ಬೆಂಗಳೂರು: ಬೈಕ್‌ನಲ್ಲಿ ತೆರಳುತ್ತಿದ್ದಾಗ ಸವಾರರೊಬ್ಬರಿಗೆ ಎದೆನೋವು ಕಾಣಿಸಿಕೊಂಡು ರಸ್ತೆಯಲ್ಲಿಯೇ ಕುಸಿದು ಬಿದ್ದಿದ್ದು, ಈ ವೇಳೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಹೊಯ್ಸಳ ಸಿಬ್ಬಂದಿ ಆಪತ್ಬಾಂಧವರಾಗಿ ಬಂದು ಅವರ ಪ್ರಾಣ ಉಳಿಸಿದ್ದಾರೆ. ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರೋಡ್ ರಸ್ತೆಯಲ್ಲಿ ಶನಿವಾರ ಬೆಳಗ್ಗೆ 8.30 ರ ಸುಮಾರಿಗೆ ಈ ಘಟನೆ ನಡೆದಿದೆ.
ರವಿ (34) ಎಂಬವರು ಎಂದಿನಂತೆ ಶನಿವಾರ ಬೆಳಗ್ಗೆ ವೆಸ್ಟ್ ಆಫ್ ಕಾರ್ಡ್ ರಸ್ತೆ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಅಗ್ನಿಶಾಮಕ ಠಾಣೆ ಬಳಿ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರು ತಮ್ಮ ಬೈಕ್ ಅನ್ನು ರಸ್ತೆ ಬದಿ ನಿಲ್ಲಿಸಿ ಕೊಂಡು ಕುಸಿದು ಬಿದ್ದು ಎದೆ ಹಿಡಿದು ಕೊಂಡು ಒದ್ದಾಡುತ್ತಿದ್ದರು. ಇದೇ ವೇಳೆ ಆ ರಸ್ತೆಯಲ್ಲಿ ಹೊಯ್ಸಳದಲ್ಲಿ ಗಸ್ತಿನಲ್ಲಿದ್ದ ಎಎಸ್‌ಐ ಸಚ್ಚಿದಾನಂದಮೂರ್ತಿ, ಹೆಡ್ ಕಾನ್‌ಸ್ಟೆàಬಲ್ ಬಸವರಾಜು ಸವಾರನ ನೆರವಿಗೆ ತಕ್ಷಣ ಧಾವಿಸಿ ಕೂಡಲೇ ಕಾರ್ಡಿಯೋಪಲ್ಮನರಿ ಪುನರುಜ್ಜೀವನ (ಸಿಪಿಆರ್) ಮಾಡಿದ್ದಾರೆ.
ನಂತರ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಮೂಲಕ ಆತನ ಪ್ರಾಣ ಉಳಿಸಿದ್ದಾರೆ. ಪೊಲೀಸರು ಸಿಪಿಆರ್ ಮಾಡಿ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿರುವ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಸಮಯಪ್ರಜ್ಞೆ ಮೆರೆದು ಬಂದು ವ್ಯಕ್ತಿಯ ಜೀವ ಉಳಿಸಿದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಹೊಯ್ಸಳ ಸಿಬ್ಬಂದಿಯ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

