Dailyhunt Logo
  • Light mode
    Follow system
    Dark mode
    • Play Story
    • App Story
'ದೇವರ ಆಟ'ವನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವೇ?:ಆದಿತ್ಯ ಠಾಕ್ರೆಗೆ ಸ್ಪೀಕರ್ ಪ್ರಶ್ನೆ

'ದೇವರ ಆಟ'ವನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವೇ?:ಆದಿತ್ಯ ಠಾಕ್ರೆಗೆ ಸ್ಪೀಕರ್ ಪ್ರಶ್ನೆ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬುಧವಾರ ಭಾರಿ ಮಳೆ ಹಾಗೂ ಅದರಿಂದ ಉಂಟಾಗಿರುವ ಹಾನಿಗಳ ಕುರಿತಾದ ಚರ್ಚೆಯ ವೇಳೆ ಸ್ಪೀಕರ್ ರಾಹುಲ್ ನಾರ್ವೇಕರ್ ಮತ್ತು ಶಿವಸೇನೆ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ನಡುವೆ "ದೇವರ ಆಟ" (ಆಕ್ಟ್ ಆಫ್ ಗಾಡ್) ಎಂಬ ವಿಷಯದ ಕುರಿತು ತೀವ್ರ ವಾಕ್ಸಮರ ನಡೆದಿದೆ.

ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಮುಂಬೈ ಸೇರಿದಂತೆ ಹಲವೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಗಂಭೀರ ಪರಿಸ್ಥಿತಿಯ ಕುರಿತು ತಕ್ಷಣವೇ ಸದನದಲ್ಲಿ ಚರ್ಚೆ ಆರಂಭಿಸಬೇಕೆಂದು ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. ಸದ್ಯ ರಾಜ್ಯದ ಮುಂದಿರುವ ಅತ್ಯಂತ ತುರ್ತು ಮತ್ತು ಪ್ರಮುಖ ವಿಷಯ ಇದೇ ಆಗಿರುವುದರಿಂದ ಬೇರೆಲ್ಲಾ ಕಲಾಪಗಳನ್ನು ಬದಿಗಿಟ್ಟು ಮಳೆಯ ಪರಿಸ್ಥಿತಿಯ ಬಗ್ಗೆ ಚರ್ಚಿಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದವು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು, ಮಳೆ ಹಾನಿ ಕುರಿತಾದ ಅಲ್ಪಾವಧಿ ಚರ್ಚೆಯನ್ನು ಗುರುವಾರ ಕೈಗೆತ್ತಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಮಳೆಯ ಭೀಕರತೆಗೆ ಜಾಗತಿಕ ಹವಾಮಾನ ವೈಪರೀತ್ಯವೇ ಪ್ರಮುಖ ಕಾರಣ ಎಂದು ಉಲ್ಲೇಖಿಸಿದ ಸ್ಪೀಕರ್, ಇಂತಹ ಪ್ರಕೃತಿ ವಿಕೋಪಗಳನ್ನು ಅಥವಾ ದೇವರ ಆಟವನ್ನು ಯಾರೂ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಸ್ಪೀಕರ್ ಅವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಿವಸೇನೆ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ, "ರಾಜ್ಯದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ಮತ್ತು ಮ್ಯಾಂಗ್ರೋವ್ (ಕಡಲತೀರದ ಜೌಗುಕಾಡು) ಕಾಡುಗಳನ್ನು ಮನಬಂದಂತೆ ಕತ್ತರಿಸಲಾಗುತ್ತಿದೆ. ಇದರ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತದೆಯೇ? ಮರಗಳನ್ನು ಕತ್ತರಿಸಿ ಪ್ರಕೃತಿ ನಾಶ ಮಾಡುವುದನ್ನೂ ನೀವು ದೇವರ ಆಟ ಎನ್ನುತ್ತೀರಾ?" ಎಂದು ಖಾರವಾಗಿ ಪ್ರಶ್ನಿಸಿದರು.

ಆದಿತ್ಯ ಠಾಕ್ರೆ ಅವರ ಈ ಪ್ರಶ್ನೆಯಿಂದ ಕೆರಳಿದ ಸ್ಪೀಕರ್ ನಾರ್ವೇಕರ್, "ಹಾಗಿದ್ದರೆ ಪ್ರಕೃತಿಯ ಈ ದೇವರ ಆಟವನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವಿದೆಯೇ?" ಎಂದು ಮರುಪ್ರಶ್ನೆ ಹಾಕಿದರು. ಇದರಿಂದ ಸದನದಲ್ಲಿ ವಾಕ್ಸಮರ ಮತ್ತಷ್ಟು ತಾರಕಕ್ಕೇರಿತು. ಇದೇ ವೇಳೆ ಚರ್ಚೆಯ ದಿಕ್ಕನ್ನು ಬದಲಿಸಿದ ಆದಿತ್ಯ ಠಾಕ್ರೆ, ಅಯೋಧ್ಯೆಯ ರಾಮ ಮಂದಿರಕ್ಕೆ ಬಂದಿರುವ ಕಾಣಿಕೆ ಹಣದಲ್ಲಿ ಭಾರಿ ಅವ್ಯವಹಾರ ಮತ್ತು ದುರುಪಯೋಗ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.

ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಉಭಯ ಬಣಗಳ ಶಾಸಕರು ಪರಸ್ಪರ ವಿರುದ್ಧವಾಗಿ ಜೋರಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಸದನದಲ್ಲಿ ಗದ್ದಲ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಕಲಾಪವನ್ನು ಐದು ನಿಮಿಷಗಳ ಕಾಲ ಮುಂದೂಡಬೇಕಾಯಿತು.

ಕಳೆದ ಕೆಲವು ದಿನಗಳಿಂದ ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಅಬ್ಬರದ ಮಳೆಯಾಗುತ್ತಿದ್ದು, ನೂರಾರು ಮರಗಳು ಧರಾಶಾಹಿಯಾಗಿವೆ. ಹಲವೆಡೆ ಪ್ರಾಣಹಾನಿ ಸಂಭವಿಸಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ರಸ್ತೆಗಳು ಕೆರೆಯಂತಾಗಿದ್ದು, ರೈಲು, ರಸ್ತೆ ಮತ್ತು ವಾಯು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani