Dailyhunt
Diabetes: ಮಧುಮೇಹದಲ್ಲಿವೆ ಹಲವು ವಿಧಗಳು

Diabetes: ಮಧುಮೇಹದಲ್ಲಿವೆ ಹಲವು ವಿಧಗಳು

ಧುಮೇಹವು ನಮ್ಮ ಜನ ಸಮುದಾಯದಲ್ಲಿ ಅತೀ ಹೆಚ್ಚು ಕಂಡುಬರುವ ದೀರ್ಘ‌ಕಾಲದ ಕಾಯಿಲೆಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಮಧುಮೇಹವನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ: ಟೈಪ್‌ 1 ಮಧುಮೇಹ (T1DM) ಮತ್ತು ಟೈಪ್‌ 2 ಮಧುಮೇಹ (T2DM).

ಟೈಪ್‌ 1ರಲ್ಲಿ ಇನ್ಸುಲಿನ್‌ನ ಸಂಪೂರ್ಣ ಕೊರತೆ ಇರುತ್ತದೆ.

ಟೈಪ್‌ 2ರಲ್ಲಿ ಇನ್ಸುಲಿನ್‌ ಪ್ರತಿರೋಧದ ಕಾರಣದಿಂದಾಗಿ ಇನ್ಸುಲಿನ್‌ ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ.

ಇವುಗಳ ಹೊರತಾಗಿ ಇನ್ನೂ ಹಲವು ರೀತಿಯ ಮಧುಮೇಹಗಳಿವೆ, ಅವುಗಳ ವಿವರ ಕೆಳಗಿನಂತಿದೆ:

1. ಟೈಪ್‌ 1 ಮಧುಮೇಹ

ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಇನ್ಸುಲಿನ್‌ ಮತ್ತು ಇತರ ಹಾರ್ಮೋನುಗಳ ಮೂಲಕ 80-140 mg/dl ನಷ್ಟು ಕಿರಿದಾದ ವ್ಯಾಪ್ತಿಯಲ್ಲಿ ನಿರ್ವಹಿಸಲಾಗುತ್ತದೆ. ನಾವು ಆಹಾರ ಸೇವಿಸಿದಾಗ ಅಥವಾ ಸಕ್ಕರೆ ಪ್ರಮಾಣ ಹೆಚ್ಚಾದಾಗ ಮೇದೋಜೀರಕ ಗ್ರಂಥಿಯು ಹೆಚ್ಚುವರಿ ಇನ್ಸುಲಿನ್‌ ಬಿಡುಗಡೆ ಮಾಡುತ್ತದೆ.

ಈ ಇನ್ಸುಲಿನ್‌ ರಕ್ತದಲ್ಲಿರುವ ಗ್ಲುಕೋಸನ್ನು ಜೀವಕೋಶಗಳ ಒಳಕ್ಕೆ ರವಾನಿಸಲು ಸಹಾಯ ಮಾಡುವ ಮೂಲಕ ರಕ್ತದಲ್ಲಿ ಗುÉಕೋಸ್‌ ಅಂಶವನ್ನು ತಗ್ಗಿಸುತ್ತದೆ. ಆದರೆ ಟೈಪ್‌ 1 ರೋಗಿಗಳಲ್ಲಿ ಇನ್ಸುಲಿನ್‌ ಉತ್ಪಾದನೆ ಮತ್ತು ಬಿಡುಗಡೆಯೇ ಆಗುವುದಿಲ್ಲ. ಇದರಿಂದಾಗಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗಿಯೇ ಉಳಿದುಬಿಡುತ್ತದೆ.

ಟಿ1ಡಿಎಂನ ಲಕ್ಷಣಗಳು:

 ಇನ್ಸುಲಿನ್‌ನ ಸಂಪೂರ್ಣ ಕೊರತೆ

 ಕಡಿಮೆ ವಯಸ್ಸಿನಲ್ಲೇ ರೋಗ ಪತ್ತೆ

 ಸಕ್ಕರೆ ನಿಯಂತ್ರಣಕ್ಕೆ ಮಾತ್ರೆಗಳು ಕೆಲಸ ಮಾಡುವುದಿಲ್ಲ - ಕಡ್ಡಾಯವಾಗಿ ಇನ್ಸುಲಿನ್‌ ಅಗತ್ಯವಿರುತ್ತದೆ

 ಹೆಚ್ಚಿನ ಸಕ್ಕರೆಯಿಂದಾಗಿ 'ಡಯಾಬಿಟಿಕ್‌ ಕೀಟೋಆಯಸಿಡೋಸಿಸ್‌' (DKA) ಎಂಬ ಗಂಭೀರ ಸಮಸ್ಯೆ ಆಗಾಗ ಉಂಟಾಗಬಹುದು

 ಇದು ಒಂದು ಆಟೋ-ಇಮ್ಯೂನ್‌ ಕಾಯಿಲೆಯಾಗಿದ್ದು, ಇಲ್ಲಿ ದೇಹದ ರೋಗನಿರೋಧಕ ಶಕ್ತಿಯೇ ಸ್ವಂತ ಜೀವಕೋಶಗಳ ಮೇಲೆ ದಾಳಿ ಮಾಡುತ್ತದೆ. ಆದ್ದರಿಂದ ಜಿಎಡಿ ಆಯಂಟಿಬಾಡಿ, ಆಯಂಟಿ ಇನ್ಸುಲಿನ್‌ ಆಯಂಟಿಬಾಡಿಯಂತಹ ಆಟೊ ಆಯಂಟಿಬಾಡಿ ಔಷಧಗಳು ಕೆಲಸ ಮಾಡಬಲ್ಲವು.

2. ಟೈಪ್‌ 2 ಮಧುಮೇಹ

ಇಲ್ಲಿ ಇನ್ಸುಲಿನ್‌ಗೆ ದೇಹದಲ್ಲಿ ಪ್ರತಿರೋಧ ಇರುತ್ತದೆ. ಇನ್ಸುಲಿನ್‌ ಉತ್ಪತ್ತಿಯಾದರೂ ಅದು ಪರಿಣಾಮಕಾರಿಯಾಗಿರುವುದಿಲ್ಲ. ಆದ್ದರಿಂದ ದೇಹದ ದೈನಿಕ ಅಗತ್ಯಗಳಿಗಾಗಿ ಹೆಚ್ಚುವರಿ ಇನ್ಸುಲಿನ್‌ ಬೇಕಾಗುತ್ತದೆ. ಆರಂಭದಲ್ಲಿ ಮಾತ್ರೆಗಳಿಂದ ಇದನ್ನು ನಿಯಂತ್ರಿಸಬಹುದು, ಆದರೆ ಅನಂತರದ ದಿನಗಳಲ್ಲಿ ಇನ್ಸುಲಿನ್‌ ಬೇಕಾಗಬಹುದು.

ಲಕ್ಷಣಗಳು:

 ಇನ್ಸುಲಿನ್‌ ಪ್ರತಿರೋಧ

 ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ

 ಬೊಜ್ಜು, ಕಳಪೆ ಜೀವನಶೈಲಿ ಮತ್ತು ವಂಶಪಾರಂಪರ್ಯ ಇತಿಹಾಸವಿರುವವರಲ್ಲಿ ಹೆಚ್ಚು

3. ಪ್ಯಾನ್‌ಕ್ರಿಯಾಟಿಕ್‌ ಮಧುಮೇಹ

ಇನ್ಸುಲಿನ್‌ ಮೇದೋಜೀರಕ ಗ್ರಂಥಿಯಲ್ಲಿ ಉತ್ಪಾದನೆಗೊಳ್ಳುತ್ತದೆ. ಆದ್ದರಿಂದ ಮೇದೋಜೀರಕ ಗ್ರಂಥಿಗೆ ತೊಂದರೆ ಉಂಟಾದರೆ ಕೂಡ ಮಧುಮೇಹ ಕಾಣಿಸಿಕೊಳ್ಳಬಹುದು. ಮೇದೋಜೀರಕ ಗ್ರಂಥಿಯು ದೀರ್ಘ‌ಕಾಲದ ಕಾಯಿಲೆಗಳಿಂದ ಪೀಡಿತವಾದಾಗ ಈ ಮಧುಮೇಹ ಬರುತ್ತದೆ. ಇದನ್ನು 'ಕ್ರಾನಿಕ್‌ ಫೈಬ್ರೋಕ್ಯಾಲ್ಸಿಫಿಕ್‌ ಪ್ಯಾನ್‌ಕ್ರಿಯಾಟಿಕ್‌ ಡಯಾಬಿಟಿಸ್‌' ಎಂದೂ ಕರೆಯುತ್ತಾರೆ.

4. ಎಳೆಯರಲ್ಲಿ ಮಧುಮೇಹ - ಮೋಡಿ

(MODY & Maturity Onset Diabetes of Young)

ಇದು ಸಣ್ಣ ವಯಸ್ಸಿನಲ್ಲೇ ಕಂಡುಬರುತ್ತದೆ. ಇದನ್ನು ಹೆಚ್ಚಾಗಿ ಟೈಪ್‌ 1 ಎಂದು ತಪ್ಪಾಗಿ ಭಾವಿಸಲಾಗುತ್ತದೆ. ಆದರೆ ಈ ರೋಗಿಗಳು ಮಾತ್ರೆಗಳಿಗೆ ಸ್ಪಂದಿಸುತ್ತಾರೆ. ಇದು ಪ್ರಬಲವಾದ ವಂಶಪಾರಂಪರ್ಯ ಇತಿಹಾಸವನ್ನು ಹೊಂದಿರುತ್ತದೆ (ಕನಿಷ್ಠ 3 ತಲೆಮಾರುಗಳಲ್ಲಿ ಶೇ. 50ಕ್ಕಿಂತಲೂ ಹೆಚ್ಚು ಮಂದಿ ಮಧುಮೇಹಿಗಳು). ಇದನ್ನು ಆನುವಂಶಿಕ ಪರೀಕ್ಷೆಯ ಮೂಲಕ ಖಚಿತಪಡಿಸಬಹುದು.

5. ಲಾಡಾ

(LADA & Latent Auto&immune Diabetes of Adults)

ಆರಂಭದಲ್ಲಿ ಇದು ಟೈಪ್‌ 2 ಮಧುಮೇಹದಂತೆ ಕಂಡುಬಂದರೂ ಸುಮಾರು 5 ವರ್ಷಗಳ ಒಳಗೆ ರೋಗಿಯು ಟೈಪ್‌ 1ರಂತೆ ಇನ್ಸುಲಿನ್‌ ಅವಲಂಬಿತನಾಗುತ್ತಾನೆ.

6. ಸೆಕೆಂಡರಿ ಮಧುಮೇಹ (Secondary Diabetes)

ಇತರ ಹಾರ್ಮೋನ್‌ ಸಮಸ್ಯೆಗಳಿಂದ (ಉದಾಹರಣೆಗೆ, ಕುಶಿಂಗ್‌ ಸಿಂಡ್ರೋಮ್‌, ಅಕ್ರೋಮೆಗಾಲಿ ಅಥವಾ ಥೈರಾಯ್ಡ ಸಮಸ್ಯೆ) ಈ ಮಧುಮೇಹ ಉಂಟಾಗುತ್ತದೆ. ಕೆಲವು ಕಾಯಿಲೆಗಳಿಗೆ ಬಳಸುವ ಸ್ಟೀರಾಯ್ಡ್‌ ಮಾತ್ರೆಗಳಿಂದಲೂ ಸಕ್ಕರೆ ಹೆಚ್ಚಾಗಬಹುದು. ಮುಖ್ಯ ಕಾಯಿಲೆ ಗುಣವಾದಾಗ ಅಥವಾ ಸ್ಟೀರಾಯ್ಡ ನಿಲ್ಲಿಸಿದಾಗ ಈ ಮಧುಮೇಹ ವಾಸಿಯಾಗಬಹುದು.

7. ಗರ್ಭಾವಸ್ಥೆಯ ಮಧುಮೇಹ

ಗರ್ಭಾವಸ್ಥೆಯಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವುದು ತಾಯಿ ಮತ್ತು ಮಗುವಿಗೆ ಅಪಾಯಕಾರಿ. ಆದ್ದರಿಂದ ಇಂತಹ ರೋಗಿಗಳಿಗೆ ರೋಗ ನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಸೂಚಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿರುತ್ತದೆ. ಗರ್ಭಿಣಿ ರೋಗಿಗಳಿಗೆ ಖಾಲಿ ಹೊಟ್ಟೆಯಲ್ಲಿ 95 mg/dl ಮತ್ತು ಆಹಾರದ 1 ಗಂಟೆಯ ಅನಂತರ 140 mg/dl ಇರಬೇಕು. ಆರಂಭದಲ್ಲಿ ಆಹಾರ ಮತ್ತು ವ್ಯಾಯಾಮದಿಂದ ನಿಯಂತ್ರಿಸಬಹುದು. ನಿಯಂತ್ರಣಕ್ಕೆ ಬಾರದಿದ್ದರೆ ಮೆಟಾ#ರ್ಮಿನ್‌ ಅಥವಾ ಇನ್ಸುಲಿನ್‌ ಬೇಕಾಗುತ್ತದೆ.

ಹೆರಿಗೆಯ ಅನಂತರ ಇದು ಸರಿಯಾಗುತ್ತದೆ, ಆದರೆ ಭವಿಷ್ಯದಲ್ಲಿ ಖಾಯಂ ಮಧುಮೇಹ ಬರುವ ಅಪಾಯವಿರುವುದರಿಂದ ಪ್ರತೀ ವರ್ಷ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ.

-ಡಾ| ಶ್ರೀನಾಥ್‌ ಪಿ. ಶೆಟ್ಟಿ

ಎಂಡೋಕ್ರೈನಾಲಜಿಸ್ಟ್‌

ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಎಂಡೋಕ್ರೈನಾಲಜಿ ಮತ್ತು ಮೆಡಿಸಿನ್‌ ವಿಭಾಗ, ಕೆಎಂಸಿ, ಮಂಗಳೂರು)

Dailyhunt
Disclaimer: This content has not been generated, created or edited by Dailyhunt. Publisher: Udayavani