ಚಿಕ್ಕಮಗಳೂರು: ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಮೀಪದ ಮಾಣಿಕ್ಯಧಾರ ಬಳಿ ವಿವಾದ ಸೃಷ್ಟಿಯಾಗಿದ್ದು ಅನಾಧಿಕೃತ ಗೋರಿಗಳನ್ನು ನಿರ್ಮಾಣ ಮಾಡಿ ಹಸಿರು ಚಾದರ ಹೊದಿಸಿ ಹೊಸ ಆಚರಣೆ ಮಾಡಲಾಗುತ್ತಿದೆ. ಗೋರಿಗಳ ಸ್ಥಳದಲ್ಲಿ ಉತ್ಖನನ ಮಾಡುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.
ಸಂಬಂಧಪಟ್ಟ ಇಲಾಖೆ ಅಧಿಕಾರಿಗೆ ರಘು ಸಕಲೇಶಪುರ ಸೇರಿದಂತೆ ಇತರರು ಮನವಿ ಸಲ್ಲಿಸಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಮೀಪದ ಮಾಣಿಕ್ಯಧಾರಕ್ಕೆ ತೆರಳುವ ಮಾರ್ಗದಲ್ಲಿ ಅನಧಿಕೃತವಾಗಿ ಮರಗಳ ಕೆಳಗೆ ಗೋರಿಗಳನ್ನು ನಿರ್ಮಿಸಿ ಹಸಿರು ಬಟ್ಟೆಗಳನ್ನು ಹೊದಿಸಿ ಹೊಸ ಆಚರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಅನಧಿಕೃತ ಗೋರಿಗಳ ನಿರ್ಮಾಣ ಮಾಡಿ ಹೊಸ ಆಚರಣೆ ಮಾಡುವ ಮೂಲಕ ಸಂಪೂರ್ಣ ಇಸ್ಲಾಮೀಕರಣ ಮಾಡುವ ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಗೋರಿಗಳಿರುವ ಮಾಣಿಕ್ಯಧಾರ ಸುತ್ತಮುತ್ತಲ ಪ್ರದೇಶದಲ್ಲಿ ಜಿಪಿಎಸ್ ತಂತ್ರಜ್ಞಾನ ಬಳಸಿ ಉತ್ಖನನ ಮಾಡುವಂತೆ ಹಿಂದೂ ಪರ ಸಂಘಟನೆ ಮುಖಂಡ ರಘು ಸಕಲೇಶಪುರ ಮನವಿ ಮಾಡಿದ್ದಾರೆ ಹಾಗೂ ಹೊಸ ಆಚರಣೆ ಮಾಡುವವರು ಯಾರು ಎಂದು ಪತ್ತೆ ಹಚ್ಚಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ವಿವಾದದ ಬೆನ್ನಲ್ಲೆ ಮುಜರಾಯಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅನಧಿಕೃತ ಗೋರಿಗಳಿಗೆ ಹಸುರು ಬಟ್ಟೆ ಹೊದಿಸಿ ಹೊಸ ಆಚರಣೆ ಯನ್ನು ಖಂಡಿಸಿ ಹಿಂದೂ ಪರ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

