| ಸೋರುತ್ತಿರುವ ಮೇಲ್ಛಾವಣಿ | ಮಳೆ ನೀರು ಒಳಗೆ ಬಾರದಂತೆ ಪ್ಲಾಸ್ಟಿಕ್ ಹೊದಿಕೆ!
| 10 ವರ್ಷಗಳಿಂದ ಹಳೆಯ ಕಟ್ಟಡದಲ್ಲೇ ಕಾರ್ಯಾಚರಣೆ | ಹೊಸ ಕಟ್ಟಡದ ನಿರೀಕ್ಷೆ
ಕಂಕನಾಡಿ: ಸೋರುತ್ತಿರುವ ಮೇಲ್ಛಾವಣಿ, ಕಟ್ಟಡ ಕುಸಿದು ಬೀಳದಂತೆ ಅಲ್ಲಲ್ಲಿ ಜೋಡಿಸಿಟ್ಟಿರುವ ಆಧಾರ ಕಂಬಗಳು, ನೆಲದಲ್ಲಿಯೂ ನೀರಿನ ತೇವಾಂಶ, ಮಳೆ ನೀರು ಒಳಗೆ ಬಾರದಂತೆ ಪ್ಲಾಸ್ಟಿಕ್ ಹೊದಿಕೆ.
ಇದರ ಒಳಗೆ ಜೀವಭಯದಿಂದ ಕೆಲಸ ಮಾಡುವ ಪೊಲೀಸ್ ಸಿಬಂದಿ, ಅಧಿಕಾರಿಗಳು !
ಇದು ಮಂಗಳೂರು ನಗರದ ನಡುವೆ ಇರುವ ಕಂಕನಾಡಿ ನಗರ ಪೊಲೀಸ್ ಠಾಣೆಯ ಸ್ಥಿತಿ. ನಗರದ ನಡುವಿನ ಪೊಲೀಸ್ ಠಾಣೆಯೊಂದರ ಕಟ್ಟಡ ಈ ಸ್ಥಿತಿಯಲ್ಲಿದೆ ಎಂಬುದನ್ನು ನಂಬಬೇಕಾದರೆ ಕಂಕನಾಡಿಯ ನಾಗುರಿಗೆ ಬರಬೇಕು. ಇಲ್ಲಿ ಕಳೆದ 10 ವರ್ಷಗಳಿಂದ ಬ್ರಿಟಿಷರ ಕಾಲಘಟ್ಟದ ಕಟ್ಟಡದಲ್ಲಿ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿದೆ.
ಹಳೆ ಕಟ್ಟಡದಲ್ಲೇ ಹೊಸ ಠಾಣೆ!
2016ರಲ್ಲಿ ಕಂಕನಾಡಿ ಠಾಣೆಯನ್ನು ಗ್ರಾಮಾಂತರ ಮತ್ತು ನಗರವೆಂದು ವಿಭಜಿಸಲಾಯಿತು. ಆಗ ಕಂಕನಾಡಿ ನಗರ ಠಾಣೆಯನ್ನು ನಾಗುರಿಯ ಖಾಸಗಿ ಕಟ್ಟಡದಲ್ಲಿ ಆರಂಭಿಸಲಾಯಿತು. ಆಗಲೇ ಕಟ್ಟಡ ಹಳೆಯದಾಗಿತ್ತು. ವರ್ಷಗಳು ಕಳೆದಂತೆ ಸ್ಥಿತಿ ಹದಗೆಡುತ್ತಾ ಬಂದಿತು. ಮಳೆಗಾಲದಲ್ಲಿ ಸೋರಿಕೆ ಸಾಮಾನ್ಯ ಎಂಬಂತಾಯಿತು. ಸಮಾಜದ ರಕ್ಷಣೆಗೆ ಕೆಲಸ ಮಾಡುವ ಪೊಲೀಸ್ ಠಾಣೆ ಅಸುರಕ್ಷತೆಯ ತಾಣವಾಯಿತು. ಈ ವರ್ಷದ ಅಕ್ಟೋಬರ್‌ಗೆ 10 ವರ್ಷ ಪೂರ್ಣಗೊಳ್ಳಲಿದೆ.
ಹೊಸ ಕಟ್ಟಡ ವಿಳಂಬ
ನಗರ, ಗ್ರಾಮಾಂತರ ಭಾಗದ ಬಹುತೇಕ ಎಲ್ಲ ಪೊಲೀಸ್ ಠಾಣೆಗಳು ಸುಸಜ್ಜಿತವಾದ ಸ್ವಂತ ಕಟ್ಟಡವನ್ನು ಹೊಂದಿದ್ದರೂ ಕಂಕನಾಡಿ ನಗರ ಠಾಣೆಗೆ ಇನ್ನೂ ಕೂಡ ಆ ಯೋಗ ಕೂಡಿ ಬಂದಿಲ್ಲ. ಹಲವು ವರ್ಷಗಳ ಹಿಂದೆಯೇ ಬಿಕರ್ನಕಟ್ಟೆ ಕೈಕಂಬದಲ್ಲಿ ಹೊಸ ಕಟ್ಟಡ ಕಾಮಗಾರಿ ಆರಂಭಗೊಂಡಿದ್ದರೂ ಅದು ಅರ್ಧಕ್ಕೆ ನಿಂತು ಹೋಗಿತ್ತು. ಇದೀಗ ಮತ್ತೆ ಕಾಮಗಾರಿ ನಡೆಯುತ್ತಿದೆ. ಈ ಮಳೆಗಾಲವೂ ಹಳೆಯ ಕಟ್ಟಡದಲ್ಲಿಯೇ ಕಳೆದು ಹೋಗುತ್ತಿದೆ. ಪೊಲೀಸರು ಜೀವಭಯ ದಲ್ಲೇ ಠಾಣೆಯೊಳಗೆ ಕೆಲಸ ಮಾಡು ವಂತಾಗಿದೆ.
ಜಾಗ ಮಾರಾಟ, ಪೊಲೀಸರಿಗೆ ಸಂಕಟ
ಈಗ ಪೊಲೀಸ್ ಠಾಣೆ ಇರುವ ಕಟ್ಟಡದ ಜಾಗವನ್ನು ಅದರ ಮೂಲ ಮಾಲಕರು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಠಾಣೆಯನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ. ಆದರೆ ಹೊಸ ಕಟ್ಟಡ ಪೂರ್ಣವಾಗುವವರೆಗೆ ಇದೇ ಕಟ್ಟಡದಲ್ಲಿ ಠಾಣೆ ಮುಂದುವರಿಸಲು ಪೊಲೀಸ್ ಅಧಿಕಾರಿಗಳು ಅವಕಾಶ ಕೇಳಿದ್ದಾರೆ.
ಹೊಸ ಕಟ್ಟಡ ಶೀಘ್ರ ಪೂರ್ಣ
ಬಿಕರ್ನಕಟ್ಟೆ ಕೈಕಂಬ ಬಳಿ ನಿರ್ಮಾಣಗೊಳ್ಳುತ್ತಿರುವ ಕಂಕನಾಡಿ ನಗರ ಪೊಲೀಸ್ ಠಾಣೆಯ ನೂತನ ಕಟ್ಟಡದ ಕಾಮಗಾರಿ ಅಕ್ಟೋಬರ್‌ವೆàಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅದುವರೆಗೆ ಹಳೆಯ ಕಟ್ಟಡದಲ್ಲಿಯೇ ಠಾಣೆ ಕಾರ್ಯಾಚರಿಸಲಿದೆ. -ರವಿಶಂಕರ್, ಡಿಸಿಪಿ, ಅಪರಾಧ ಮತ್ತು ಸಂಚಾರ ವಿಭಾಗ, ಮಂಗಳೂರು ನಗರ ಪೊಲೀಸ್ ಕಮಿಷನರೆಟ್

