ಬೆಂಗಳೂರು: ಈ ತಿಂಗಳಾಂತ್ಯಕ್ಕೆ ಬಿಜೆಪಿ ಸಂಸದೀಯ ಮಂಡಳಿ ಪರಿಷ್ಕರಣೆ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿಯಿಂದ ಕೈಬಿಡುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.
ನಿತಿನ್ ನವೀನ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ತಮ್ಮ ತಂಡವನ್ನು ಈಗಾಗಲೇ ಬದಲಾಯಿಸಿದ್ದಾರೆ.
ಕರ್ನಾಟಕದ ಮ.ನಾಗರಾಜ್ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಬಿ.ಎಲ್.ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ. ಇಡೀ ರಾಷ್ಟ್ರಕ್ಕೆ ಅನ್ವಯವಾಗುವಂತೆ ಹೊಸ ಮುಖಗಳನ್ನು ಪಕ್ಷದ ಸಂಘಟನಾ ವ್ಯವಸ್ಥೆಯೊಳಕ್ಕೆ ತರುವುದಕ್ಕೆ ಬಿಜೆಪಿ ಪ್ರಯತ್ನ ನಡೆಸುತ್ತಿರುವುದರಿಂದ ಯಡಿಯೂರಪ್ಪ ಸೇರಿದಂತೆ ಸಂಸದೀಯ ಮಂಡಳಿಯಲ್ಲಿನ ಹಳೆಯ ತಲೆಗಳಿಗೆ 'ವಿಶ್ರಾಂತಿ' ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪರೋಕ್ಷ ಸಂದೇಶ ರವಾನೆ?
ಬದಲಾದ ಪರಿಸ್ಥಿತಿಯಲ್ಲಿ ದೇಶವ್ಯಾಪಿ ಪಕ್ಷದ ನಿಲುವುಗಳನ್ನು ಬದಲಾಯಿಸಿಕೊಳ್ಳುತ್ತಿರುವುದರಿಂದ ಹೊಸ ಚಿಂತನೆಗೆ ಅವಕಾಶ ಮಾಡಿಕೊಡಲು ಬಿಜೆಪಿ ನಿರ್ಧರಿಸಿದೆ. ಹೀಗಾಗಿ ಹಿರಿಯರಾದ ಯಡಿಯೂರಪ್ಪನವರು ಸ್ಥಾನ ಕಳೆದುಕೊಳ್ಳುವುದು ನಿಶ್ಚಿತ ಎನ್ನಲಾಗಿದ್ದು, ಈ ಬಗ್ಗೆ ಪರೋಕ್ಷ ಸಂದೇಶವೂ ರವಾನೆಯಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಸಂಸದೀಯ ಮಂಡಳಿ ಬಿಜೆಪಿಯ ಪರಮೋಚ್ಛ ಸಂಸ್ಥೆ:
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿದ ನಂತರ ಅವರಿಗೆ ಸಂಸದೀಯ ಮಂಡಳಿ ಸದಸ್ಯ ಸ್ಥಾನ ನೀಡಲಾಗಿತ್ತು. ಇದು ಬಿಜೆಪಿಯ ಪರಮೋಚ್ಚ ಸಂಸ್ಥೆಗಳಲ್ಲಿ ಒಂದಾಗಿದ್ದು, ಲೋಕಸಭೆ ಸೇರಿದಂತೆ ಎಲ್ಲ ರಾಜ್ಯಗಳ ಟಿಕೆಟ್ ಹಂಚಿಕೆಯೂ ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ರಾಜ್ಯ ವಿಧಾನಸಭೆ, ಲೋಕಸಭೆ ಹಾಗೂ ಕೆಲ ರಾಜ್ಯಗಳ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಯಡಿಯೂರಪ್ಪ ಈ ಸಭೆಯನ್ನು ಪ್ರತಿನಿಧಿಸಿದ್ದರು.

