ದಾವಣಗೆರೆ: ರಾಜ್ಯದ ಜನತೆಗೆ ಅನ್ನ ಭಾಗ್ಯ ನೀಡಿರುವುದಾಗಿ ಹೇಳುತ್ತಿರುವ ಸಿದ್ದರಾಮಯ್ಯ (siddaramaiah) ಅನ್ನರಾಮಯ್ಯ ಅಲ್ಲ, ಕನ್ನರಾಮಯ್ಯ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ದೂರಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿರುವ ಐದು ಕೆಜಿ ಅಕ್ಕಿಯನ್ನೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಚೀಲವನ್ನು ಬದಲಾವಣೆ ಮಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಚಿವರ ಭಾವಚಿತ್ರಗಳನ್ನು ಹಾಕಿಕೊಂಡು ಕೇಂದ್ರ ಸರ್ಕಾರ ನೀಡಿದ ಅಕ್ಕಿಯನ್ನೇ ತನ್ನ ಅಕ್ಕಿಯೆಂದು ಹೇಳಿಕೊಳ್ಳುತ್ತಿದೆ.
ಇದು ಒಂದು ರೀತಿಯಲ್ಲಿ ಉಂಡು ಹೋದ ಕೊಂಡು ಹೋದ ಎನ್ನುವ ರೀತಿಯಲ್ಲಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಔಟ್ ಗೋಯಿಂಗ್ ಸರ್ಕಾರ. ಬಿಜೆಪಿ ಇನ್ ಕಮಿಂಗ್ ಸರ್ಕಾರ ಎಂದು ಜನರೇ ಮಾತನಾಡುತ್ತಿದ್ದಾರೆ. ರಾಜ್ಯ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುವ ಜೊತೆಗೆ ಅಭಿವೃದ್ಧಿ ಶೂನ್ಯ ಸರ್ಕಾರ. ಮೂರು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ದಾಖಲೆ ಬಿಡುಗಡೆ ಮಾಡಲಿ ಎಂದರು.
ವಿಜಿ ರಾಮ್ ಜಿ ಒಳ್ಳೆಯ ಯೋಜನೆ. ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಮೀಸಲಿಟ್ಟಿಲ್ಲ. 2014 ರ ಚುನಾವಣೆ ದೃಷ್ಟಿಯಿಂದ ನರೇಗಾ ಯೋಜನೆಗೆ ಮಹಾತ್ಮ ಗಾಂಧಿ ಅವರ ಹೆಸರಿಟ್ಟಿದ್ದಾರೆ ಅಷ್ಟೇ. ರಾಜ್ಯ ಸರ್ಕಾರದ ತನ್ನ ಅನುದಾನ ಮೀಸಲಿಡಬೇಕು. ಈಗ ನಡೆಯುತ್ತಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆಯಲ್ಲಿ ಗೆದ್ದರೆ ಮುಖ್ಯಮಂತ್ರಿ ಕುರ್ಚಿ ಸೇಫ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಎರಡು ಉಪಚುನಾವಣೆ ಗೆದ್ದರೆ ನಾನು ಮುಖ್ಯಮಂತ್ರಿ ಆಗಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಓಡಾಡುತ್ತಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಕದನದಿಂದ ಸರ್ಕಾರ ಐಸಿಯುನಲ್ಲಿದೆ. ವಿಧಾನಸೌಧ ಖಾಲಿಯಾಗಿದೆ. ಅಧಿಕಾರದ ಕಚ್ಚಾಟದಿಂದ ಜನರ ಹಿತ ಮರೆತಿದ್ದಾರೆ. ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಉಂಡೂ ಹೋದ ಕೊಂಡೂ ಹೋದ ಎನ್ನುವಂತೆ ಲೂಟಿ ಮಾಡುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರಕ್ಕೆ ಎರಡೂ ಕ್ಷೇತ್ರದ ಉಪ ಚುನಾವಣೆ ಪ್ರತಿಷ್ಠೆಯಾಗಿದೆ. ಹಾಗಾಗಿ ಜನರ ಹಿತ ಮರೆತು ಸಚಿವರು, ಶಾಸಕರು ಉಪ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಸಕರು, ಸಚಿವರಿಗೆ ಇಂತಿಷ್ಟು ಬೂತ್ ನಿಗದಿ ಮಾಡಿದೆ. ಬಿಜೆಪಿ ಅಧಿಕಾರವಧಿಯಲ್ಲಿ 17 ಉಪ ಚುನಾವಣೆ ನಡೆದಿದ್ದವು. ಆಗಲೂ ವಿಧಾನಸೌಧದಲ್ಲಿ ಸಚಿವರು ಕಡ್ಡಾಯವಾಗಿ ಮೂರು ದಿನ ಇರಬೇಕು ಎಂದು ಯಡಿಯೂರಪ್ಪ ಅವರು ಸೂಚಿಸಿದ್ದರು. ಅದರಂತೆ ಸಚಿವರು ಮೂರು ದಿನ ವಿಧಾನ ಸಭೆಯಲ್ಲಿ ಜನರಿಗೆ ದೊರೆಯುತ್ತಿದ್ದರು. ಆದರೆ, ಈ ಸರ್ಕಾರ ಜನರ ಹಿತವನ್ನು ಮರೆತಿದೆ. ಜನಸಾಮಾನ್ಯರಿಗೆ ಪೂರಕವಾಗಿ ಇರದೆ ಜನರ ಪಾಲಿಗೆ ಮಾರಕವಾಗಿದೆ ಎಂದು ರೇಣುಕಾಚಾರ್ಯ ಹೇಳಿದರು.
ಬ್ರಹ್ಮಾಂಡ ಭ್ರಷ್ಟಾಚಾರ, ಕಮಿಷನ್, ಅಭಿವೃದ್ಧಿ ವಿರೋಧಿ ಸರ್ಕಾರ ಉಪ ಚುನಾವಣೆಯಲ್ಲಿ ಸೋಲಲಿದೆ. ಸಾಮಾನ್ಯ ವ್ಯಕ್ತಿಯಾಗಿರುವ ಶ್ರೀನಿವಾಸ್ ದಾಸಕರಿಯಪ್ಪ, ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ್ ಗೆಲ್ಲುವರು. ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ಎರಡು ಕ್ಷೇತ್ರದಲ್ಲಿ ಗೆಲುವನ್ನು ತಡೆಯಲು ಯಾರಿಗೂ ತಡೆಯಲು ಆಗುವುದಿಲ್ಲ ಎಂದು ಹೇಳಿದರು.

