ಹೊಸದಿಲ್ಲಿ: ಅಕ್ಟೋಬರ್‌ನಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ಬ್ರಝಿಲ್ ವಿರುದ್ಧ ನಡೆಯಲಿರುವ ಹೈಪ್ರೊಫೈಲ್ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯಕ್ಕೆ ಸಜ್ಜಾಗುವ ಉದ್ದೇಶದಿಂದ ಭಾರತೀಯ ಫುಟ್‌ಬಾಲ್ ತಂಡವು ಮುಂಬರುವ ಫಿಫಾ ಆಸಿಯಾನ್ ಕಪ್ ಟೂರ್ನಿಯಿಂದ ಹಿಂದೆ ಸರಿದಿದೆ.
ಈ ಕುರಿತು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಉಪ ಪ್ರಧಾನ ಕಾರ್ಯದರ್ಶಿ ಎಂ. ಸತ್ಯನಾರಾಯಣ್ ಗುರುವಾರ ಖಚಿತಪಡಿಸಿದ್ದಾರೆ. ಕೋಲ್ಕತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಅ. 3 ರಂದು ಬ್ರಝಿಲ್ ವಿರುದ್ಧದ ಪಂದ್ಯ ನಿಗದಿಯಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಐಎಸ್‌ಎಲ್ ಪ್ರಸಾರ ಹಕ್ಕಿಗೆ ಒಂದೇ ಬಿಡ್
ಇನ್ನೊಂದೆಡೆ, ಸೆ. 4 ರಿಂದ ಆರಂಭವಾಗಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಮಾಧ್ಯಮ ಪ್ರಸಾರ ಹಕ್ಕಿನ ಹರಾಜಿಗೆ ಕೇವಲ ಒಂದೇ ಬಿಡ್ ಸಲ್ಲಿಕೆಯಾಗಿದೆ. ಟಿವಿ ವಾಹಿನಿ ಹೊಂದಿಲ್ಲದ ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ 'ಫ್ಯಾನ್ ಕೋಡ್' ಒಂದೇ ಬಿಡ್ ಸಲ್ಲಿಸಿರುವುದರಿಂದ, ಅಭಿಮಾನಿಗಳಿಗೆ ಲೀಗ್ ತಲುಪಿಸಲು ಎಐಎಫ್‌ಎಫ್ ಟಿವಿ ಪ್ರಸಾರಕ್ಕಾಗಿ ಉಪ-ಪರವಾನಿಗೆ ನೀಡುವ ಸಾಧ್ಯತೆಯಿದೆ.

