ನವದೆಹಲಿ: ತಂತ್ರಜ್ಞಾನ ಲೋಕದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಸ್ವಯಂಚಾಲಿತ ವ್ಯವಸ್ಥೆಗಳು ಎಷ್ಟೇ ಮುನ್ನಡೆ ಸಾಧಿಸಿದರೂ, ಮನುಷ್ಯನ ದಶಕಗಳ ಅನುಭವಕ್ಕೆ ಪರ್ಯಾಯವಿಲ್ಲ ಎಂಬುದನ್ನು ಜಾಗತಿಕ ಆಟೋಮೊಬೈಲ್ ದೈತ್ಯ ಕಂಪನಿ 'ಫೋರ್ಡ್' (Ford) ಅರಿತುಕೊಂಡಿದೆ.
ತಾನು ಅತಿಯಾಗಿ ನಂಬಿದ್ದ ಎಐ ತಂತ್ರಜ್ಞಾನ ಮತ್ತು ಆಟೋಮೇಟೆಡ್ ಕ್ವಾಲಿಟಿ ಸಿಸ್ಟಮ್‌ಗಳು ವಾಹನಗಳ ಗುಣಮಟ್ಟ ಕಾಪಾಡುವಲ್ಲಿ ನಿರೀಕ್ಷಿತ ಯಶಸ್ಸು ನೀಡದ ಹಿನ್ನೆಲೆಯಲ್ಲಿ, ಕಂಪನಿಯು ತನ್ನ ಹಳೆಯ ಹಾಗೂ ನಿವೃತ್ತ ಅನುಭವಿ ಇಂಜಿನಿಯರ್‌ಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದೆ.
ಬ್ಲೂಂಬರ್ಗ್ ವರದಿ ಪ್ರಕಾರ, ವಾಹನಗಳ ವಿನ್ಯಾಸ ಮತ್ತು ಗುಣಮಟ್ಟ ನಿಯಂತ್ರಣದಲ್ಲಿ ಫೋರ್ಡ್ ಅತಿಯಾಗಿ ಎಐ ಹಾಗೂ ಸ್ವಯಂಚಾಲಿತ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿತ್ತು. ಆದರೆ ಹಲವು ತಲೆಮಾರುಗಳ ವಾಹನ ಅಭಿವೃದ್ಧಿಯಲ್ಲಿ ಅನುಭವ ಹೊಂದಿದ್ದ ಎಂಜಿನಿಯರ್‌ಗಳ ಜ್ಞಾನವನ್ನು ಸಮರ್ಪಕವಾಗಿ ಉಳಿಸಿಕೊಳ್ಳದ ಕಾರಣ, ಎಐಗೆ ಅಗತ್ಯವಾದ ನೈಜ ಅನುಭವದ ಮಾಹಿತಿ ಲಭ್ಯವಾಗಲಿಲ್ಲ ಎನ್ನಲಾಗಿದೆ.
ಫೋರ್ಡ್‌ನ ವಾಹನ ಹಾರ್ಡ್‌ವೇರ್ ಎಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ಚಾರ್ಲ್ಸ್ ಪೂನ್ ನೀಡಿದ ಮಾಹಿತಿ ಪ್ರಕಾರ, "ವಿನ್ಯಾಸದ ಮಾಹಿತಿಯನ್ನು ಎಐಗೆ ನೀಡಿದರೆ ಅದು ಸ್ವಯಂ ಉತ್ತಮ ಗುಣಮಟ್ಟದ ಉತ್ಪನ್ನವನ್ನು ರೂಪಿಸುತ್ತದೆ ಎಂದು ನಾವು ತಪ್ಪಾಗಿ ಭಾವಿಸಿದ್ದೆವು. ಎಐ ಅತ್ಯುತ್ತಮ ಸಾಧನವಾಗಿದ್ದರೂ, ಅದಕ್ಕೆ ನೀಡುವ ಮಾಹಿತಿಯ ಗುಣಮಟ್ಟವೇ ಅದರ ಸಾಮರ್ಥ್ಯವನ್ನು ನಿರ್ಧರಿಸುತ್ತದೆ" ಎಂದು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಫೋರ್ಡ್ ಕಂಪನಿಯು ಸುಮಾರು 350 ಕ್ಕೂ ಹೆಚ್ಚು ಅನುಭವಿ ಎಂಜಿನಿಯರ್‌ಗಳನ್ನು ಮರಳಿ ನೇಮಕ ಮಾಡಿಕೊಂಡಿದೆ. ಇದರಲ್ಲಿ ಕಂಪನಿಯ ಹಳೆಯ ಉದ್ಯೋಗಿಗಳು ಹಾಗೂ ಪೂರೈಕೆದಾರ ಸಂಸ್ಥೆಗಳ ತಜ್ಞರು ಸೇರಿದ್ದಾರೆ. ಸ್ವಯಂಚಾಲಿತ ತಂತ್ರಜ್ಞಾನದ ಮೇಲಿನ ಅತಿಯಾದ ನಂಬಿಕೆಯಿಂದಾಗಿ, ದಶಕಗಳ ಕಾಲ ವಾಹನ ತಯಾರಿಕೆಯಲ್ಲಿ ಅನುಭವ ಹೊಂದಿದ್ದ ಮಾನವ ಸಂಪನ್ಮೂಲವನ್ನು ಕಂಪನಿ ಕಡೆಗಣಿಸಿತ್ತು ಎಂಬುದನ್ನು ಫೋರ್ಡ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

