ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ಗಸ್ತು ತಿರುಗುತ್ತಿದ್ದ ಭದ್ರಾ ವನ್ಯಜೀವಿ ವಿಭಾಗದ ಅರಣ್ಯ ಸಿಬ್ಬಂದಿಯೊಬ್ಬರ ಮೇಲೆ ಕಾಡಾನೆಯೊಂದು ಭೀಕರವಾಗಿ ದಾಳಿ ನಡೆಸಿರುವ ಘಟನೆ ಎನ್.ಆರ್.ಪುರ ತಾಲೂಕಿನ ಸಿದ್ದರಾಮಯ್ಯ ಸೇತುವೆ ಸಮೀಪದ ಮೋರಿಮಠ ಬಳಿ ಶುಕ್ರವಾರ ನಡೆದಿದೆ.
ಭದ್ರಾ ಬ್ಯಾಕ್ ವಾಟರ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಫಾರೆಸ್ಟ್ ವಾಚರ್ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ಮಾಡಿದೆ. ಆನೆಯ ದಾಳಿಯಿಂದಾಗಿ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಭದ್ರಾ ಬ್ಯಾಕ್ ವಾಟರ್ ಪ್ರದೇಶದಲ್ಲಿ ಪ್ರಸ್ತುತ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಈ ಆನೆಗಳ ಹಿಂಡು ಎನ್.ಆರ್.ಪುರ ಪಟ್ಟಣದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿ ಇರುವುದು ಇಡೀ ತಾಲೂಕಿನ ಜನರನ್ನು ಆತಂಕದಲ್ಲಿ ಮುಳುಗಿಸಿದೆ.

