Sunday, 11 Apr, 1.11 pm ಉದಯವಾಣಿ

ಟಾಪ್ 10 ಸುದ್ದಿ
ದ್ವಿಧಾ ವ್ಯಕ್ತಿತ್ವದ 'ಅಶ್ವತ್ಥಾಮನ್'ನ ಆತ್ಮಕತೆ

ಅಶ್ವತ್ಥಾಮನ್ ! ಎಂದಾಕ್ಷಣ ನೆನಪಾಗುವುದು ಮಹಾಭಾರತದ ಅಶ್ವತ್ಥಾಮ. ಪುರಾಣದಲ್ಲಿ ಅಶ್ವತ್ಥಾಮ ಚಿರಂಜೀವಿ, ಅವನಿಗೆ ಬಾಲ್ಯವಿಲ್ಲ, ಚಿರಂಜೀವಿಯಾಗಿ ಸದಾ ಪಶ್ಚಾತ್ತಾಪ ಪಡುತ್ತಿರುತ್ತಾನೆಂದು ಹೇಳಲಾಗುತ್ತದೆ.

ಈ ಕಾದಂಬರಿಯು ಈಗಿನ ಅಶ್ವತ್ಥಾಮನ್‌ ನ ಜೀವನ. ಓದಿನ ಕೊನೆಗೆ ಈತನೂ ಚಿರಂಜೀವಿ ಅನಿಸುತ್ತದೆ. ಜೋಗಿಯವರು ಬರೆದಿರುವ ‘ಅಶ್ವತ್ಥಾಮನ್’ ಕಾದಂಬರಿಯ ಅಶ್ವತ್ಥಾಮನೂ ಪುರಾಣದ ಅಶ್ವತ್ಥಾಮನ ಆಧುನಿಕ ರೂಪ ಎಂದು ಕವಿ ಸುಬ್ರಾಯ ಚೊಕ್ಕಾಡಿಯವರು ಮುನ್ನುಡಿಯಲ್ಲಿ ಹೇಳುತ್ತಾರೆ.

ಅಶ್ವತ್ಥಾಮನ್ ಒಬ್ಬ ನಟ. ತನ್ನಅಸಹಾಯಕ ಸ್ಥಿತಿಯಲ್ಲಿ ಆತ್ಮಕತೆಯನ್ನು ಬರೆಸಬೇಕೆಂದು ಹಂಬಲಿಸಿ ಸ್ನೇಹಿತ ಹಾಗೂ ಕಥೆಯ ನಿರೂಪಕನ ಕೈಯಲ್ಲಿ ತನ್ನ ಆತ್ಮಚರಿತ್ರೆಯನ್ನು ಬರೆಸಬೇಕೆಂಬ ಹಂಬಲದಿಂದ ಬರೆಸುತ್ತಾನೆ. ಆದರೆ, ಒಂದು ಹಂತದಲ್ಲಿ ತಾನು ಹೇಳುತ್ತಿರುದಿರುವುದೇ ಒಂದು, ನಿರೂಪಕ ಬರೆಯುತ್ತಿರುವುದೇ ಒಂದು ಎಂದೆನ್ನಿಸಿ, ತಾನೇ ಸ್ವತಃ ಬರೆಯಲು ಹೋಗುತ್ತಾನೆ. ಆದರೆ ತಾನೂ ಬರೆಯಲಾಗದೇ ಅರ್ಧದಲ್ಲಿ ಕೈಬಿಡುತ್ತಾನೆ.

ಓದಿ : ಬಿಜೆಪಿ ಎಂದರೆ 'ಭ್ರಷ್ಟಾಚಾರ ಜನತಾ ಪಾರ್ಟಿ': ಸಿದ್ದರಾಮಯ್ಯ ಟೀಕೆ

ಕಾದಂಬರಿಯ ಪ್ರಾರಂಭದಲ್ಲಿ ಪಾರ್ಕ್ ನಲ್ಲಿ ವಾಕಿಂಗ್ ಮಾಡುತ್ತಿರುವ ನಿರೂಪಕನನ್ನು ರಾಜೇಂದ್ರ ಎನ್ನುವ ಪರಿಚಯಸ್ಥ ವ್ಯಕ್ತಿ ಬಂದು ಈ ಕೂಡಲೇ ಅವರ ತೋಟಕ್ಕೆ ಬರಬೇಕೆಂದು ಒತ್ತಾಯಿಸುತ್ತಾರೆ. ಇನ್ನೂ ಬೆಳಗಿನ ಕಾರ್ಯಗಳನ್ನು ಮುಗಿಸದ ನಿರೂಪಕ ಮೊದಲು ನಿರಾಕರಿಸುತ್ತಾರೆ. ಆದರೆ, ನಂತರ ಒತ್ತಾಯಿಸಿದ ಮೇಲೆ ಏನೋ ಗಂಭೀರ ವಿಷಯವಿರಬಹುದು ಎಂದು ಅವರೊಂದಿಗೆ ಹೋಗುತ್ತಾರೆ.

ರಾಜೇಂದ್ರರ ತೋಟದ ಮನೆಗೆ ಹೋಗುವ ದಾರಿಯಲ್ಲಿ ಹಾಗೂ ಮನೆಗೆ ತಲುಪಿದ ನಂತರ ಅಲ್ಲಿ ಆಗುವ ಕೆಲವು ನಡೆಗಳನ್ನು ನೋಡಿ ನಿರೂಪಕನ ಮನಸ್ಸಿನಲ್ಲಿ ಮೂಡುವ ಅನುಮಾನದ ಭಾವ ಹಾಗೂ ಅದನ್ನು ಕಾದಂಬರಿಯಲ್ಲಿ ವಿವರಿಸಿದ ಬಗೆ ನೈಜ ಅನುಭವನ್ನು ನೀಡುತ್ತದೆ.

ರಹಸ್ಯದಂತಿರುವ ತೋಟದ ಮನೆಯನ್ನು ಹೊಕ್ಕ ನಂತರ ರಾಜೇಂದ್ರರು ನಿರೂಪಕನಿಗೆ ಹೇಳುತ್ತಾರೆ, 'ನಿಮ್ಮ ಪರಿಚಯಸ್ಥ ಒಬ್ಬರು ಈ ಮನೇಲಿ ಇದ್ದಾರೆ ಸರ್; ನಿಮ್ಮನ್ನು ನೋಡಬೇಕೆಂದರು ಹಾಗಾಗಿ ಕರೆದೆ ಎಂದು ಮನೆಯ ಒಂದು ಕೋಣೆಯ ಕಡೆ ಕೈ ತೋರಿಸುತ್ತಾರೆ.

ನಿರೂಪಕ ಯಾರಿರಬಹುದೆಂಬ ಯೋಚನೆಯೊಂದಿಗೆ ಮನೆಯ ಮೂಲೆಯಲ್ಲಿ ರಹಸ್ಯದಂತಿರುವ ಆ ಕತ್ತಲ ಕೋಣೆಗೆ ಹೋಗಿ ಲೈಟ್ ಹಾಕಿ ನೋಡಿದಾಗ ಮಂಚದ ಮೇಲೆ ಮಲಗಿದ್ದ ವ್ಯಕ್ತಿಯನ್ನು ನೋಡಿ ನಿರೂಪಕ ಆಶ್ಚರ್ಯಕ್ಕೊಳಗಾಗುತ್ತಾನೆ. ಅದು ಬೇರೆಯಾರೂ ಅಲ್ಲ, ಅವರ ಸ್ನೇಹಿತ ಅಶ್ವತ್ಥಾಮ!!

ಅಶ್ವತ್ಥಾಮ ದೊಡ್ಡ ನಟ. ನಟನೆಯಲ್ಲಿ ನಿಸ್ಸೀಮ. ನಿರೂಪಕನಿಗೆ ಜೀವದ ಗೆಳೆಯ. ಅಂತಹ ಗೆಳೆಯ ಸ್ಟ್ರೋಕ್ ಹೊಡೆದು, ಮಾತನಾಡಲು ಆಗದ ಸ್ಥಿತಿಯಲ್ಲಿ ಮಂಚದ ಮೇಲೆ ಅಸಹಾಯಕನಾಗಿ ಮಲಗಿರುವುದನ್ನು ನೋಡಿ ನಿರೂಪಕ ಬೇಸರಗೊಳ್ಳುತ್ತಾನೆ.

ಕಾದಂಬರಿಯುದ್ದಕ್ಕೂ ಅಶ್ವತ್ಥಾಮನ ವೈಯಕ್ತಿಕ ಬದುಕಿನ ಒಂದೊಂದೇ ಮಜಲುಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ತನ್ನ ಹುಟ್ಟಿಗೆ ಕಾರಣವಾದ ಅಮ್ಮನ ಮೇಲಿನ ವಿವಾಹ ಪೂರ್ವ ಅತ್ಯಾಚಾರಕ್ಕೆ ತಂದೆಯ ಮೇಲೆ ಸೇಡು ತೀರಿಸಿಕೊಳ್ಳುವ ಜಿದ್ದು, ನಿತ್ಯ ಬದುಕಿನ ಭಾವನೆಗಳ ಏರು-ಪೇರುಗಳನ್ನು, ಸಂಕಟಗಳನ್ನು ಮೀರುವುದಕ್ಕಾಗಿ, ನಟಿಸುವ ನಟನಾಗಿ ಬದಲಾಗುತ್ತಾನೆ, ನಟನೆಗೆ ಸಿಕ್ಕ ಪ್ರಸಿದ್ಧಿ, ಅದಕ್ಕೆ ತಕ್ಕಂತೆ ಬೆಳೆಸಿಕೊಂಡ ಗುಣಗಳು, ಈ ಹಂತದಲ್ಲಿ ಬದುಕಿನ ನವಿರು ಕ್ಷಣಗಳೆಡೆಗೆ ತೋರಿದ ನಿರ್ಲ್ಯಕ್ಷ್ಯ.

ಅಶ್ವತ್ಥಾಮನ ಬದುಕಿನಲ್ಲಿ ಶುಭಾಂಗಿನಿ, ಸರೋಜಿನಿ, ಸಂಯುಕ್ತಾ, ಧಾತ್ರಿ ಈ ಎಲ್ಲಾ ಸ್ತ್ರೀಯರು ರೂಪಕಗಳಾಗಿ ಬಂದು ಹೋಗುತ್ತಾರೆ.

ಓದಿ : ಚುನಾವಣಾ ಆಯೋಗವನ್ನು 'ಎಮ್ ಸಿ ಸಿ' ಎಂದು ಮರು ನಾಮಕರಣ ಮಾಡಬೇಕು : ಮಮತಾ ಕಿಡಿ

ಕಾದಂಬರಿಯನ್ನು ಓದುತ್ತಾ ಓದುತ್ತಾ ಕಥಾನಾಯಕ ತನ್ನ ನಿಜ ಹಾಗೂ ನಟನಾ ಜೀವನದ ಮಧ್ಯೆ ವ್ಯತ್ಯಾಸ ಮಾಡಲಾಗದೇ ತೊಳಲಾಟದಲ್ಲಿ ಸಿಕ್ಕಿ ಒದ್ದಾಡಿದ ಹಾಗೇ ಅನಿಸುತ್ತದೆ. ಮುನ್ನುಡಿಯಲ್ಲಿ ಚೊಕ್ಕಾಡಿಯವರು ಹೇಳುವಂತೆ ಅಶ್ವತ್ಥಾಮನ್ ದ್ವಿಧಾ ವ್ಯಕ್ತಿತ್ವದ ಎಳೆದಾಟದಲ್ಲಿ ನಲುಗಿಹೋಗುತ್ತಾನೆ.

ಕಾದಂಬರಿಯ ಕೊನೆಯ ಭಾಗ ರಂಗವೇದಿಕೆಯಲ್ಲಿ ನಡೆಯುವ ನಾಟಕದ ಕೊನೆಯ ದೃಶ್ಯದಂತೆ ಭಾಸವಾಗುತ್ತದೆ. ಪಾರ್ಟಿಯನ್ನು ಏರ್ಪಡಿಸುವ ಅಶ್ವತ್ಥಾಮನ್ ತನ್ನ ನಿಜ ಪಾತ್ರದಿಂದ ಹೊರಬರಲಾಗದೇ ಕುಸಿಯುತ್ತಾನೆ, ತನ್ನ ಸಿಟ್ಟನ್ನು ಹೊರಹಾಕುತ್ತಾನೆ. ಎಲ್ಲರ ಭಾರವನ್ನು ಹೊತ್ತುಕೊಂಡು ತನ್ನ ಮೈಯನ್ನು ಗುರುತಿಸಲಾಗದೇ ಸೋಲುತ್ತಾನೆ. ನಟನಾಗಿ ಜೀವಿಸಿದ ಪಾತ್ರದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಲಾಗದೇ ಹತಾಶನಾಗುತ್ತಾನೆ.

ಅಶ್ವತ್ಥಾಮ ನಟಿಸಿರುವ ಹಲವಾರು ಪಾತ್ರಗಳಲ್ಲಿ ಹಂಚಿಹೋಗಿದ್ದಾನೆ. ಅವನಿಗೆ ತಾನು ಅಪೂರ್ಣ ಎಂದೆನಿಸಿಬಿಡುತ್ತದೆ. ಹೀಗೆ ಅಶ್ವತ್ಥಾಮ ತನ್ನನ್ನು ತಾನು ರಾಜ, ಚಕ್ರವರ್ತಿಯೆಂದು ಭಾವಿಸಿ, ನಿರೂಪಕನಿಗೆ ಆಸ್ಥಾನ ಕವಿಯೆಂದು ಹೇಳಿ, ಗೆದ್ದು ಬಂದಾತನ ಮೇಲೆ ಬಹುಪಾರಕ್ ಹಾಡಬೇಕು, ಆಜ್ಞೆಯನ್ನು ಪಾಲಿಸಬೇಕೆಂದು ಘೋಷಿಸುತ್ತಾನೆ. ಸ್ತುತಿಗೀತೆಯನ್ನು ಕವಿ ಹಾಡದೇ ಇದ್ದಲ್ಲಿ ಅವನ ರುಂಡವನ್ನು ಕಡಿಯುವಂತೆ ಆಜ್ಞೆಯನ್ನು ನೀಡುತ್ತಾನೆ. ಈ ಇಡೀ ಸನ್ನಿವೇಶದ ವಿವರಣೆ ಓದುಗರಿಗೆ ಬೆವರಿಳಿಸಿಬಿಡುತ್ತದೆ. ಕಾದಂಬರಿ ಇಷ್ಟವಾಗುವುದು, ಗೆಲ್ಲುವುದು ಇಲ್ಲೆ.

ವಿಧಾತ್ರಿ ಭಟ್

ಎಸ್.ಡಿ.ಎಮ್ ಕಾಲೇಜು ಉಜಿರೆ

ಓದಿ : ಕೋವಿಡ್ ಮಹಾಮಾರಿ : ಮುಂಬಯಿಯಲ್ಲಿ 1 ತಿಂಗಳಲ್ಲಿ 1.49 ಲಕ್ಷ ಪ್ರಕರಣ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top