Dailyhunt Logo
  • Light mode
    Follow system
    Dark mode
    • Play Story
    • App Story
ದಸರಾ ರಜೆಯಲ್ಲಿ ತರಗತಿ, ಪರೀಕ್ಷೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ದಸರಾ ರಜೆಯಲ್ಲಿ ತರಗತಿ, ಪರೀಕ್ಷೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಮಂಗಳೂರು: ರಾಜ್ಯ ಸರಕಾರ ಅ.3ರಿಂದ 21ರವರೆಗೆ ಶಾಲೆಗಳಿಗೆ ದಸರಾ ರಜೆ ಘೋಷಿಸಿದೆ. ಆದರೆ ಕೆಲವು ಕಾನ್ವೆಂಟ್‌ ಶಾಲೆಗಳು ರಜಾ ಅವಧಿಯಲ್ಲಿ ಪರೀಕ್ಷೆ ಹಾಗೂ ತರಗತಿಗಳನ್ನು ನಡೆಸುತ್ತಿವೆ. ಇದಕ್ಕೆ ಅವಕಾಶ ನೀಡಬಾರದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಹಾಗೂ ರಾಷ್ಟ್ರೀಯ ನಾಯಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಮಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನವರಾತ್ರಿ ಹಬ್ಬ ಹಿಂದೂಗಳಿಗೆ ಅತ್ಯಂತ ಪವಿತ್ರವಾದುದು.ದಸರಾ ರಜೆ ಅವಧಿಯಲ್ಲಿ ಪರೀಕ್ಷೆ ಅಥವಾ ತರಗತಿಗಳನ್ನು ನಡೆಸಿದರೆ ವಿದ್ಯಾರ್ಥಿಗಳ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುವುದಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ದಸರಾ ರಜೆಯಲ್ಲಿ ಕಡಿತ ಮಾಡಬಾರದು' ಎಂದು ಒತ್ತಾಯಿಸಿದರು.

'ಕೆಲವು ಕಾನ್ವೆಂಟ್‌ ಶಾಲೆಗಳು ದಸರಾ ರಜೆಯನ್ನು ಕ್ರಿಸ್ಮಸ್‌ ರಜೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಕಳೆದ ವರ್ಷವೂ ಇದೇ ರೀತಿ ಮಾಡಲಾಗಿದೆ. ಈ ಕುರಿತು ಶಿಕ್ಷಣ ಸಚಿವರಿಗೂ ಮನವಿ ಸಲ್ಲಿಸಲಾಗುವುದು. ನಿಯಮ ಉಲ್ಲಂಘಿಸಿ ದಸರಾ ರಜೆ ಅವಧಿಯಲ್ಲಿ ತರಗತಿ ಅಥವಾ ಪರೀಕ್ಷೆ ನಡೆಸಿದರೆ ಅಂತಹ ಶಾಲೆಗಳ ಎದುರು ಪ್ರತಿಭಟನೆ ನಡೆಸಲಾಗುವುದು' ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

ಶ್ರೀರಾಮ ಸೇನೆ, ರಾಮ ಸೇನೆ ಒಟ್ಟಾಗಿ ಕೆಲಸ
'ಶ್ರೀರಾಮ ಸೇನೆ ಹಾಗೂ ರಾಮ ಸೇನೆ ಇನ್ನು ಮುಂದೆ ಒಟ್ಟಾಗಿ ಕಾರ್ಯನಿರ್ವಹಿಸಲಿವೆ. ''ಶ್ರೀರಾಮ ಸೇನೆ'' ಹೆಸರಿನಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದು.ಈ ಕುರಿತು ರಾಮ ಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಅವರು ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಇಬ್ಬರೂ ಸೇರಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದು, ಸಂಘಟನೆ ಬಲಪಡಿಸುವ ಕಾರ್ಯ ನಡೆಸಲಾಗುವುದು' ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Udayavani