ನವದೆಹಲಿ: ಪಾವತಿ ವ್ಯವಸ್ಥೆಯ ಆರ್ಥಿಕ ಸ್ವಾವಲಂಬನೆಯನ್ನು ಕಾಪಾಡಿಕೊಳ್ಳಲು ಮತ್ತು ಸರ್ಕಾರದ ಬೊಕ್ಕಸದ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಹೆಚ್ಚಿನ ಮೌಲ್ಯದ ವಹಿವಾಟುಗಳ ಮೇಲೆ ತ್ವರಿತವಾಗಿ ಶ್ರೇಣೀಕೃತ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಜಾರಿಗೊಳಿಸುವಂತೆ ಸಂಸದೀಯ ಸಮಿತಿ ಶಿಫಾರಸು ಮಾಡಿದೆ.
ರೂಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು ಉತ್ತೇಜಿಸುವ ಪ್ರೋತ್ಸಾಹಕ ಯೋಜನೆಯ ಕುರಿತು ಸಮಿತಿ ಕಳವಳ ವ್ಯಕ್ತಪಡಿಸಿದ್ದು, ಶೂನ್ಯ-ಎಂಡಿಆರ್ ನಷ್ಟ ಸರಿದೂಗಿಸಲು 2000 ಕೋಟಿ ರೂ.ಬಜೆಟ್ ಅನುದಾನ ಒದಗಿಸುವುದರಿಂದ ಇಲಾಖೆಯ ಒಟ್ಟು ಅನುದಾನದ ಬೇಡಿಕೆ ಕೂಡ ಅನಗತ್ಯವಾಗಿ ಹೆಚ್ಚಾಗುತ್ತದೆ ಎಂದು ಸಮಿತಿ ತಿಳಿಸಿದೆ.
ಒಟ್ಟಿನಲ್ಲಿ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗದ ರೀತಿಯಲ್ಲಿ ಸ್ವಾವಲಂಬಿ, ಶ್ರೇಣೀಕೃತ ಆದಾಯದ ವ್ಯವಸ್ಥೆಯನ್ನು ರೂಪಿಸುವಂತೆ ಹಣಕಾಸು ಇಲಾಖೆಗೆ ಸಮಿತಿ ಸಲಹೆ ನೀಡಿದೆ. ಹಿರಿಯ ಬಿಜೆಪಿ ನಾಯಕ ಭರ್ತೃಹರಿ ಮಹತಾಬ್ ನೇತೃತ್ವದ ಈ ಸಮಿತಿ, 2000 ಕೋಟಿ ರೂ.ಗಳ ಅನುದಾನ ಮತ್ತು ಉದ್ಯಮದ ಅಂದಾಜು 20700 ಕೋಟಿ ರೂ.ಗಳ ಕಾರ್ಯಾಚರಣಾ ವೆಚ್ಚದ ನಡುವಿನ ಬೃಹತ್ ವ್ಯತ್ಯಾಸದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.

