ಸುಳ್ಯ: ಜೂನ್ ತಿಂಗಳಲ್ಲಿ ಅನಿಯಮಿತವಾಗಿದ್ದ ಮಳೆ, ಇದೀಗ ಜೋರಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಕಂಡುಬರುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿದೆ.
ಮನೆ-ಮನೆ ಲಾರ್ವಾ ಸಮೀಕ್ಷೆ, ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಆರೋಗ್ಯ ಸಿಬ್ಬಂದಿ ನಡೆಸುತ್ತಿದ್ದಾರೆ.
ಸುಳ್ಯ ತಾಲೂಕಿನಲ್ಲಿ ಅಡಿಕೆ ಮತ್ತು ರಬ್ಬರ್ ತೋಟಗಳಲ್ಲಿ ವಿಶೇಷ ನಿಗಾ ಇಡಲಾಗಿದೆ.
ಜಿಲ್ಲೆಯಲ್ಲಿ 26 ಡೆಂಗ್ಯೂ ಪ್ರಕರಣ ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಜಿಲ್ಲೆಯ ಹೊರಗಿನವರನ್ನು ಹೊರತುಪಡಿಸಿ ಇದುವರೆಗೆ ದ.ಕ.ಜಿಲ್ಲೆಯಲ್ಲಿ 26 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದು, ಮಧ್ಯಂತರ ಮಳೆಯೊಂದಿಗೆ ಸೋಂಕಿನ ಪ್ರಮಾಣ ಕ್ರಮೇಣ ಏರಿಕೆಯಾಗುತ್ತಿದೆ. ಜಿಲ್ಲೆಯ ಮೂವರು ಮಕ್ಕಳು ಡೆಂಗ್ಯೂ ಸೋಂಕಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಶಾಲೆ ಹಾಗೂ ಕಾಲೇಜುಗಳಲ್ಲೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತೀವ್ರ ನಿಗಾ
ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ|ಆಶಾ ಅವರ ಪ್ರಕಾರ, ಸುಳ್ಯದಲ್ಲಿ ಈತನಕ ಡೆಂಗ್ಯೂ ಪ್ರಕರಣ ಕಂಡು ಬಂದಿಲ್ಲ. ಮುನ್ನೆಚ್ಚೆರಿಕೆ ಕ್ರಮವಾಗಿ ನಿರ್ಮಾಣ ಹಂತದ ಕಟ್ಟಡಗಳು, ಶಾಲಾ-ಕಾಲೇಜುಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತರು, ಆರೋಗ್ಯ ನಿರೀಕ್ಷಕರು ಹಾಗೂ ಹೆಚ್ಚುವರಿ ಸ್ವಯಂ ಸೇವಕರು ತಿಂಗಳ ಮೊದಲ, ಮೂರನೇ ವಾರದ ಶುಕ್ರವಾರ ಮನೆ-ಮನೆಗೆ ತೆರಳಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ಪತ್ತೆಹಚ್ಚಿ ನಿರ್ಮೂಲನೆ ಮಾಡುತ್ತಿದ್ದಾರೆ.
ಚಿಕಿತ್ಸೆ ಹೇಗೆ?
ಡೆಂಗ್ಯೂಗೆ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇಲ್ಲ. ಜ್ವರ ಅಥವಾ ಡೆಂಗ್ಯೂ ಲಕ್ಷಣಗಳು ಕಂಡುಬಂದ ತಕ್ಷಣ ಸಮೀಪದ ಸರಕಾರಿ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು.
ಪ್ಲೇಟ್‌ಲೆಟ್ ಆತಂಕ ಬೇಡ
ಡೆಂಗ್ಯೂ ಬಂದರೆ ಎಲ್ಲರಲ್ಲೂ ಪ್ಲೇಟ್‌ಲೆಟ್ ಅಪಾಯಕಾರಿಯಾಗಿ ಕಡಿಮೆಯಾಗುತ್ತದೆ ಎಂಬುದು ತಪ್ಪು ಕಲ್ಪನೆ. ಅಗತ್ಯವಿರುವ ರೋಗಿಗಳಿಗೆ ವೈದ್ಯರ ಮೇಲ್ವಿಚಾರಣೆಯಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಅಗತ್ಯವಿದ್ದಲ್ಲಿ ಪ್ಲೇಟ್ ಲೆಟ್ ವ್ಯವಸ್ಥೆ ಲಭ್ಯವಿದೆ. ಗಂಭೀರ ಪ್ರಕರಣಗಳ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಆಯ್ದ ತಾಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳ ಸೇವೆ ಲಭ್ಯವಿದೆ.
ಸೊಳ್ಳೆ ನಿಯಂತ್ರಣವೇ ಪ್ರಧಾನ
ನೀರಿನ ತೊಟ್ಟಿಗಳು, ಡ್ರಮ್, ಬ್ಯಾರೆಲ್ ಹಾಗೂ ಏರ್‌ಕೂಲರ್‌ಗಳನ್ನು ವಾರಕ್ಕೊಮ್ಮೆ ಸ್ವಚ್ಛ ಗೊಳಿಸಿ ಮುಚ್ಚಳದಿಂದ ಮುಚ್ಚಿಡಬೇಕು. ತೆಂಗಿನ ಚಿಪ್ಪು, ಎಳನೀರಿನ ಚಿಪ್ಪು, ಹಳೆಯ ಟಯರ್, ಒಡೆದ ಬಾಟಲಿ ಸೇರಿದಂತೆ ನೀರು ನಿಲ್ಲುವ ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಬೇಕು. ಮನೆ, ಶಾಲೆ, ಅಂಗಡಿ ಹಾಗೂ ತೋಟಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
ಆರೋಗ್ಯ ಇಲಾಖೆಯ ಸೊಳ್ಳೆ ನಿಯಂತ್ರಣ ಕಾರ್ಯಕ್ರಮಗಳಿಗೆ ಸಹಕರಿಸುವ ಜೊತೆಗೆ ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿವಾರಕಗಳನ್ನು ಬಳಸಬೇಕು. ಜ್ವರ ಕಾಣಿಸಿಕೊಂಡ ಕೂಡಲೇ ವೈದ್ಯರಿಗೆ ತೋರಿಸುವುದು ತುಂಬಾ ಮುಖ್ಯ.
ತೋಟಗಳ ಮೇಲೆ ನಿಗಾ ಇಡಿ
ಸುಳ್ಯ ಹಾಗೂ ಸುತ್ತಮುತ್ತ ಅಡಿಕೆ ಮತ್ತು ರಬ್ಬರ್ ತೋಟಗಳು ಹೆಚ್ಚಿರುವುದರಿಂದ ತೋಟಗಳಲ್ಲಿ ಬಳಸುವ ತೆಂಗಿನ ಚಿಪ್ಪುಗಳು, ಕತ್ತರಿಸಿದ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಒಣ ಅಡಿಕೆ ಎಲೆಗಳಲ್ಲಿ ಮಳೆನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಬೇರೆತಾಲೂಕಿನಲ್ಲಿ ಇಂತಹ ಸ್ಥಳಗಳಲ್ಲಿ ಸೊಳ್ಳೆ ಲಾರ್ವಾಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತೋಟದ ಮಾಲಕರು ಹಾಗೂ ಗ್ರಾಮ ಪಂಚಾಯತ್‌ಗಳು ವಿಶೇಷ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಈ ಕುರಿತು ರಬ್ಬರ್‌ಬೋರ್ಡ್‌ಗೂ ಪತ್ರ ಬರೆಯಲು ಇಲಾಖೆ ನಿರ್ಧರಿಸಿದೆ.

