜನರಿಗೆ ಅಭಿನಂದನೆ ಸಲ್ಲಿಸುವೆ. ಬರುವ ದಿನಗಳಲ್ಲಿ ಜೀವರಾಜ್ ಇನ್ನೂ ಶಕ್ತಿಯುತವಾಗಿ ಬೆಳೆಯಲಿ ಎಂದು ಆಶಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Udayavani