ರಾಯಚೂರು: ಚಲಿಸುತ್ತಿದ್ದ ಟಿಪ್ಪರ್ ನ ಟೈರ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡ ಘಟನೆ ದೇವದುರ್ಗ ತಾಲೂಕಿನಲ್ಲಿ ಗುರುವಾರ (ಜು.02) ಬೆಳಗ್ಗೆ ನಡೆದಿದೆ.
ಶಿರವಾರ ಕ್ರಾಸ್ ಬಳಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಟೈರ್ ಬ್ಲಾಸ್ಟ್ ಆಗಿದೆ. ಟೈರ್ ಸ್ಫೋಟದಿಂದ ಟಿಪ್ಪರ್ ಹೊತ್ತಿ ಉರಿದಿದೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಣಕ್ಕೆ ತಂದರು. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ. ಘಟನೆಯಲ್ಲಿ ಟಿಪ್ಪರ್ಗೆ ಭಾರೀ ಪ್ರಮಾಣದ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
ಘಟನೆಯಿಂದ ಕೆಲಕಾಲ ವಾಹನ ಸಂಚಾರದಲ್ಲಿ ಅಡಚಣೆಯಾಗಿದೆ. ಟೈರ್ ಸ್ಫೋಟಕ್ಕೆ ನಿಖರ ಕಾರಣದ ತನಿಖೆ ಮುಂದುವರಿದಿದೆ.

