Dailyhunt Logo
  • Light mode
    Follow system
    Dark mode
    • Play Story
    • App Story
ಬಿಹಾರ ಉಪಚುನಾವಣೆ: ಬ್ಯಾಂಕಿಪುರ ವಿಧಾನಸಭಾ ಕ್ಷೇತ್ರದಿಂದ ಪ್ರಶಾಂತ್ ಕಿಶೋರ್ ಸ್ಪರ್ಧೆ!

ಬಿಹಾರ ಉಪಚುನಾವಣೆ: ಬ್ಯಾಂಕಿಪುರ ವಿಧಾನಸಭಾ ಕ್ಷೇತ್ರದಿಂದ ಪ್ರಶಾಂತ್ ಕಿಶೋರ್ ಸ್ಪರ್ಧೆ!

ಟ್ನಾ: ಬಿಹಾರ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಜುಲೈ 30 ರಂದು ನಡೆಯಲಿರುವ ಬ್ಯಾಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ 'ಜನ್ ಸುರಾಜ್ ಪಕ್ಷ'ದ (Jan Suraaj Party) ಅಭ್ಯರ್ಥಿಯಾಗಿ ಖ್ಯಾತ ರಾಜಕೀಯ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಕಣಕ್ಕಿಳಿಯಲಿದ್ದಾರೆ.

ಭಾನುವಾರ ನಡೆದ ಪಕ್ಷದ ಪ್ರಮುಖ ಕೋರ್ ಕಮಿಟಿ ಸಭೆಯ ಬಳಿಕ ಜನ್ ಸುರಾಜ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮನೋಜ್ ಭಾರ್ತಿ ಅವರು ಈ ಅಧಿಕೃತ ಘೋಷಣೆ ಮಾಡಿದ್ದಾರೆ.

ಬ್ಯಾಂಕಿಪುರ ವಿಧಾನಸಭಾ ಕ್ಷೇತ್ರಕ್ಕೆ ಜುಲೈ 30 ರಂದು ಮತದಾನ ನಡೆಯಲಿದ್ದು, ಆಗಸ್ಟ್ 3 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಜುಲೈ 13 ಕೊನೆಯ ದಿನವಾಗಿದೆ. ಪ್ರಶಾಂತ್ ಕಿಶೋರ್ ಅವರ ಸ್ಪರ್ಧೆಯಿಂದಾಗಿ ಈ ಕ್ಷೇತ್ರದ ಚುನಾವಣಾ ಕಣ ಈಗ ಅತ್ಯಂತ ರೋಚಕ ಹಂತ ತಲುಪಿದೆ. ಇನ್ನು ಜನತಾ ಜನಶಕ್ತಿ ದಳ (JJD) ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್ ಅವರು ಈಗಾಗಲೇ ಈ ಕ್ಷೇತ್ರದಿಂದ ಖ್ಯಾತ ಸಾಮಾಜಿಕ ಕಾರ್ಯಕರ್ತೆ ವೀಣಾ ಮಾನ್ವಿ ಅವರನ್ನು ತಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ.

ಬಿಜೆಪಿಯ ಪ್ರಮುಖ ನಾಯಕರಾಗಿದ್ದ ನಿತಿನ್ ನವೀನ್ ಅವರು ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಬ್ಯಾಂಕಿಪುರ ಕ್ಷೇತ್ರವು ತೆರವಾಗಿದ್ದು, ಉಪಚುನಾವಣೆ ಎದುರಾಗಿದೆ. ಬ್ಯಾಂಕಿಪುರ ಕ್ಷೇತ್ರವು ಸಾಂಪ್ರದಾಯಿಕವಾಗಿ ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿದೆ. ಬಿಜೆಪಿ ಈ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸದಿದ್ದರೂ, ಪಕ್ಷದ ಪ್ರಮುಖ ನಾಯಕರಾದ ಅಜಯ್ ಅಲೋಕ್, ನೀಲ್ ರತನ್ ಘೋಷ್ ಮತ್ತು ಅಜಿತ್ ಕುಮಾರ್ ಲಾಲಿ ಅವರ ಹೆಸರುಗಳನ್ನು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷವು ಸ್ಪರ್ಧಿಸಿದರೂ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ಖುದ್ದೂ ಪ್ರಶಾಂತ್ ಕಿಶೋರ್ ಅವರೇ ಚುನಾವಣಾ ಕಣಕ್ಕೆ ಧುಮುಕುತ್ತಿರುವುದರಿಂದ, ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿ ಖಾತೆ ತೆರೆಯಲು ಜನ್ ಸುರಾಜ್ ಪಕ್ಷ ಭರ್ಜರಿ ತಂತ್ರ ರೂಪಿಸುತ್ತಿದೆ. ಪ್ರಶಾಂತ್ ಕಿಶೋರ್ ಅವರ ಈ ನಡೆ ಬಿಹಾರದ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani