ಆನೇಕಲ್: ವ್ಹೀಲಿಂಗ್ ಹುಚ್ಚಿಗಾಗಿ ಬೈಕ್‌ಗಳನ್ನು ಕಳವು ಮಾಡುತ್ತಿದ್ದ 6 ಮಂದಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಆನೇಕಲ್ ಪೊಲೀಸರು ವಶಕ್ಕೆ ಪಡೆದಿದ್ದು, 13 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿಗಳು ವಿಶೇಷವಾಗಿ ಡಿಯೋ ಮಾದರಿಯ ಬೈಕ್‌ಗಳನ್ನೇ ಗುರಿಯಾಗಿಸಿ ಕಳವು ಮಾಡುತ್ತಿದ್ದರು.
ಕದ್ದ ಬೈಕ್‌ಗಳ ನಂಬರ್‌ಪ್ಲೇಟ್ ತೆಗೆದುಹಾಕಿ ಅಥವಾ ಬದಲಾಯಿಸಿ, ವ್ಹೀಲಿಂಗ್‌ಗೆ ಅನುಕೂಲವಾಗುವಂತೆ ಮಾರ್ಪಾಡು ಮಾಡಿಕೊಳ್ಳುತ್ತಿದ್ದರು. ನಂತರ ನಿರ್ಜನ ಪ್ರದೇಶಗಳಲ್ಲಿ ವ್ಹೀಲಿಂಗ್ ಮಾಡಿ, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಪ್ರಚಾರ ಪಡೆಯುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಆನೇಕಲ್ ಠಾಣೆ ಇನ್ಸ್‌ಪೆಕ್ಟರ್‌ಪ್ರಕಾಶ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಬಂಧಿತ ಬಾಲಕರನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ. ವಶಪಡಿಸಿಕೊಂಡ ಬೈಕ್‌ಗಳ ಮಾಲಿಕರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

