Tuesday, 20 Oct, 6.15 am ಉದಯವಾಣಿ

ಟಾಪ್ 10 ಸುದ್ದಿ
ದೇಶ ಉನ್ನತ ಶಿಕ್ಷಣದ ಗ್ಲೋಬಲ್‌ ಹಬ್‌ ಆಗಲಿ

ಮೈಸೂರು: ಭಾರತವನ್ನು ಉನ್ನತ ಶಿಕ್ಷಣದ ಗ್ಲೋಬಲ್‌ ಹಬ್‌ ಮಾಡುವ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವದಲ್ಲಿ ವಚ್ಯುìವಲ್‌ ಲೈವ್‌ ಮೂಲಕ ಮಾತನಾಡಿದ ಮೋದಿ, ನೂತನ ಶಿಕ್ಷಣ ವ್ಯವಸ್ಥೆಯ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ಐದಾರು ವರ್ಷಗಳಿಂದ ಭಾರತದ ಶಿಕ್ಷಣ ವ್ಯವಸ್ಥೆ ಪರಿವರ್ತನೆಯಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಯುವಕರು ಸ್ಪರ್ದಿಸುವ ನಿಟ್ಟಿನಲ್ಲಿ ಅವರನ್ನು ತಯಾರು ಮಾಡಬೇಕಾಗಿದೆ. ಇದೇ ಉದ್ದೇಶದಿಂದ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕಾಗಿ ಕೇಂದ್ರ ಸರಕಾರ ಶ್ರಮಿಸುತ್ತಿದೆ ಎಂದರು.

ದೊಡ್ಡ ಅಭಿಯಾನ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಲ್ಲಿ ಪ್ರಿ ನರ್ಸರಿಯಿಂದ ಆರಂಭಿಸಿ ಪಿಎಚ್‌.ಡಿ ಪಡೆಯುವವರೆಗೂ ಪೂರ್ತಿ ಬದಲಾವಣೆ ತರುವ ದೊಡ್ಡ ಅಭಿಯಾನವಾಗಿದೆ. ಇದಕ್ಕಾಗಿ ಕೌಶಲವೃದ್ಧಿ, ಕೌಶಲ ಪುನರ್‌ವೃದ್ಧಿ ಮತ್ತು ಕೌಶಲೋನ್ನತಿ ನಡೆಯಬೇಕಾಗಿದೆ ಎಂದು ಕರೆ ನೀಡಿದರು.

ಸುಧಾರಣೆಯತ್ತ ಭಾರತ
ದೇಶದಲ್ಲಿ ಈ ಹಿಂದೆ 16 ಐಐಟಿ ಕೇಂದ್ರಗಳಿದ್ದವು. ಕಳೆದ ಆರು ವರ್ಷಗಳಿಂದ ಪ್ರತೀ ವರ್ಷ ಹೊಸ ಐಐಟಿ ಆರಂಭವಾಗುತ್ತಿದೆ. ಅದರಲ್ಲಿ ಒಂದು ಕರ್ನಾಟಕದ ಧಾರವಾಡದಲ್ಲಿದೆ. ದೇಶದಲ್ಲಿ ಈ ಮುಂಚೆ 13 ಐಐಎಂ ಕೇಂದ್ರಗಳಿದ್ದವು. ಐದು ವರ್ಷಗಳಲ್ಲಿ 7 ಹೊಸ ಐಐಎಂಗಳು ಆರಂಭವಾಗಿವೆ. ಸರಕಾರವು ಹೊಸ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ, ಆಡಳಿತಾತ್ಮಕ ಬದಲಾವಣೆಯನ್ನೂ ತರುತ್ತಿದೆ ಎಂದರು.

ರಾಧಾಕೃಷ್ಣನ್‌ ಈ ವಿ.ವಿ.ಯ ಕೊಡುಗೆ
ಭಾಷಣದ ಮೊದಲಿಗೆ, “ಎಲ್ಲರಿಗೂ ನಾಡಹಬ್ಬ ಮೈಸೂರು ದಸರಾದ ಶುಭಾಶಯಗಳು’ ಎಂದು ಕನ್ನಡದಲ್ಲಿ ಶುಭಕೋರಿದ ಪ್ರಧಾನಿ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ಸ್ಮರಿಸಿದರು. ಒಡೆಯರ್‌ ಮತ್ತು ಸರ್‌ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫ‌ಲವಾಗಿ ಮೈಸೂರು ವಿ.ವಿ. ಸ್ಥಾಪನೆಯಾಗಿದೆ. ಶತಮಾನದ ಹಿಂದೆ ನಾಲ್ವಡಿ ಮಹಾರಾಜರು ಮೊದಲ ಘಟಿಕೋತ್ಸವ ಭಾಷಣ ಮಾಡಿದ್ದರು. ಅನಂತರ ಈ ರತ್ನಗರ್ಭ ಪ್ರಾಂಗಣದಲ್ಲಿ ಇಂದಿನವರೆಗೂ ಅನೇಕ ಮಹಾನ್‌ ವ್ಯಕ್ತಿಗಳು ಪದವಿ ಪಡೆದಿದ್ದಾರೆ. ಅವರಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್‌ ಕೂಡ ಒಬ್ಬರು ಎಂದು ಸ್ಮರಿಸಿದರು. ಕುವೆಂಪು ಅವರು ಈ ಕ್ಯಾಂಪಸ್‌ಗೆ ಮಾನಸ ಗಂಗೋತ್ರಿ ಎಂದು ಹೆಸರಿಟ್ಟಿದ್ದಾರೆ. ಆ ಹೆಸರಿನಂತೆ ನಮ್ಮ ಮನಸ್ಸಿನ ಯೋಚನೆಗಳು ಸದಾ ಚಲನಶೀಲವಾಗಿರಬೇಕು ಎಂದರು.

ಗೊರೂರು ರಾಮಸ್ವಾಮಿ ಸ್ಮರಣೆ
ಶಿಕ್ಷಣದ ಮಹತ್ವವನ್ನು ಪ್ರತಿಪಾದಿಸುವ ನಡುವೆ ಪ್ರಧಾನಿ, ಕನ್ನಡದ ಶ್ರೇಷ್ಠ ಲೇಖಕರಲ್ಲಿ ಒಬ್ಬರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ಹೆಸರನ್ನು ಉಲ್ಲೇಖೀಸಿದರು. ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ “ಶಿಕ್ಷಣವೇ ಜೀವನದ ಬೆಳಕು’ ಎಂಬ ಮಾತನ್ನು ಉದ್ಧರಿಸಿದ ಪ್ರಧಾನಿ ಮೋದಿ, “ದೇಶ ಪರಿವರ್ತನೆಯತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ಗೊರೂರು ಅವರ ಹೇಳಿಕೆ ಅತ್ಯಂತ ಪ್ರಸ್ತುತ’ ಎಂದರು.

ಸಶಕ್ತ ಭಾರತ ಸೃಷ್ಟಿಗಾಗಿ ಕ್ಷಿಪ್ರ ಬದಲಾವಣೆ
ಕೃಷಿ, ಬಾಹ್ಯಾಕಾಶ, ರಕ್ಷಣೆ, ವಾಯುಯಾನ ಅಥವಾ ಕಾರ್ಮಿಕ ಕ್ಷೇತ್ರ- ಯಾವುದೇ ಆಗಿರಲಿ, ಕಳೆದ ಆರೇಳು ತಿಂಗಳುಗಳಲ್ಲಿ ದೇಶದಲ್ಲಿ ಕಂಡುಬರುತ್ತಿರುವ ಸುಧಾರಣೆಗಳ ವೇಗ ಮತ್ತು ವ್ಯಾಪ್ತಿ ಬದಲಾಗಿರುವುದನ್ನು ನೀವು ಗಮನಿಸಿರಬಹುದು. ಪ್ರಗತಿಗೆ ಅಗತ್ಯವಿರುವ ಎಲ್ಲ ಬದಲಾವಣೆಗಳನ್ನೂ ತರಲಾಗುತ್ತಿದೆ. ನಾವು ನಮ್ಮ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡಾಗಲೇ ಮುಂದಿನ ದಶಕಗಳನ್ನು ಭಾರತದವನ್ನಾಗಿ ಪರಿವರ್ತಿಸಬಹುದಾಗಿದೆ. ದೇಶದ ಯುವ ಜನಾಂಗವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಸಶಕ್ತ ಭಾರತದ ಸೃಷ್ಟಿಗಾಗಿಯೇ ಈ ಬದಲಾವಣೆಗಳನ್ನು ತರಲಾಗುತ್ತದೆ ಎಂದು ಮೋದಿ ಹೇಳಿದರು. ಮೈಸೂರು ವಿ.ವಿ.ಯ ಪ್ರಥಮ ಘಟಿಕೋತ್ಸವ ಭಾಷಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ವಿ.ವಿ.ಯಿಂದ ಹೆಚ್ಚು ಯುವತಿಯರು ಪದವೀಧರರಾಗಿ ಹೊರಹೊಮ್ಮಬೇಕು ಎಂದು ಆಶಿಸಿದ್ದನ್ನು ಸ್ಮರಿಸಿಕೊಂಡ ಪ್ರಧಾನಿ, ಶಿಕ್ಷಣದ ಎಲ್ಲ ಹಂತಗಳಲ್ಲಿ ಹುಡುಗರಿಗಿಂತ ಹುಡುಗಿಯರ ಒಳಗೊಳ್ಳುವಿಕೆಯೇ ಹೆಚ್ಚಿದೆ ಎಂದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top