ಚೆನ್ನೈ/ಹೈದರಾಬಾದ್: 2026ರ ಮೊದಲ ಮೂರು ತಿಂಗಳು ದಕ್ಷಿಣ ಭಾರತದ ಚಿತ್ರರಂಗಕ್ಕೆ ನಿರೀಕ್ಷಿತ ಯಶಸ್ಸು ತಂದುಕೊಟ್ಟಿಲ್ಲ. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರರಂಗಗಳಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಹಿಟ್ ಎನಿಸಿಕೊಂಡಿವೆ.
ತೆಲುಗು ಚಿತ್ರರಂಗವನ್ನು ಹೊರತುಪಡಿಸಿ, ಉಳಿದ ಯಾವುದೇ ಭಾಷೆಯ ಚಿತ್ರಗಳು ರೂ.
100 ಕೋಟಿ ಗಡಿಯನ್ನು ದಾಟಲು ಪರದಾಡಿವೆ. ಸದ್ಯಕ್ಕೆ ದಕ್ಷಿಣ ಚಿತ್ರರಂಗ ಮಂಕಾಗಿದ್ದರೂ, ಎರಡನೇ ತ್ರೈಮಾಸಿಕದ ಮೇಲೆ ಭಾರೀ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.
ಸ್ಯಾಂಡಲ್‌ವುಡ್: ಕನ್ನಡಿಗರಿಗೆ ನಿರಾಸೆ ಮೂಡಿಸಿದ ಆರಂಭ
ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಬಿಡುಗಡೆಯಾದ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡಲು ವಿಫಲವಾಗಿವೆ. ಇದುವರೆಗೆ ತೆರೆಕಂಡಿರುವ ಸಿನಿಮಾಗಳ ಪೈಕಿ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ ಯಶಸ್ಸು ಕಂಡಿದೆ.
ಯಶಸ್ಸು ಕಂಡಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ..
ರಾಜ್ ಬಿ ಶೆಟ್ಟಿ ಅವರ 'ರಕ್ಕಸಪುರದೊಳ್', ದುನಿಯಾ ವಿಜಯ್ ಅವರ 'ಲ್ಯಾಂಡ್‌ಲಾರ್ಡ್' ಮತ್ತು ಕೃಷ್ಣ ಅಭಿನಯದ 'ಲವ್ ಮಾಕ್‌ಟೇಲ್ 3' ಚಿತ್ರಗಳು ಪ್ರೇಕ್ಷಕರ ಮನಗೆಲ್ಲುವುದರ ಜತೆಗೆ ಬಾಕ್ಸಾಫೀಸ್‌ನಲಲ್ಲೂ ಒಂದಷ್ಟು ಗಳಿಕೆ ಕಂಡಿದೆ.
ʼಲವ್ ಮಾಕ್‌ಟೇಲ್ 3ʼ ಗಳಿಕೆ:
ಡಾರ್ಲಿಂಗ್ ಕೃಷ್ಣ (Darling Krishna) ಅವರ 'ಲವ್ ಮಾಕ್‌ಟೇಲ್ 3' ಸುಮಾರು ರೂ. 12 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಚಿತ್ರಕ್ಕೆ ಕರ್ನಾಟಕದಲ್ಲೇ ರಣವೀರ್ ಸಿಂಗ್ ಅಭಿನಯದ ಹಿಂದಿ ಸಿನಿಮಾ 'ಧುರಂಧರ್ -2'ಗೆ ಟಕ್ಕರ್ ನೀಡಿದೆ. ಧುರಂಧರ್ -2 ಕರ್ನಾಟಕದಲ್ಲೇ ರೂ. 53 ಕೋಟಿ ಬಾಚಿಕೊಂಡಿದೆ. ಇದಕ್ಕೆ ʼಲವ್ ಮಾಕ್ಟೇಲ್ -3ʼ ಸ್ವಲ್ಪ ಪೈಪೋಟಿ ಕೊಟ್ಟಿತು ಎಂದರೆ ತಪ್ಪಾಗದು.

'ಲ್ಯಾಂಡ್‌ಲಾರ್ಡ್': ಜಡೇಶ್ ಕೆ ಹಂಪಿ ನಿರ್ದೇಶನದ, ದುನಿಯಾ ವಿಜಯ್, ರಚಿತಾ ರಾಮ್ ಅವರ ʼಲ್ಯಾಂಡ್ ಲಾರ್ಡ್ʼ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ಕೇಳಿ ಬಂತು. ʼಸ್ಯಾಕ್ನಿಲ್ಕ್ʼ ವರದಿಯ ಪ್ರಕಾರ ಚಿತ್ರ 7 ಕೋಟಿ ರೂ. ಗಳಿಕೆ ಕಂಡಿದೆ.
'ರಕ್ಕಸಪುರದೊಳ್':
ರಾಜ್ ಬಿ ಶೆಟ್ಟಿ ಅವರ 'ರಕ್ಕಸಪುರದೊಳ್' ಚಿತ್ರ ವರದಿಗಳ ಪ್ರಕಾರ, ರೂ. 5 ಕೋಟಿ ಗಳಿಕೆ ಕಂಡಿದೆ.
ಮುಂದಿನ ದಿನಗಳಲ್ಲಿದೆ ನಿರೀಕ್ಷೆ..
ಏಪ್ರಿಲ್ 30ರಂದು ಬಿಡುಗಡೆಯಾಗಲಿರುವ ಧ್ರುವ ಸರ್ಜಾ ನಟನೆಯ 'ಕೆಡಿ: ದಿ ಡೆವಿಲ್' ಚಿತ್ರದ ಮೇಲೆ ಸ್ಯಾಂಡಲ್‌ವುಡ್ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ.
ಟಾಲಿವುಡ್: ಸಂಕ್ರಾಂತಿ ಮತ್ತು ಕೌಟುಂಬಿಕ ಚಿತ್ರಗಳ ಆರ್ಭಟ:
ದಕ್ಷಿಣದ ಉಳಿದ ಚಿತ್ರರಂಗಗಳಿಗೆ ಹೋಲಿಸಿದರೆ ತೆಲುಗು ಚಿತ್ರರಂಗ ಉತ್ತಮ ಸಾಧನೆ ಮಾಡಿದೆ. ಇಲ್ಲಿ ಹಳೆಯ ಶೈಲಿಯ ಕೌಟುಂಬಿಕ ಸಿನಿಮಾಗಳಿಗೆ ಪ್ರೇಕ್ಷಕರು ಜೈ ಎಂದಿದ್ದಾರೆ.
ಮೆಗಾ ಹಿಟ್: ಚಿರಂಜೀವಿ ಮತ್ತು ಅನಿಲ್ ರವಿಪುಡಿ ಜೋಡಿಯ 'ಮನ ಶಂಕರ ವರ ಪ್ರಸಾದ್ ಗಾರು' ಭರ್ಜರಿ ರೂ. 300 ಕೋಟಿ ಗಳಿಸಿ ಈ ತ್ರೈಮಾಸಿಕದ ಅತಿದೊಡ್ಡ ಹಿಟ್ ಎನಿಸಿಕೊಂಡಿದ್ದು, ಚಿರಂಜೀವಿ ಅವರಿಗೆ ದೊಡ್ಡ ಕಂಬ್ಯಾಕ್ ಮಾಡಿಕೊಟ್ಟಿದೆ.

ಗಳಿಕೆ ಕಂಡರೂ ಮೋಡಿ ಮಾಡದ ಪ್ರಭಾಸ್: ಡಾರ್ಲಿಂಗ್ ಪ್ರಭಾಸ್ ಅವರ ಬಹುನಿರೀಕ್ಷಿತ 'ದಿ ರಾಜಾ ಸಾಬ್' ಪ್ಯಾನ್ ಇಂಡಿಯಾದಲ್ಲಿ ತೆರೆಕಂಡು ದೊಡ್ಡ ಮಟ್ಟದ ಯಶಸ್ಸು ಕಾಣುತ್ತದೆ ಎನ್ನುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ಆದರೆ ಹಾರರ್ - ಕಾಮಿಡಿ ಚಿತ್ರ ರಿಲೀಸ್ ಆದ ಕೆಲವೇ ದಿನಗಳಲ್ಲಿ ಥಿಯೇಟರ್‌ನಿಂದ ಮಾಯಾವಾಯಿತು. 400 ಕೋಟಿ ರೂ. ಬಜೆಟ್‌ನಲ್ಲಿ ಬಂದ ಚಿತ್ರ 200 ಕೋಟಿ ರೂ. ಗಳಿಕೆ ಕಂಡು ನಷ್ಟವನ್ನು ಅನುಭವಿಸಿತು.
ಇತರ ಯಶಸ್ಸು: ನವೀನ್ ಪೋಲಿಶೆಟ್ಟಿ ಅವರ 'ಅನಗನಗ ಒಕ ರಾಜು' ರೂ. 100 ಕೋಟಿ ರೂ. ಗಳಿಕೆ ಕಂಡಿತು. ಆ ಮೂಲಕ ಅನಿರೀಕ್ಷಿತವಾಗಿ ಹಿಟ್ ಲಿಸ್ಟ್‌ಗೆ ಸೇರಿತು.
ಇನ್ನುಳಿದಂತೆ 'ನಾರಿ ನಾರಿ ನಡುಮ ಮುರಾರಿ' ಮತ್ತು 'ಕಪಲ್ ಫ್ರೆಂಡ್ಲಿ' ಚಿತ್ರಗಳು ಪ್ರೇಕ್ಷಕರ ಮನಗೆದ್ದಿದೆ.
ಸೋಲು ಕಂಡ ನಿರೀಕ್ಷಿತ ಸಿನಿಮಾಗಳು:
100 ಕೋಟಿ ಬ್ಯುಸಿನೆಸ್ ಆದ್ರೂ ಟಾಲಿವುಡ್‌ನಲ್ಲಿ ಕೆಲ ಬಹುನಿರೀಕ್ಷಿತ ಸಿನಿಮಾಗಳು ಹೀನಾಯವಾಗಿ ಸೋಲು ಕಂಡಿದೆ. ಪವನ್ ಕಲ್ಯಾಣ್ ಅವರ ʼಉಸ್ತಾದ್ ಭಗತ್ ಸಿಂಗ್ʼ ಮತ್ತು ರವಿತೇಜ ಅವರ ʼಭರತ ಮನಸಲಕು ವಿಘ್ನಾಯಪತಿʼಯಂತಹ ಚಿತ್ರಗಳು ಮೋಡಿ ಮಾಡುವಲ್ಲಿ ಸೋತಿದೆ.
ಭಾವುಕ ಕಥೆಗಳಿಂದ ಗೆದ್ದ ಕಾಲಿವುಡ್:
ತಮಿಳು ಚಿತ್ರರಂಗಕ್ಕೆ 2026ರ ಆರಂಭ ಅತ್ಯಂತ ಕಠಿಣವಾಗಿತ್ತು. ವಿಜಯ್ ಅವರ ಕೊನೆಯ ಚಿತ್ರ ಎನ್ನಲಾದ 'ಜನ ನಾಯಗನ್' (Jana Nayagan) ಸೆನ್ಸಾರ್ ಮಂಡಳಿಯ ಕಾನೂನು ಹೋರಾಟದಿಂದಾಗಿ ಬಿಡುಗಡೆ ವಿಳಂಬವಾಗಿದ್ದು ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಒಂದು ವೇಳೆ ʼಜನ ನಾಯಗನ್ʼ ರಿಲೀಸ್ ಆಗಿದ್ರೆ ಬಹುಶಃ ಬಾಕ್ಸಾಫೀಸ್‌ನಲ್ಲಿ 100 ಕೋಟಿ ಗಳಿಕೆ ಕಾಣುತ್ತಿತ್ತೇನೋ.
ಗಮನ ಸೆಳೆದ ಸಿನಿಮಾಗಳು:
ಕಾಲಿವುಡ್‌ನಲ್ಲಿ ಹೇಳಿಕೊಳ್ಳುವ ಮಟ್ಟಗಿನ ಯಶಸ್ಸು ಕಂಡ ಚಿತ್ರಗಳಿಲ್ಲ. ಆದರೆ ಪ್ರೇಕ್ಷಕರಿಂದ ಸ್ವಲ್ಪವಾದ್ರೂ ಚಪ್ಪಾಳೆ ಗಿಟ್ಟಿಸಿಕೊಂಡ ಚಿತ್ರ ಹಲವಿದೆ. ಇವುಗಳಲ್ಲಿ ಸುಧಾ ಕೊಂಗರಾ ನಿರ್ದೇಶನದ ಮತ್ತು ಶಿವಕಾರ್ತಿಕೇಯನ್ ನಟನೆಯ 'ಪರಾಶಕ್ತಿ' ಜೀವಾ ಅವರ 'ತಲೈವರ್ ತಂಬಿ ತಲೈಮೈಯಿಲ್' ಸೇರಿದೆ.

ʼಪರಾಶಕ್ತಿʼ ಬಾಕ್ಸಾಫೀಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆಯ ನಡುವೆಯೂ ರೂ. 90 ಕೋಟಿ ಗಳಿಸಿತು. ಇನ್ನು ಜೀವಾ ಅವರ 'ತಲೈವರ್ ತಂಬಿ ತಲೈಮೈಯಿಲ್' 40 ಕೋಟಿ ಗಳಿಕೆ ಕಂಡು ಸಾಧಾರಣ ಹಿಟ್ ಆಗಿ ಮೂಡಿಬಂತು.
ಇನ್ನುಳಿದಂತೆ ಕಾಲಿವುಡ್ ಕೆಲ ಅಚ್ಚರಿಯ ಹಿಟ್‌ಗಳಿಗೆ ಸಾಕ್ಷಿಯಾಗಿದೆ. ಕಡಿಮೆ ಬಜೆಟ್‌ನ 'ತಾಯಿ ಕಿಳವಿ' ರೂ. 75 ಕೋಟಿ ಗಳಿಸಿ ಅಚ್ಚರಿ ಮೂಡಿಸಿತು. ಯುವ ಪ್ರೇಕ್ಷಕರನ್ನು ಸೆಳೆದ 'ವಿತ್ ಲವ್' ಮತ್ತು 'ಯೂತ್' ಚಿತ್ರಗಳು ಕ್ರಮವಾಗಿ ರೂ. 40 ಕೋಟಿ ಮತ್ತು ರೂ. 50 ಕೋಟಿ ಗಳಿಸಿವೆ.
ದೊಡ್ಡ ಹಿಟ್‌ಗಾಗಿ ಕಾಯಿತ್ತಿದೆ ಮಾಲಿವುಡ್:
2024 -2025ರಲ್ಲಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಸದ್ದು ಮಾಡಿದ್ದ ಮಾಲಿವುಡ್ ಚಿತ್ರರಂಗ 2026ರ ಆರಂಭವನ್ನು ತುಸು ನಿಧಾನವಾಗಿ ಮಾಡಿದೆ. 2025ರ ಕೊನೆಯಲ್ಲಿ ʼಸರ್ವಂ ಮಾಯಾʼ ಹಿಟ್ ಲಿಸ್ಟ್‌ಗೆ ಸೇರಿದೆ.
ಆ ಬಳಿಕ 2026ರ ವಿಚಾರಕ್ಕೆ ಬಂದರೆ ಜಯಸೂರ್ಯ ನಟನೆಯ 'ಆಡು 3' ಮಾತ್ರ ರೂ. 100 ಕೋಟಿ ಗಳಿಸಿದ ಏಕೈಕ ಚಿತ್ರವಾಗಿದೆ. ಇನ್ನುಳಿದಂತೆ ರೋಷನ್ ಮ್ಯಾಥ್ಯೂ ಅವರ 'ಚಾತ ಪಚ' ರೂ. 35.51 ಕೋಟಿ ಹಾಗೂ 'ಪ್ರಕಂಪನಂ' ರೂ. 21 ಕೋಟಿ ಗಳಿಸಿವೆ.
ನಿವಿನ್ ಪೌಲಿ, ಜೋಜು ಜಾರ್ಜ್ ಮತ್ತು ಜಯರಾಮ್ ಅವರಂತಹ ದಿಗ್ಗಜರ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಿಲ್ಲ.
ಮುಂದೇನು?:
ಐಪಿಎಲ್ ಪಂದ್ಯಗಳು, ಪರೀಕ್ಷೆಗಳು ಮತ್ತು ತಮಿಳುನಾಡು-ಕೇರಳದ ಚುನಾವಣೆಗಳ ಕಾರಣದಿಂದಾಗಿ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಥಿಯೇಟರ್ ನತ್ತ ಹೆಜ್ಜೆ ಇಡಲು ಹಿಂದೇಟು ಹಾಕಿದ್ದಾರೆ. ಆದರೆ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸಾಲು ಸಾಲು ದೊಡ್ಡ ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು, ದಕ್ಷಿಣ ಚಿತ್ರರಂಗ ಮತ್ತೆ ಪುಟಿದೇಳುವ ವಿಶ್ವಾಸದಲ್ಲಿದೆ.

