Dailyhunt Logo
  • Light mode
    Follow system
    Dark mode
    • Play Story
    • App Story
ಚರ್ಮ ಬೆಳಗುವ ಕ್ರೀಮ್‌ಗಳಿಂದ ಮೂತ್ರಪಿಂಡಕ್ಕೆ ಅಪಾಯ; ಕೆಲವು ಆತಂಕಕಾರಿ ಪ್ರಕರಣಗಳು

ಚರ್ಮ ಬೆಳಗುವ ಕ್ರೀಮ್‌ಗಳಿಂದ ಮೂತ್ರಪಿಂಡಕ್ಕೆ ಅಪಾಯ; ಕೆಲವು ಆತಂಕಕಾರಿ ಪ್ರಕರಣಗಳು

ಕೆಲವು ಚರ್ಮವನ್ನು ಬೆಳಗಿಸುವ ಉತ್ಪನ್ನಗಳಲ್ಲಿ ಅಡಗಿರುವ ಪಾದರಸವು (Mercury) ತೀವ್ರ ಸ್ವರೂಪದ ಮೂತ್ರಪಿಂಡ ಕಾಯಿಲೆಗೆ ಕಾರಣವಾಗಬಹುದು; ಮಂಗಳೂರಿನಲ್ಲಿ ಮೂವರು ಯುವ ರೋಗಿಗಳಿಗೆ ಹೀಗಾಗಿರುವ ಉದಾಹರಣೆ ನಮ್ಮ ಮುಂದೆ ಇದೆ.

ಹೆಚ್ಚು ಪ್ರಕಾಶಮಾನವಾದ ಅಥವಾ ಬಿಳಿಯಾದ ಚರ್ಮವನ್ನು ಪಡೆಯಬೇಕೆಂಬ ಬಯಕೆಯು ಅನಿರೀಕ್ಷಿತ ಹಾನಿಗೆ ಕಾರಣವಾಗಬಹುದು.

ಕೆಲವು ಚರ್ಮವನ್ನು ಬಿಳಿಯಾಗಿಸುವ ಅಥವಾ ಫೇರ್‌ನೆಸ್‌ ಕ್ರೀಮ್‌ಗಳು ಪಾದರಸವನ್ನು ಒಳಗೊಂಡಂತೆ ಅಪಾಯಕಾರಿ ವಸ್ತುಗಳನ್ನು ಹೊಂದಿರಬಹುದು. ಇವು ಚರ್ಮದ ಮೂಲಕ ದೇಹದೊಳಗೆ ಹೀರಿಕೊಳ್ಳಲ್ಪಟ್ಟು, ಚರ್ಮಕ್ಕಿಂತ ಬಹಳ ದೂರದಲ್ಲಿರುವ ಮೂತ್ರಪಿಂಡಗಳಂತಹ ಆಂತರಿಕ ಅಂಗಗಳ ಮೇಲೆಯೂ ಗಂಭೀರ ಪರಿಣಾಮ ಬೀರಬಹುದು.

ಮಂಗಳೂರಿನಲ್ಲಿ ವರದಿಯಾದ ಮೂರು ವೈದ್ಯಕೀಯ ಪ್ರಕರಣಗಳು ಈ ಪ್ರಮುಖ ಹಾಗೂ ತಡೆಗಟ್ಟಬಹುದಾದ ಆರೋಗ್ಯ ಸಮಸ್ಯೆಯನ್ನು ಬೆಳಕಿಗೆ ತಂದಿವೆ. ಈ ಮೂರೂ ಪ್ರಕರಣಗಳು ಯುವ ರೋಗಿಗಳಾಗಿದ್ದು, ಗಂಭೀರ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕೂಲಂಕಷವಾಗಿ ಪರೀಕ್ಷಿಸಿ, ರೋಗ ಇತಿಹಾಸವನ್ನು ಕಲೆ ಹಾಕಿದಾಗ ಈ ಅಂಶ ಸಾಬೀತಾಯಿತು.

ಈ ಮೂವರೂ ಚರ್ಮ ಬೆಳಗಿಸುವ ಕ್ರೀಮ್‌ಗಳನ್ನು ಬಳಸಿದ ಇತಿಹಾಸವನ್ನು ಹೊಂದಿದ್ದರು. ಅವರು ಬಳಸಿದ ಕ್ರೀಮ್‌ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಅವುಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಪಾದರಸ ಇರುವುದು ಪತ್ತೆಯಾಯಿತು.

ಈ ಮೂಲ ಪ್ರಕರಣಗಳ ಸರಣಿಯು, ಮೂವರೂ ರೋಗಿಗಳು ಸೌಂದರ್ಯ ವರ್ಧಕ ಕ್ರೀಮ್‌ಗಳ ಬಳಕೆಯಿಂದಾಗಿ ʼನೆಫ್ರೋಟಿಕ್‌ ಸಿಂಡ್ರೋಮ್‌' (Nephrotic Syndrome) ಎಂಬ ಮೂತ್ರಪಿಂಡದ ಸಮಸ್ಯೆಗೆ ತುತ್ತಾಗಿದ್ದಾರೆ ಎಂಬುದನ್ನು ವಿವರಿಸುತ್ತದೆ.

ಪಾದಗಳಲ್ಲಿ ಊತ, ಊದಿದ ಮುಖ ಮತ್ತು ನೊರೆಯುಕ್ತ ಮೂತ್ರ: ನಿರ್ಲಕ್ಷಿಸಬಾರದ ಎಚ್ಚರಿಕೆಯ ಲಕ್ಷಣಗಳು

ಮೂತ್ರಪಿಂಡಗಳು ನಮ್ಮ ದೇಹದ ನೈಸರ್ಗಿಕ ಸೋಸುವ ಯಂತ್ರಗಳಾಗಿ (ಫಿಲ್ಟರ್‌ಗಳು) ಕೆಲಸ ಮಾಡುತ್ತವೆ. ರಕ್ತದಿಂದ ತ್ಯಾಜ್ಯ ವಸ್ತುಗಳನ್ನು ಹೊರಹಾಕುವುದಲ್ಲದೆ, ಪ್ರೊಟೀನ್‌ಗಳಂತಹ ದೇಹಕ್ಕೆ ಅಗತ್ಯವಿರುವ ಪ್ರಮುಖ ವಸ್ತುಗಳು ಮೂತ್ರದ ಮೂಲಕ ಪೋಲಾಗದಂತೆ ತಡೆಯುತ್ತವೆ.

ಮೂತ್ರಪಿಂಡದ ಅತೀ ಸೂಕ್ಷ್ಮ ಸೋಸುವಿಕ ಘಟಕಗಳಾದ ʼಗ್ಲೋಮೆರುಲಿ' (Glomeruli) ಹಾನಿಗೊಳಗಾದಾಗ, ಹೆಚ್ಚಿನ ಪ್ರಮಾಣದ ಪ್ರೊಟೀನ್‌ ಮೂತ್ರದ ಮೂಲಕ ಸೋರಲು ಪ್ರಾರಂಭಿಸುತ್ತದೆ. ಇದು ಪಾದಗಳು ಮತ್ತು ಮುಖದಲ್ಲಿ ಊತ, ಕಣ್ಣುಗಳ ಸುತ್ತ ಬಾವು ಮತ್ತು ಮೂತ್ರದಲ್ಲಿ ವಿಪರೀತ ನೊರೆ ಬರಲು ಕಾರಣವಾಗುತ್ತದೆ. ಈ ವೈದ್ಯಕೀಯ ಸ್ಥಿತಿಯನ್ನು ʼನೆಫ್ರೋಟಿಕ್‌ ಸಿಂಡ್ರೋಮ್‌' ಎಂದು ಕರೆಯಲಾಗುತ್ತದೆ.

ಈ ಪ್ರಕರಣ ಸರಣಿಯ ಮೂವರೂ ರೋಗಿ ಗಳಲ್ಲಿ ಮೂತ್ರದ ಮೂಲಕ ತೀವ್ರ ಪ್ರಮಾಣದ ಪ್ರೊಟೀನ್‌ ನಷ್ಟವಾಗುತ್ತಿತ್ತು. ಅವರು ದಿನಕ್ಕೆ ಕ್ರಮವಾಗಿ ಸುಮಾರು 6 ಗ್ರಾಂ, 9 ಗ್ರಾಂ ಮತ್ತು 11 ಗ್ರಾಂ ಪ್ರೊಟೀನ್‌ ಕಳೆದುಕೊಳ್ಳುತ್ತಿದ್ದರು. ಕುತೂಹಲದ ವಿಷಯವೆಂದರೆ, ಆಸ್ಪತ್ರೆಗೆ ಬಂದಾಗ ಇವರ ರಕ್ತದ ಕ್ರಿಯೇಟಿನೈನ್‌ ಮಟ್ಟಗಳು ಸಾಮಾನ್ಯ ಮಟ್ಟದಲ್ಲೇ ಇದ್ದವು. ರಕ್ತದ ಕ್ರಿಯೇಟಿನೈನ್‌ ಪ್ರಮಾಣದಲ್ಲಿ ಗಮನಾರ್ಹ ಏರಿಕೆಯಾಗದಿದ್ದರೂ ದೇಹದಲ್ಲಿ ಗಂಭೀರವಾದ ಮೂತ್ರಪಿಂಡದ ಕಾಯಿಲೆ ಇರಬಹುದು ಎಂಬುದಕ್ಕೆ ಇದು ಒಂದು ಪ್ರಮುಖ ಸಾಕ್ಷಿಯಾಗಿದೆ.

17 ವರ್ಷದ ಯುವಕನಲ್ಲಿ ಮೂತ್ರಪಿಂಡದ ಕಾಯಿಲೆ

ಮೊದಲ ರೋಗಿ 17 ವರ್ಷದ ಯುವಕ. ಈತ ಇಡೀ ದೇಹದಲ್ಲಿ ಊತ ಮತ್ತು ಮೂತ್ರದಲ್ಲಿ ನೊರೆ ಬರುವ ಸಮಸ್ಯೆಯೊಂದಿಗೆ ಆಸ್ಪತ್ರೆಗೆ ಬಂದಿದ್ದನು.

ಅವನ ಮೂತ್ರಪಿಂಡದ ಬಯಾಪ್ಸಿ ಪರೀಕ್ಷೆಯನ್ನು ಮಾಡಿದಾಗ ʼಮಿನಿಮಲ್‌ ಚೇಂಜ್‌ ಡಿಸೀಸ್‌' (Minimal Change Disease) ಇರುವುದು ಪತ್ತೆಯಾಯಿತು. ಇದು ಮೂತ್ರಪಿಂಡದ ಸೋಸುವಿಕೆ ಪದರಕ್ಕೆ ಹಾನಿ ಮಾಡುವ ಒಂದು ಅನಾರೋಗ್ಯವಾಗಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ, ಲಕ್ಷಣಗಳು ಪ್ರಾರಂಭವಾಗುವ ಮೊದಲು ಆತ ಮುಖಕ್ಕೆ ಹಚ್ಚುವ ಫೇರ್‌ನೆಸ್‌ ಕ್ರೀಮ್‌ ಬಳಸುತ್ತಿದ್ದ ಎಂಬ ವಿಷಯ ತಿಳಿದುಬಂತು.

ಆತನ ಮೂತ್ರದಲ್ಲಿ ಪಾದರಸದ ಮಟ್ಟ ಸಾಮಾನ್ಯವಾಗಿದ್ದರೂ ಆತ ಬಳಸಿದ ಕ್ರೀಮ್‌ ಅನ್ನು ಪರೀಕ್ಷಿಸಿದಾಗ ಬೇರೆಯದೇ ಸತ್ಯ ಹೊರಬಂತು- ಅದರಲ್ಲಿ ಬರೋಬ್ಬರಿ 1,516.13 ಪಿಪಿಎಂ (parts per million) ನಷ್ಟು ಪಾದರಸವಿತ್ತು.

ಆತನಿಗೆ ಕ್ರೀಮ್‌ ಬಳಕೆಯನ್ನು ತತ್‌ಕ್ಷಣವೇ ನಿಲ್ಲಿಸಲು ಸೂಚಿಸಲಾಯಿತು ಮತ್ತು ಸ್ಟೀರಾಯ್ಡಗಳ ಮೂಲಕ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಯ ಪರಿಣಾಮವಾಗಿ ಆತ ಆರು ವಾರಗಳಲ್ಲಿ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖನಾದನು.

31 ವರ್ಷದ ಮಹಿಳೆಯಲ್ಲಿ ಬೇರೆಯದೇ ರೀತಿಯ ಮೂತ್ರಪಿಂಡದ ಹಾನಿ

ಎರಡನೇ ರೋಗಿ 31 ವರ್ಷದ ಮಹಿಳೆ. ಈಕೆ ನಾಲ್ಕು ವಾರಗಳಿಂದ ಎರಡೂ ಪಾದಗಳಲ್ಲಿ ಊತ ಮತ್ತು ಒಂದು ವಾರದಿಂದ ಮುಖದಲ್ಲಿ ಊತದ ಸಮಸ್ಯೆಯಿಂದ ಬಂದಿದ್ದರು.

ಈಕೆ ಸುಮಾರು ಒಂದು ತಿಂಗಳಿನಿಂದ ಪ್ರತಿದಿನ ಮಾರುಕಟ್ಟೆಯಲ್ಲಿ ಸಿಗುವ ಚರ್ಮ ಬೆಳಗಿಸುವ ಕ್ರೀಮ್‌ ಬಳಸುತ್ತಿರುವುದಾಗಿ ತಿಳಿಸಿದರು. ಈಕೆಯ ಮೂತ್ರಪಿಂಡದ ಬಯಾಪ್ಸಿಯಲ್ಲಿ "ಫೋಕಲ್‌ ಸೆಗೆ¾ಂಟಲ್‌ ಗ್ಲೋಮೆರುಲೋಸ್ಕ್ಲೆರೋಸಿಸ್‌' (FSGS) ಪತ್ತೆಯಾಯಿತು. ಇದು ಮೂತ್ರಪಿಂಡದ ಸೋಸುವ ಘಟಕಗಳನ್ನು ಹಾನಿಗೊಳಿಸುವ ಮತ್ತೂಂದು ಪ್ರಕಾರದ ಕಾಯಿಲೆಯಾಗಿದೆ.

ಸೌಂದರ್ಯ ವರ್ಧಕ ಕ್ರೀಮ್‌ ಬಳಕೆಯನ್ನು ತತ್‌ಕ್ಷಣವೇ ತಡೆಹಿಡಿಯಲಾಯಿತು ಮತ್ತು ಅವರಿಗೆ ಸ್ಟೀರಾಯ್ಡ ಚಿಕಿತ್ಸೆ ನೀಡಲಾಯಿತು. ಇವರು ಎರಡು ತಿಂಗಳ ಒಳಗೆ ರೋಗದಿಂದ ಸಂಪೂರ್ಣ ಚೇತರಿಸಿಕೊಂಡರು.

24 ವರ್ಷದ ಮಹಿಳೆಯಲ್ಲಿ ಎನ್‌ಇಎಲ್‌ಎಲ್‌-1-ಸಂಬಂಧಿ ಮೂತ್ರಪಿಂಡದ ಕಾಯಿಲೆ

ಮೂರನೇ ರೋಗಿ 24 ವರ್ಷದ ಯುವತಿ. ಈಕೆ ಸುಮಾರು ಒಂದು ತಿಂಗಳಿನಿಂದ ಎರಡೂ ಕಾಲುಗಳಲ್ಲಿ ಊತವನ್ನು ಅನುಭವಿಸುತ್ತಿದ್ದರು. ವೈದ್ಯಕೀಯ ಪರೀಕ್ಷೆಗಳು ಇವರಿಗೂ ʼ ನೆಫ್ರೋಟಿಕ್‌ ಸಿಂಡ್ರೋಮ್‌' ಇರುವುದನ್ನು ಖಾತರಿಪಡಿಸಿದವು.

ಈಕೆಯ ಮೂತ್ರಪಿಂಡದ ಬಯಾಪ್ಸಿಯಲ್ಲಿ ʼಎನ್‌ಇಎಲ್‌ಎಲ್‌-1 -ಸಂಬಂಧಿ ಮೆಂಬ್ರಾನಸ್‌ ನೆಫ್ರೋಪತಿ' (NELL-1-associated membranous nephropathy) ಪತ್ತೆಯಾಯಿತು. ಇದು ದೇಹದ ರೋಗನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ನಿರ್ದಿಷ್ಟ ಮೂತ್ರಪಿಂಡದ ಕಾಯಿಲೆಯಾಗಿದೆ.

ಈಕೆಯು ಎರಡನೇ ರೋಗಿ ಬಳಸಿದ್ದ ಅದೇ ಚರ್ಮ ಬೆಳಗಿಸುವ ಕ್ರೀಮ್‌ ಅನ್ನು ಬಳಸಿದ್ದರು. ಈ ಕ್ರೀಮ್‌ ಅನ್ನು ವಿಶ್ಲೇಷಿಸಿದಾಗ ಅದರಲ್ಲಿ ಅಂದಾಜು 3,770 ಪಿಪಿಎಂನಷ್ಟು ಅಪಾರ ಪ್ರಮಾಣದ ಪಾದರಸವಿರುವುದು ಕಂಡುಬಂತು.

ಕ್ರೀಮ್‌ ಬಳಕೆಯನ್ನು ತತ್‌ಕ್ಷಣವೇ ನಿಲ್ಲಿಸಲಾಯಿತು. ಬಳಿಕ ಈಕೆಗೆ ʼರಿಟುಕ್ಸಿಮಾಬ್‌' (Rituximab) ಔಷಧದ ಎರಡು ಡೋಸ್‌ ನೀಡಲಾಯಿತು ಮತ್ತು ಈಕೆಯೂ ಸಂಪೂರ್ಣವಾಗಿ ಗುಣಮುಖರಾದರು.

ಮುಖಕ್ಕೆ ಹಚ್ಚುವ ಕ್ರೀಮ್‌ ಮೂತ್ರಪಿಂಡವನ್ನು ಹೇಗೆ ಹಾನಿಗೊಳಿಸುತ್ತದೆ?

ಚರ್ಮಕ್ಕೆ ಬಣ್ಣವನ್ನು ನೀಡುವ 'ಮೆಲನಿನ್‌' ಎಂಬ ವರ್ಣದ್ರವ್ಯದ ಉತ್ಪಾದನಾ ಪ್ರಕ್ರಿಯೆಗೆ ಪಾದರಸವು ಅಡ್ಡಿಪಡಿಸುತ್ತದೆ. ಈ ಕಾರಣಕ್ಕಾಗಿ ಕೆಲವು ಚರ್ಮ ಬೆಳಗಿಸುವ ಉತ್ಪನ್ನಗಳಿಗೆ ಪಾದರಸವನ್ನು ಸೇರಿಸಲಾಗುತ್ತದೆ. ಇದರ ಪರಿಣಾಮವಾಗಿ ಚರ್ಮ ತಾತ್ಕಾಲಿಕವಾಗಿ ಬಿಳಿಯಾದಂತೆ ಅಥವಾ ಪ್ರಕಾಶಮಾನವಾಗಿ ಕಾಣಿಸಬಹುದು.

ಆದರೆ ಇದರ ನಿಜವಾದ ಅಪಾಯವೆಂದರೆ, ಪಾದರಸವು ಕೇವಲ ಚರ್ಮದ ಮೇಲ್ಮೈಯಲ್ಲಷ್ಟೇ ಉಳಿಯುವುದಿಲ್ಲ.

ಇದನ್ನು ನಿರಂತರವಾಗಿ ಬಳಸಿದಾಗ, ಪಾದರಸವು ಚರ್ಮದ ಮೂಲಕ ದೇಹದೊಳಗೆ ಹೀರಿಕೊಳ್ಳಲ್ಪಡುತ್ತದೆ. ಅನಂತರ ಅದು ಮೂತ್ರಪಿಂಡದ ಅಂಗಾಂಶಗಳಲ್ಲಿ ಶೇಖರಣೆಯಾಗಿ, ನೇರವಾಗಿ ವಿಷಕಾರಿಯಾಗಿ ಪರಿಣಮಿಸುತ್ತದೆ. ಅಷ್ಟೇ ಅಲ್ಲದೆ, ಇದು ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಅಸಹಜ ಪ್ರತಿಕ್ರಿಯೆಗಳನ್ನು ಪ್ರಚೋದಿಸಿ, ಮೂತ್ರಪಿಂಡದ ಸೂಕ್ಷ್ಮ ಸೋಸುವಿಕೆ ರಚನೆಗಳನ್ನು ಹಾನಿಗೊಳಿಸುತ್ತದೆ.

ಸರಳವಾಗಿ ಹೇಳಬೇಕೆಂದರೆ-ಮುಖಕ್ಕೆ ಹಚ್ಚುವ ಒಂದು ವಿಷಕಾರಿ ರಾಸಾಯನಿಕವು ಅಂತಿಮವಾಗಿ ನಿಮ್ಮ ಮೂತ್ರಪಿಂಡಗಳನ್ನೇ ತೀವ್ರವಾಗಿ ಹಾನಿಗೊಳಿಸಬಹುದು.

ಒಂದೇ ರೀತಿಯ ಅಪಾಯ, ಆದರೆ ಮೂರು ವಿಭಿನ್ನ ರೀತಿಯ ಮೂತ್ರಪಿಂಡ ಕಾಯಿಲೆಗಳು

ಈ ಪ್ರಕರಣಗಳಲ್ಲಿ ಅತ್ಯಂತ ಆಶ್ಚರ್ಯಕರವಾದ ಅಂಶವೆಂದರೆ, ಮೂವರೂ ರೋಗಿಗಳು ಒಂದೇ ರೀತಿಯ ಮೂತ್ರಪಿಂಡದ ಕಾಯಿಲೆಗೆ ತುತ್ತಾಗಲಿಲ್ಲ.

ಮೊದಲ ರೋಗಿಗೆ ʼಮಿನಿಮಲ್‌ ಚೇಂಜ್‌ ಡಿಸೀಸ್‌' ಬಂದರೆ,

ಎರಡನೇ ರೋಗಿಗೆ ʼಎಫ್‌ಎಸ್‌ಜಿಎಸ್‌' ಬಂದಿತ್ತು,

ಮೂರನೇ ರೋಗಿಗೆ ʼಎನ್‌ಇಎಲ್‌ಎಲ್‌-1 -ಸಂಬಂಧಿ ಮೆಂಬ್ರಾನಸ್‌ ನೆಫ್ರೋಪತಿ' ಕಂಡುಬಂದಿತ್ತು.

ಆದ್ದರಿಂದ, ಯಾವುದೇ ಸ್ಪಷ್ಟ ಕಾರಣವಿಲ್ಲದೆ ಗ್ಲೋಮೆರುಲಾರ್‌ ಮೂತ್ರಪಿಂಡದ ಕಾಯಿಲೆಗೆ ತುತ್ತಾಗುವ ರೋಗಿಗಳನ್ನು ಪರೀಕ್ಷಿಸುವಾಗ, ಅವರು ಚರ್ಮ ಬೆಳಗಿಸುವ ಉತ್ಪನ್ನಗಳು ಮತ್ತು ಪಾದರಸದಂತಹ ಭಾರ ಲೋಹಗಳಿಗೆ ಒಡ್ಡಿಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಪ್ರಕರಣಗಳು ಸಾಬೀತುಪಡಿಸುತ್ತವೆ.

ನೀವು ಯಾವ ಕ್ರೀಮ್‌ಗಳನ್ನು ಬಳಸುತ್ತೀರಿ - ಪ್ರಮುಖ ಸುಳಿವು ನೀಡಬಲ್ಲ ಒಂದು ಸರಳ ಪ್ರಶ್ನೆ

ಈ ಮೂರೂ ಪ್ರಕರಣಗಳನ್ನು ಗುರುತಿಸಿ ರೋಗನಿರ್ಣಯ ಮಾಡಿದ ಬಳಿಕ, ನನ್ನ ಪ್ರಕಾರ ಸ್ಪಷ್ಟ ಕಾರಣವಿಲ್ಲದ ದೇಹದ ಊತ, ತೀವ್ರ ಪ್ರೊಟೀನ್‌ ನಷ್ಟ ಅಥವಾ ನೆಫ್ರೋಟಿಕ್‌ ಸಿಂಡ್ರೋಮ್‌ ಹೊಂದಿರುವ ರೋಗಿಗಳನ್ನು-ವಿಶೇಷವಾಗಿ ಯುವ ರೋಗಿಗಳನ್ನು- ಪರೀಕ್ಷಿಸುವಾಗ ವೈದ್ಯರು ಅವರು ಬಳಸುವ ಸೌಂದರ್ಯ ವರ್ಧಕಗಳು ಮತ್ತು ಸೌಂದರ್ಯ ಕ್ರೀಮ್‌ಗಳ ಬಗ್ಗೆ ಖಂಡಿತವಾಗಿಯೂ ವಿಚಾರಿಸಬೇಕು.ಸಾಮಾನ್ಯವಾಗಿ ರೋಗಿಗಳು ಫೇರ್‌ನೆಸ್‌ ಕ್ರೀಮ್‌ಗಳನ್ನು ಒಂದು ಔಷಧ ಅಥವಾ ರಾಸಾಯನಿಕ ವಸ್ತುವೆಂದು ಭಾವಿಸುವುದಿಲ್ಲ. ಹೀಗಾಗಿ ವೈದ್ಯರು ನಿಯಮಿತ ವೈದ್ಯಕೀಯ ತಪಾಸಣೆಯ ಸಮಯದಲ್ಲಿ ನಿರ್ದಿಷ್ಟವಾಗಿ ಕೇಳದ ವಿನಾ ರೋಗಿಗಳು ಈ ವಿಷಯವನ್ನು ತಾವಾಗಿಯೇ ತಿಳಿಸುವುದಿಲ್ಲ.

ಕಾಸ್ಮೆಟಿಕ್ಸ್‌ ಅಥವಾ ಕ್ರೀಮ್‌ಗಳ ಬಳಕೆಯ ಬಗ್ಗೆ ಕೇಳುವ ಒಂದು ಸರಳ ಪ್ರಶ್ನೆಯು, ಕೆಲವೊಮ್ಮೆ ರೋಗನಿರ್ಣಯವಾಗದ ಮೂತ್ರಪಿಂಡದ ಸಮಸ್ಯೆಯ ಮೂಲ ಕಾರಣವನ್ನು ಹುಡುಕಲು ಪ್ರಮುಖ ಸುಳಿವನ್ನು ನೀಡುತ್ತದೆ.

ಆರೋಗ್ಯಕ್ಕೆ ಹಾನಿ ತಂದುಕೊಂಡು ಸೌಂದರ್ಯವರ್ಧನೆ ಬೇಡ

ಸೌಂದರ್ಯದ ಮಾನದಂಡಗಳು, ಸಾಮಾಜಿಕ ನಿರೀಕ್ಷೆಗಳು ಮತ್ತು ಮಾಧ್ಯಮಗಳ ಪ್ರಭಾವದಿಂದಾಗಿ ಪ್ರಪಂಚದ ನಾನಾ ಭಾಗಗಳಲ್ಲಿ ಚರ್ಮ ಬೆಳಗಿಸುವ ಉತ್ಪನ್ನಗಳ ಬಳಕೆ ಮುಂದುವರಿಯುತ್ತಲೇ ಇದೆ.

ಸೌಂದರ್ಯ ವರ್ಧಕಗಳಲ್ಲಿ ಅಪಾಯಕಾರಿ ವಸ್ತುಗಳನ್ನು ನಿಷೇಧಿಸುವ ಮತ್ತು ನಿಯಂತ್ರಿಸುವ ಕಾನೂನುಗಳಿದ್ದರೂ ಪಾದರಸವನ್ನು ಹೊಂದಿರುವ ಚರ್ಮ ಬೆಳಗಿಸುವ ಉತ್ಪನ್ನಗಳು ಇಂದಿಗೂ ಮಾರುಕಟ್ಟೆಗಳು ಮತ್ತು ಆನ್‌ಲೈನ್‌ ಪ್ಲಾಟ್‌ಫಾರ್ಮ್ಗಳ ಮೂಲಕ ಗ್ರಾಹಕರನ್ನು ತಲುಪುತ್ತಿವೆ.

ಆದ್ದರಿಂದ ಗ್ರಾಹಕರು ನಿಯಂತ್ರಣವಿಲ್ಲದ ಅಥವಾ ಅನುಮಾನಾಸ್ಪದ ಚರ್ಮ ಬೆಳಗಿಸುವ ಉತ್ಪನ್ನಗಳ ಬಗ್ಗೆ, ವಿಶೇಷವಾಗಿ ಅವುಗಳ ಪದಾರ್ಥಗಳು (ingredients) ಮತ್ತು ಮೂಲ ಸ್ಪಷ್ಟವಿಲ್ಲದ ಉತ್ಪನ್ನಗಳ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ಇರಬೇಕು.

ಮೂತ್ರಪಿಂಡ ತಜ್ಞರನ್ನು (Nephrologist) ಯಾವಾಗ ಸಂಪರ್ಕಿಸಬೇಕು?

ಪಾದಗಳು ಅಥವಾ ಮುಖದಲ್ಲಿ ಊತ, ಕಣ್ಣುಗಳ ಸುತ್ತ ಬಾವು, ಮೂತ್ರದಲ್ಲಿ ನಿರಂತರವಾಗಿ ನೊರೆ ಬರುವುದು, ಮೂತ್ರದಲ್ಲಿ ಪ್ರೊಟೀನ್‌ ಪತ್ತೆಯಾಗುವುದು ಅಥವಾ ಮೂತ್ರಪಿಂಡಕ್ಕೆ ಸಂಬಂಧಿಸಿದ ಯಾವುದೇ ಇತರ ಶಂಕಿತ ಸಮಸ್ಯೆಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಆರಂಭಿಕ ಹಂತದಲ್ಲೇ ವೈದ್ಯಕೀಯ ತಪಾಸಣೆಗೆ ಒಳಪಡುವುದರಿಂದ ರೋಗದ ಮೂಲ ಕಾರಣವನ್ನು ಗುರುತಿಸಲು ಮತ್ತು ಸೂಕ್ತ ಚಿಕಿತ್ಸೆಯನ್ನು ತತ್‌ಕ್ಷಣ ಪ್ರಾರಂಭಿಸಲು ಸಹಾಯವಾಗುತ್ತದೆ.

ಈ ಪ್ರಕರಣ ಸರಣಿಯಿಂದ ಸಿಗುವ ಒಟ್ಟು ಸಂದೇಶವೂ ಅತ್ಯಂತ ಪ್ರಮುಖವಾಗಿದೆ: ಅಪಾಯಕಾರಿ ವಸ್ತುವಿನ ಬಳಕೆಯನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು, ಶಂಕಿತ ಉತ್ಪನ್ನದ ಬಳಕೆಯನ್ನು ತತ್‌ಕ್ಷಣವೇ ನಿಲ್ಲಿಸುವುದು ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ನೀಡುವುದರಿಂದ ಮೂತ್ರಪಿಂಡಗಳಿಗೆ ಮುಂದಾಗುವ ಹೆಚ್ಚಿನ ಹಾನಿಯನ್ನು ತಡೆಯಬಹುದು. ವೈದ್ಯರಲ್ಲಿ ಹೆಚ್ಚಿನ ಜಾಗೃತಿ, ಪಾದರಸವನ್ನು ಹೊಂದಿರುವ ಸೌಂದರ್ಯ ವರ್ಧಕಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ಅವುಗಳಿಂದ ಉಂಟಾಗುವ ಆರೋಗ್ಯ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಉತ್ತಮ ಶಿಕ್ಷಣ ಮತ್ತು ಅರಿವಿನ ಅಗತ್ಯವನ್ನು ಈ ಶೋಧ ಎತ್ತಿಹಿಡಿಯುತ್ತದೆ.

ಮೂತ್ರಪಿಂಡಗಳಿಗೆ ಹಾನಿ ಮಾಡಿಕೊಂಡು ಸೌಂದರ್ಯ ವರ್ಧನೆ ಬೇಡ. ನಿಮ್ಮ ಚರ್ಮಕ್ಕೆ ನೀವು ಏನನ್ನು ಹಚ್ಚುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳಿ ಮತ್ತು ಕಾಯಿಲೆಯ ಎಚ್ಚರಿಕೆಯ ಲಕ್ಷಣಗಳು ಕಂಡುಬಂದಲ್ಲಿ, ತತ್‌ಕ್ಷಣವೇ ವೈದ್ಯಕೀಯ ಸಲಹೆಯನ್ನು ಪಡೆಯಿರಿ.

-ಡಾ| ಲಾವಣ್ಯಾ ಎಸ್‌.ಆರ್‌. ಭಟ್‌

ನೆಫ್ರಾಲಜಿಸ್ಟ್ ಮತ್ತು ಕಿಡ್ನಿ ಕಸಿ ತಜ್ಞರು,

ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ನೆಫ್ರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ)

Dailyhunt
Disclaimer: This content has not been generated, created or edited by Dailyhunt. Publisher: Udayavani