ದಾವಣಗೆರೆ: ರಾಜ್ಯದಲ್ಲಿ ಈ ಹಿಂದಿನ ಮುಖ್ಯಮಂತ್ರಿಗಳು ಮಾಡಿದ ಸಾಲಕ್ಕಿಂತ ಹೆಚ್ಚು ಸಾಲ ಸಿದ್ದರಾಮಯ್ಯ ಮಾಡಿದ್ದಾರೆ. ರಾಜ್ಯದಲ್ಲಿ 22 ವರ್ಷ ಆಡಳಿತ ನಡೆಸಿದ ಮುಖ್ಯಮಂತ್ರಿಗಳಿಗಿಂತ 8 ವರ್ಷ ಅಧಿಕಾರ ನಡೆಸಿದ ಸಿದ್ದರಾಮಯ್ಯ ಅವರು ಮಾಡಿದ ಸಾಲವೇ ಹೆಚ್ಚು. ಮುಖ್ಯಮಂತ್ರಿ ಅವಧಿಯಲ್ಲಿ ಅವರು ₹ 4.30 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.
ರವಿ ಆರೋಪಿಸಿದರು.
ʼರಾಜ್ಯದ ಒಟ್ಟು ಸಾಲ ₹ 8.32 ಲಕ್ಷ ಕೋಟಿ ಇದೆ. ಅದರಲ್ಲಿ ₹4.30ಲಕ್ಷ ಕೋಟಿ ಸಿದ್ದರಾಮಯ್ಯ ಒಬ್ಬರೇ ಮಾಡಿದ್ದಾರೆ. ಜೆ.ಎಚ್. ಪಟೇಲ್, ಎಸ್.ಎಂ. ಕೃಷ್ಣ, ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಮಾಡಿದ ಸಾಲಕ್ಕಿಂತ ಸಿದ್ದರಾಮಯ್ಯ ಅವರು ಪಡೆದ ಸಾಲ ವಿಪರೀತ. ಅಧಿಕಾರ ಹಸ್ತಾಂತರಿಸುವಾಗ ಈ ಸಾಲ ತೀರಿಸುತ್ತೀರಾ' ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
'ರಾಜ್ಯದಲ್ಲಿ ನಂದಿನಿ ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸಲಾಗಿದೆ. ಇಂಧನದ ಮೇಲೆ ಹೆಚ್ಚು ಸೆಸ್ ವಿಧಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುವಂತೆ ಮಾಡಲಾಗಿದೆ. ಬಸ್, ಮೆಟ್ರೋ, ವಿದ್ಯುತ್ ದರಗಳು ಗಗನಮುಖಿಯಾಗಿವೆ. ಅಬಕಾರಿ ಸುಂಕ, ಛಾಪಾಕಾಗದ, ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗೂ ದರ ಏರಿಕೆ ಮಾಡಲಾಗಿದೆ. ರಾಜ್ಯದಲ್ಲಿರುವುದು ಹಗಲು ದರೋಡೆ ಸರ್ಕಾರ' ಎಂದು ಕುಟುಕಿದರು.
ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಶಿಶು ಮತ್ತು ಬಾಣಂತಿ ಸಾವು ತಡೆಯಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರಸ್ತೆ ಗುಂಡಿಗಳಿಗೆ ಬಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇದೆ. ಅತಿಥಿ ಉಪನ್ಯಾಸಕರ ಚಳವಳಿ, ಮುಡಾ ಹಗರಣ, ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಹೀಗೆ ಕೆಟ್ಟ ಕಾರಣಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಸುದ್ದಿಯಲ್ಲಿದೆ. ಮಾನಗೆಟ್ಟ ಸಚಿವರು ಇರುವುದು ರಾಜ್ಯ ಸಚಿವ ಸಂಪುಟದಲ್ಲಿಯೇ ಹೊರತು ಬಿಜೆಪಿಯಲ್ಲಿ ಅಲ್ಲ ಎಂದು ಬಿಜೆಪಿ ಎಂಎಲ್‌ಸಿ ತಿರುಗೇಟು ನೀಡಿದರು.

