Sunday, 02 Aug, 6.58 am ಉದಯವಾಣಿ

ಟಾಪ್ 10 ಸುದ್ದಿ
ಚರ್ಚೆಗೆ ಗ್ರಾಸವಾದ ಯಡಿಯೂರಪ್ಪ ರಾತ್ರಿ ಸಭೆ

ಬೆಂಗಳೂರು: ರಾಜ್ಯ ಸರಕಾರ ವರ್ಷ ಪೂರೈಸಿದ ಬೆನ್ನಲ್ಲೇ ಬಿಜೆಪಿಯ ಕೆಲವು ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಹಿರಿಯ ಸಚಿವರು ಸಹಿತ ಕೆಲ ಶಾಸಕರೊಂದಿಗೆ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ ಆವರಣದಲ್ಲಿ ಇತ್ತೀಚೆಗೆ ರಾತ್ರಿ ನಡೆದಿದ್ದ ಸಭೆಯಲ್ಲಿ ಹಿರಿಯ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್‌.ಅಶೋಕ್‌, ವಿ.ಸೋಮಣ್ಣ ಸೇರಿ ಹಲವು ಶಾಸಕರೂ ಪಾಲ್ಗೊಂಡಿದ್ದು, ಹಲವು ಶಾಸಕರಿಗೆ ಅಲ್ಲಿಂದಲೇ ದೂರವಾಣಿ ಕರೆ ಮಾಡಿದ ಯಡಿಯೂರಪ್ಪ, ಏನೇ ಸಮಸ್ಯೆ ಇದ್ದರೂ ನೇರವಾಗಿ ನನ್ನನ್ನು ಭೇಟಿಯಾಗಬಹುದು. ಕ್ಷೇತ್ರದ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಆರ್ಥಿಕ ಇತಿಮಿತಿಯಲ್ಲಿ ಅನುದಾನ ಒದಗಿಸಲಾಗುವುದು ಎಂದು ಅಭಯ ನೀಡಿದ್ದಾರೆ ಎಂದು ಹೇಳಲಾಗಿದೆ.

ವರ್ಷವಿಡೀ ಸರಣಿ ಸವಾಲುಗಳೇ ಎದುರಾಗಿದ್ದರಿಂದ ಅನುದಾನ ಹಂಚಿಕೆಯಲ್ಲಿ ತುಸು ವ್ಯತ್ಯಯವಾಗಿರಬಹುದು. ಮುಂದಿನ ದಿನಗಳಲ್ಲಿ ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸವಾಗದಂತೆ ಕ್ರಮ ವಹಿಸಲಾಗುವುದು. ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಸರಕಾರ ಹಾಗೂ ಪಕ್ಷದ ವರ್ಚಸ್ಸು ಹೆಚ್ಚಿಸಲು ಶ್ರಮಿಸಬೇಕು. ತಮಗೆ ಅಗತ್ಯವಿರುವ ಎಲ್ಲ ರೀತಿಯ ನೆರವು, ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು ಎನ್ನಲಾಗಿದೆ.

ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ಶಾಸಕರಾದ ಬೆಳ್ಳಿ ಪ್ರಕಾಶ್‌, ಅಪ್ಪಚ್ಚು ರಂಜನ್‌, ಹರೀಶ್‌ ಪೂಂಜ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲಾದವರು ಭಾಗವಹಿಸಿದ್ದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವು ಶಾಸಕರು ‘ಉದಯವಾಣಿ’ಯೊಂದಿಗೆ ಮಾತನಾಡಿ, ಸಿಎಂ ಸಮ್ಮುಖದಲ್ಲಿ ಅನೌಪಚಾರಿಕವಾಗಿ ಕ್ಷೇತ್ರದ ಕೆಲಸ- ಕಾರ್ಯಗಳು, ಅಭಿವೃದ್ಧಿ ಯೋಜನೆಗಳು, ಕೊರೊನಾ ನಿಯಂತ್ರಣ ಕ್ರಮಗಳ ಕುರಿತು ಸಮಾಲೋಚಿಸಲಾಯಿತು. ರಾಜಕೀಯ ಚರ್ಚೆ ನಡೆಸಲಿಲ್ಲ ಎಂದು ಹೇಳಿದರು. ಆದರೆ ಯಾರೊಬ್ಬರೂ ಸಭೆಯ ಮೂಲ ಉದ್ದೇಶ ಏನು ಎಂಬ ಗುಟ್ಟು ಬಿಟ್ಟುಕೊಡದಿರುವುದು ಕುತೂಹಲಕ್ಕೆ ಕಾರಣವಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top