Dailyhunt Logo
  • Light mode
    Follow system
    Dark mode
    • Play Story
    • App Story
Chikkodi: ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳ ನೀರಿನ ಮಟ್ಟದಲ್ಲಿ ಹೆಚ್ಚಳ

Chikkodi: ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳ ನೀರಿನ ಮಟ್ಟದಲ್ಲಿ ಹೆಚ್ಚಳ

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ರಾಜ್ಯದ ಗಡಿ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದ ಪರಿಣಾಮ, ಗಡಿನಾಡಿನ ಜೀವನಾಡಿಗಳಾದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.

ಇದರ ಪರಿಣಾಮ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ 5 ಕೆಳಹಂತದ ಸೇತುವೆಗಳು ಜು.5ರ ರವಿವಾರ ಜಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಕೆಲವೇ ದಿನಗಳ ಹಿಂದೆ ನೀರಿಲ್ಲದೆ ಬತ್ತಿಹೋಗುವ ಸ್ಥಿತಿಯಲ್ಲಿದ್ದ ನದಿಗಳು ಈಗ ಮೈದುಂಬಿ ಹರಿಯುತ್ತಿರುವುದು ರೈತರ ಮೊಗದಲ್ಲಿ ಖುಷಿ ತರಿಸಿದೆ.

ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಾದ ಕೋಯ್ನಾ139 ಮಿಮೀ., ಮಹಾಬಲೇಶ್ವರ-160 ಮಿಮೀ., ನವಜಾ150 ಮಿಮೀ ಹೀಗೆ ರಾಧಾನಗರಿ, ಪಾಟಗಾಂವ, ಕೊಲ್ಲಾಪೂರ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ನದಿಗಳ ನೀರಿನ ಮಟ್ಟ ಅಪಾಯ ಮೀರಿ ಏರಿಕೆಯಾಗುತ್ತಿದೆ.

ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಯ ಯಡೂರ-ಕಲ್ಲೋಳ ಕೆಳಹಂತದ ಸೇತುವೆ ರವಿವಾರ ಮಧ್ಯಾಹ್ನ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ದೂಧಗಂಗಾ ನದಿಯ ಕಾರದಗಾ-ಭೋಜ, ಭೋಜವಾಡಿ-ಕುನ್ನೂರ ಹಾಗೂ ವೇದಗಂಗಾ ನದಿಯ ಅಕ್ಕೋಳ-ಸಿದ್ನಾಳ, ಜತ್ರಾಟ-ಬೀವಸಿ ಸೇತುವೆಗಳೂ ನೀರಿನಲ್ಲಿ ಮುಳುಗಿವೆ. ಅಲ್ಲದೆ ಮಹಾರಾಷ್ಟ್ರದ ಪ್ರಮುಖ ರಾಜಾಪೂರ-ಜುಗಳ ಬ್ಯಾರೇಜ್ ಮೇಲೆಯೂ ನೀರು ಹರಿಯುತ್ತಿದ್ದು ಸಂಚಾರಕ್ಕೆ ತಡೆ ಉಂಟಾಗಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಕೃಷ್ಣಾ ನದಿಗೆ ರವಿವಾರ ಸುಮಾರು 60 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನದಿಯ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದ್ದು, ನದಿ ಪಾತ್ರದ ಗ್ರಾಮಗಳ ಜನರಲ್ಲಿ ಆತಂಕ ಮನೆಮಾಡಿದೆ.

ಪಂಚಗಂಗಾ- ಕೊಲ್ಲಾಪೂರ ಭಾಗದಲ್ಲಿ ಅಪಾರ ಪ್ರಮಾಣದ ಮಳೆ ಸುರಿಯುತ್ತಿರುವ ಪರಿಣಾಮ ಮಹಾರಾಷ್ಟ್ರ ಪಂಚಗಂಗಾ ನದಿ ಉಕ್ಕಿ ಹರಿಯುತ್ತಿದೆ. ನೆರೆಯ ನರಸಿಂಹವಾಡಿ ಹತ್ತಿರ ಪಂಚಗಂಗಾ ನದಿಯು ಕೃಷ್ಣಾ ನದಿ ಸೇರುವುದರಿಂದ ಸಹಜವಾಗಿ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ದಿ‌ನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಪಂಪ್‌ ಸೆಟ್ ತೆರವು: ಮಹಾರಾಷ್ಟ್ರ ಕೊಂಕಣ ಭಾಗದಲ್ಲಿ ಅಬ್ಬರಿಸುತ್ತಿರುವ ಮಳೆಯಿಂದ ಕ್ರಮೇಣ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇನ್ನೂ ನಾಲ್ಜೈದು ದಿನ ಮಳೆ ಸುರಿಯಲಿದೆ ಎನ್ನುವ ಹವಮಾನ ವರದಿ ಅನುಸಾರ ನದಿ ಪಾತ್ರದ ರೈತರು ಪಂಪಸೆಟ್ ಗಳನ್ನು ತೆರವು ಮಾಡುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani