Dailyhunt Logo
  • Light mode
    Follow system
    Dark mode
    • Play Story
    • App Story
ಈ ಸಲ ತೃತೀಯ ಭಾಷೆಗೆ ಅಂಕ/ಗ್ರೇಡ್‌?: ಮತ್ತೆ ಗೊಂದಲ

ಈ ಸಲ ತೃತೀಯ ಭಾಷೆಗೆ ಅಂಕ/ಗ್ರೇಡ್‌?: ಮತ್ತೆ ಗೊಂದಲ

ಬೆಂಗಳೂರು: 2027ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವಿಷಯವಾರು ನೀಲನಕ್ಷೆ ಅನುಸಾರ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸಿದ್ಧಪಡಿಸಿ ಪ್ರಕಟಿಸಿದೆ. ಆದರೆ, ಇದರಲ್ಲಿ ತೃತೀಯ ಭಾಷೆಗಳ ಮಾದರಿ ಪ್ರಶ್ನೆಪತ್ರಿಕೆಗಳು ಇಲ್ಲದಿರುವುದು ತೃತೀಯ ಭಾಷೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಡಿಎಸ್‌ಇಆರ್‌ಟಿ ವತಿಯಿಂದ 2026-27ನೇ ಸಾಲಿನಲ್ಲಿ ಪರಿಷ್ಕರಿಸಿದ ಪಾಠ ಆಧಾರಿತ ಸಮಗ್ರ ಪ್ರಶ್ನೆ ಕೋರಿ ಅನ್ವಯ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ತಲಾ 4 ಸೆಟ್‌ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗಿದೆ. ಪ್ರಥಮ ಭಾಷೆ ಮರಾಠಿ, ಉರ್ದು ವಿಷಯದ ಪರಿಷ್ಕೃತ ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ಇನ್ನುಳಿದ ವಿಷಯಗಳಲ್ಲಿ ಕಳೆದ ಸಾಲಿನ ಮಾದರಿ ಪ್ರಶ್ನೆಪತ್ರಿಕೆಗಳ ಜೊತೆಗೆ ಈ ಸಾಲಿನಲ್ಲಿ ಹೆಚ್ಚುವರಿ ಮಾದರಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಮಂಡಳಿಯ ಜಾಲತಾಣದ ವಿದ್ಯಾರ್ಥಿ ಅಂಕಣದಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಉಳಿದ ಮಾಧ್ಯಮಗಳಿಗೆ ಆಯಾ ಶಾಲಾ ಹಂತದಲ್ಲಿ ಅವಶ್ಯಕತೆಗೆ ತಕ್ಕಂತೆ ಭಾಷಾಂತರಿಸಿ ವಿದ್ಯಾರ್ಥಿಗಳಿಗೆ ನೀಡಲು ಸೂಚಿಸಲಾಗಿದೆ.

ಆದರೆ, ಇದರಲ್ಲಿ ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯುಎಫ್‌ನ ಪ್ರಶ್ನೆಪತ್ರಿಕೆಗಳು ಇಲ್ಲ. ಕಳೆದ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಪರೀಕ್ಷೆಯ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡುವುದಾಗಿ ಮತ್ತು ಇದು ಮಕ್ಕಳ ಉತ್ತೀರ್ಣತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಆದರೆ, ಸರ್ಕಾರದ ತೀರ್ಮಾನವನ್ನು ನ್ಯಾಯಾಲಯ ತಿರಸ್ಕರಿಸಿದ ಕಾರಣಕ್ಕೆ ಮತ್ತೆ ತೃತೀಯ ಭಾಷೆಗೆ ಅಂಕವನ್ನು ನೀಡಲಾಗಿತ್ತು.

ಈ ವರ್ಷ ತೃತೀಯ ಭಾಷೆಗೆ ಅಂಕ ನೀಡಬೇಕೇ? ಅಥವಾ ಗ್ರೇಡ್ ನೀಡಬೇಕೇ? ಎಂಬುದರ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಇನ್ನೂ ತನ್ನ ತೀರ್ಮಾನವನ್ನು ಸ್ಪಷ್ಟಪಡಿಸಿಲ್ಲ. ಈ ಮಧ್ಯೆ ಸರ್ಕಾರ ತೃತೀಯ ಭಾಷೆಯ ಪ್ರಶ್ನೆ ಪತ್ರಿಕೆಯನ್ನು ಪ್ರಕಟಿಸದಿರುವುದು ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಮತ್ತೆ ಗೊಂದಲ ಸೃಷ್ಟಿಸಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ನಾವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕರನ್ನು ಭೇಟಿಯಾಗಿ ಈ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಹಿಂದಿ ಭಾಷಾ ಬೋಧಕರ ಸಂಘದ ಅಧ್ಯಕ್ಷ ಶಶಿಧರ್ ಸಿ.ಎಂ. ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani