ಧಾರವಾಡ : ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಎದುರಾಗಿದ್ದು ಶೀಘ್ರವೇ ಮೊಡ ಬಿತ್ತನೆ ಮಾಡಬೇಕಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರ್ಕಿಹೊಳಿ ಹೇಳಿದರು.
ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಮೋಡ ಬಿತ್ತನೆ ಮಾಡುವುದು ತುಂಬಾ ಒಳ್ಳೆಯದು.
ಈ ಹಿಂದಿನ ವರ್ಷಗಳಲ್ಲಿ ಮಳೆ ಹೋದಾಗ ಮೋಡ ಬಿತ್ತನೆ ಮಾಡಿದ್ದರಿಂದ ಉತ್ತಮ ಮಳೆಯಾಗಿ ಬರಗಾಲ ದೂರವಾಗಿತ್ತು. ಮೋಡಗಳು ಇದ್ದಾಗಲೇ ಮೋಡ ಬಿತ್ತನೆ ಪ್ರಕ್ರಿಯೆ ಮಾಡಬೇಕಾಗುತ್ತದೆ ಎಂದರು.
ಇನ್ನೆರಡು ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಆರಂಭವಾಗುತ್ತದೆ. ಅದರಂತೆ ಈ ಭಾಗದಲ್ಲಿಯೂ ಮೊಡ ಬಿತ್ತನೆ ಮಾಡುವ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿಗೆ ತೊಂದರೆ ಇಲ್ಲ. ಸ್ಥಳಿಯವಾಗಿ ಇರುವ ತೊಂದರೆಗಳನ್ನು ಶಾಸಕರು ಬಗೆ ಹರಿಸಿದ್ದಾರೆ. ಅವಳಿ ನಗರಕ್ಕೆ ಮುಂದಿನ 8 ತಿಂಗಳಿಗೆ ಆಗುವಷ್ಟು ನೀರು ಮಲಪ್ರಭಾ ಅಣೆಕಟ್ಟೆಯಲ್ಲಿ ಸಂಗ್ರಹವಿದೆ ಎಂದರು.
ಮಳೆಯಿಂದಾಗಿ ಹಾಳಾಗಿರುವ ಜಿಲ್ಲೆಯ ರಸ್ತೆಗಳನ್ನು ಸುಧಾರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಅಲ್ಲದೇ ಮುಂದಿನ ದಿನಗಳಲ್ಲಿ ಧಾರವಾಡ ಜಿಲ್ಲೆಯ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೂ ಸೂಕ್ತ ಕ್ರಮ ವಹಿಸುತ್ತೇವೆ ಎಂದು ಸಚಿವ ಜಾರ್ಕಿಹೊಳಿ ಹೇಳಿದರು.
ಸೂಪಾ-ಅಣ್ಣಿಗೇರಿ ರಸ್ತೆ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವ ವಿಚಾರವಾಗಿ ಈ ರಸ್ತೆ ಹಾದು ಹೋಗುವ ವಿಧಾನಸಭಾ ಕ್ಷೇತ್ರಗಳ ಶಾಸಕರ ಜೊತೆಗೆ ಚರ್ಚಿಸಿ ಕ್ರಮ ವಹಿಸುತ್ತೇನೆ ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದರು.
ಎಲ್ ಆಂಡ್ ಟಿ ಸಂಸ್ಥೆ ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ. ತನ್ನ ಕಾಮಗಾರಿಗಳನ್ನುಸ ರಿಯಾಗಿ ಮಾಡಿಲ್ಲ. ಈ ಬಗ್ಗೆಯೂ ಚರ್ಚಿಸಿ ಕ್ರಮ ವಹಿಸುವುದಾಗಿ ಹೇಳಿದರು.
ಎಸ್ ಐ ಆರ್ ಗೆ ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧಿ ಮಾಡಿಲ್ಲ. ಎಲ್ಲೋ ಕೆಲವು ಘಟನೆ ನಡೆದಿವೆ. ಅವರಿಗೂ ಮತದಾರರು ಬೇಕು. ನಮಗೂ ಮತದಾರರು ಬೇಕು.
- ಸತೀಶ್ ಜಾರ್ಕಿಹೊಳಿ, ಲೋಕೋಪಯೋಗಿ ಸಚಿವ.

