Dailyhunt
ಎಲ್ಲ ಸಿಬಿಎಸ್‌ಇ ಶಾಲೆಗಳಲ್ಲಿ ಈ ವರ್ಷದಿಂದ ತ್ರಿಭಾಷಾ ನೀತಿ

ಎಲ್ಲ ಸಿಬಿಎಸ್‌ಇ ಶಾಲೆಗಳಲ್ಲಿ ಈ ವರ್ಷದಿಂದ ತ್ರಿಭಾಷಾ ನೀತಿ

ವದೆಹಲಿ: ಕರ್ನಾಟಕದಲ್ಲಿ 10ನೇ ತರಗತಿಯಲ್ಲಿ ಹಿಂದಿ ಸೇರಿ ಇತರ ತೃತೀಯ ಭಾಷೆಗೆ ಅಂಕ ಕೈಬಿಟ್ಟು ಗ್ರೇಡ್‌ ನೀಡುವ ಪದ್ಧತಿ ಆರಂಭಿಸಿ ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳಲು ಮುಂದಾಗಿದ್ದರೆ, ಇತ್ತ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 'ಇಂಗ್ಲಿಷ್‌' ಭಾಷೆಯನ್ನು 'ವಿದೇಶಿ ಭಾಷೆ' ಎಂದು ವರ್ಗೀಕರಿಸಿದೆ.

ಅಲ್ಲದೇ, 2026-27ನೇ ಸಾಲಿನಿಂದ 6ನೇ ತರಗತಿಯಿಂದಲೇ ತ್ರಿಭಾಷಾ ಸೂತ್ರ ಅನುಷ್ಠಾನಕ್ಕೆ ಮುಂದಾಗಿದೆ. ಅದರಂತೆ, ಮೊದಲ 2 ಭಾಷೆಗಳು ಭಾರತೀಯ ಭಾಷೆಗಳೇ ಆಗಿರಬೇಕು, 3ನೇ ಭಾಷೆಯಾಗಿ ಇಂಗ್ಲಿಷ್ ಅಥವಾ ಇನ್ಯಾವುದೇ ಭಾಷೆಯನ್ನು ಆಯ್ಕೆ ಮಾಡಬಹುದು. ಆದರೆ, ಮತ್ತೊಂದು 'ವಿದೇಶಿ ಭಾಷೆ'ಯನ್ನು ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ.

ಸಿಬಿಎಸ್‌ಇ ಮಂಡಳಿಯು ಕೇವಲ ಒಂದು ವಿದೇಶಿ ಭಾಷೆಯನ್ನು ಆಯ್ಕೆ ಮಾಡಲು ಅವಕಾಶ ನೀಡಿದ್ದು, ಇದೀಗ ಇಂಗ್ಲಿಷ್‌ ಅನ್ನು ವಿದೇಶಿ ಭಾಷೆಯಂದು ವರ್ಗೀಕರಿಸಿದೆ. ಇದರಿಂದ ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಜತೆ ಮತ್ತೊಂದು ವಿದೇಶಿ ಭಾಷೆ ಅಂದರೆ ಫ್ರೆಂಚ್, ಜರ್ಮನ್ ಅಥವಾ ಇತರೆ ಯಾವುದೇ ಭಾಷೆ ಆಯ್ಕೆ ಮಾಡಲು ಸಾಧ್ಯವಿರುವುದಿಲ್ಲ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ 2026-27ರಲ್ಲಿ 6ನೇ ತರಗತಿಯಿಂದ ತ್ರಿಭಾಷಾ ಸೂತ್ರ ಅನುಷ್ಠಾನ ಕಡ್ಡಾಯವಾಗಿದೆ. ಆದರೆ, 9ನೇ ತರಗತಿಗಾಗಿ ಗಣಿತ ಮತ್ತು ವಿಜ್ಞಾನದಲ್ಲಿ ಕಡ್ಡಾಯ ಪ್ರಮಾಣಿತ ಮತ್ತು ಐಚ್ಛಿಕ ಸುಧಾರಿತ ಕೋರ್ಸ್‌ಗಳ 2 ಹಂತದ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತದೆ.

ಈ ತ್ರಿಭಾಷಾ ಸೂತ್ರವು 2026-27ನೇ ಸಾಲಿನಲ್ಲಿ 6ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಈ ಸೂತ್ರವನ್ನು ಅಳವಡಿಸಿಕೊಳ್ಳಲಾಗುತ್ತದೆ. 2031ರ ವೇಳೆಗೆ 10ನೇ ತರಗತಿಗೆ ಈ ತ್ರಿಭಾಷಾ ಸೂತ್ರ ಸಂಪೂರ್ಣವಾಗಿ ಅನುಷ್ಠಾನಗೊಳ್ಳಲಿದೆ. ಪ್ರಸ್ತುತ ವರ್ಷದ 9ನೇ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿ ಕಡ್ಡಾಯವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್‌ 1, ಆರ್‌ 2 ಮತ್ತು ಆರ್‌ 3 ಎಂಬ ಚೌಕಟ್ಟಿನಡಿ ತ್ರಿಭಾಷಾ ಸೂತ್ರವನ್ನು ರೂಪಿಸಲಾಗಿದೆ. ನೂತನ ರಾಷ್ಟ್ರೀಯ ಪಠ್ಯ ಚೌಕಟ್ಟಿನ ಶಿಫಾರಸಿನಂತೆ 3 ಭಾಷೆಗಳ ಪೈಕಿ 2 ದೇಶಿಯ ಮೂಲ ಭಾಷೆಗಳಾಗಿವುದು ಕಡ್ಡಾಯವಾಗಿದೆ. ಬಹುಭಾಷಾ ಶಿಕ್ಷಣದ ಹಂತ ಹಂತದ ಅನುಷ್ಠಾನದ ಮುಂದುವರಿಕೆಯಾಗಿ 2026-27ರ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವಂತೆ 6ನೇ ತರಗತಿಯಿಂದ 3ನೇ ಭಾಷೆಯನ್ನು ಕಡ್ಡಾಯಗೊಳಿಸಲಾಗುವುದು. ಪ್ರತಿಯೊಬ್ಬ ವಿದ್ಯಾರ್ಥಿಗಳು ಕನಿಷ್ಠ 2 ಭಾರತೀಯ ಭಾಷೆಗಳನ್ನು ಅಧ್ಯಯನ ಮಾಡುವುದು ಕಡ್ಡಾಯವಾಗಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರಿಂದ ಕನ್ನಡ, ಸಂಸ್ಕೃತ, ಹಿಂದಿ, ಬಂಗಾಳಿ, ತೆಲುಗು, ತಮಿಳು ಸೇರಿದಂತೆ ಇನ್ನಿತರೆ ಭಾಷೆಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದಂತಾಗಲಿದೆ.

ಪಶ್ನೆಪತ್ರಿಕೆಯಲ್ಲಿರುವ ಕ್ಯೂಆರ್‌ ಕೋಡ್‌ ವೆಬ್‌ ಲಿಂಕಲ್ಲ: ಸಿಬಿಎಸ್‌ಇ

ಸಿಬಿಎಸ್‌ಇ ಪ್ರಶ್ನೆಪತ್ರಿಕೆಗಳಲ್ಲಿನ ಕ್ಯೂಆರ್ ಕೋಡ್‌ಗಳು ಯಾವುದೇ ವೆಬ್‌ ಲಿಂಕ್‌ಗಳಲ್ಲ ಎಂಬ ಬಗ್ಗೆ ಮಂಡಳಿ ಸ್ಪಷ್ಟನೆ ನೀಡಿದೆ. ಇತ್ತೀಚೆಗೆ ಈ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದಾಗ ವಿಚಿತ್ರ ಫಲಿತಾಂಶಗಳು ಬರುತ್ತಿವೆ ಎಂಬ ಸುದ್ದಿ ವೈರಲ್ ಆದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ಬಂದಿದೆ. ಪ್ರಶ್ನೆಪತ್ರಿಕೆಯಲ್ಲಿರುವ ಕ್ಯೂಆರ್‌ ಕೋಡ್‌ಗಳು ಯಾವುದೇ ವೆಬ್‌ಸೈಟ್‌ಗೆ ಅಥವಾ ಇಂಟರ್ನೆಟ್ ಪುಟಕ್ಕೆ ಲಿಂಕ್ ಆಗಿಲ್ಲ. ಇವು ಕೇವಲ ಆಂತರಿಕ ಆಡಳಿತಾತ್ಮಕ ಉದ್ದೇಶಗಳಿಗಾಗಿ ಬಳಸುವ ಎನ್‌ಕ್ರಿಪ್ಟ್ ಮಾಡಲಾದ ಡೇಟಾ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಏನಿದು ಬದಲಾವಣೆ?

- ಸಿಬಿಎಸ್‌ಇಯಿಂದ 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ನೂತನ ಪಠ್ಯಕ್ರಮ ಅನಾವರಣ

- ಈ ವರ್ಷನೇ ಸಿಬಿಎಸ್‌ಇ ಶಾಲೆಗಳಲ್ಲಿ ತ್ರಿಭಾಷಾ ಸೂತ್ರ. ಇಂಗ್ಲಿಷ್‌ಗೆ ವಿದೇಶಿ ಭಾಷೆಯ ಸ್ಥಾನಮಾನ

- 2 ಭಾರತೀಯ ಭಾಷೆ ಕಲಿಕೆ ಕಡ್ಡಾಯ. 1 ಅನ್ಯ ಭಾಷೆ (ದೇಶಿ ಅಥವಾ ವಿದೇಶಿ) ಕಲಿಯಲು ಅವಕಾಶ

- ಈ ವರ್ಷ 6ನೇ ತರಗತಿಗೆ ಜಾರಿ, 2030-31ಕ್ಕೆ 10ನೇ ತರಗತಿಯವರೆಗೂ ತ್ರಿಭಾಷಾ ಸೂತ್ರ ವಿಸ್ತರಣೆ

- ಸದ್ಯಕ್ಕೆ 6ರಿಂದ 8ರವರೆಗೆ ತ್ರಿಭಾಷೆ, 9, 10 ದ್ವಿಭಾಷೆ ಕಲಿಸುತ್ತಿದ್ದ ಬಹುತೇಕ ಸಿಬಿಎಸ್‌ಇ ಶಾಲೆಗಳು

ಪರಿಣಾಮ ಏನು?

- ತ್ರಿಭಾಷಾ ಸೂತ್ರದಿಂದಾಗಿ 10ನೇ ತರಗತಿಯವರೆಗೂ 2 ಭಾರತೀಯ ಭಾಷೆಗಳನ್ನು ಕಲಿಯಲೇಬೇಕು

- ಉದಾಹರಣೆಗೆ, ಕನ್ನಡ+ಹಿಂದಿ, ಕನ್ನಡ+ಸಂಸ್ಕೃತ, ಹಿಂದಿ+ಸಂಸ್ಕೃತ... ರೀತಿಯ ಆಯ್ಕೆ ಕಡ್ಡಾಯ

- ಇಂಗ್ಲಿಷ್ ಅನ್ನು ವಿದೇಶಿ ಭಾಷೆ ಎಂದು ಪರಿಗಣಿಸಿದ್ದರಿಂದ ಇನ್ನೊಂದು ವಿದೇಶಿ ಭಾಷೆ ಕಲಿಯಲಾಗದು

- ಉದಾಹರಣೆಗೆ, ಇಂಗ್ಲಿಷ್, ಕನ್ನಡ/ಹಿಂದಿ/ಸಂಸ್ಕೃತ ಜತೆಗೆ ಜರ್ಮನ್/ಫ್ರೆಂಚ್/ಜಪಾನಿಗೆ ಅವಕಾಶವಿಲ್ಲ

- ಒಟ್ಟಾರೆಯಾಗಿ ಭಾರತೀಯ ಭಾಷೆಗಳ ಕಲಿಕೆ, ಬಳಕೆ ಹಾಗೂ ಬೆಳವಣಿಗೆಯ ನಿಟ್ಟಿನಲ್ಲಿ ಕೇಂದ್ರ ನಿರ್ಧಾರ

9ನೇ ತರಗತಿಗೆ ಗಣಿತ, ವಿಜ್ಞಾನಕ್ಕೆ ಇನ್ನ 2 ಸ್ತರದ ಪರೀಕ್ಷೆ

9ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನದಲ್ಲಿ 2 ಹಂತದ ವ್ಯವಸ್ಥೆಯನ್ನು (ಪ್ರಾಮಾಣಿತ ಮತ್ತು ಸುಧಾರಿತ) ಈ ಶೈಕ್ಷಣಿಕ ವರ್ಷದಲ್ಲೇ ಆರಂಭಿಸಲಾಗುತ್ತಿದ್ದು, ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ 3 ಗಂಟೆಗಳ ಕಾಲ 80 ಅಂಕಗಳ ಸಾಮಾನ್ಯ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಜತೆಗೆ ಹೆಚ್ಚಿನ ಪ್ರಾವೀಣ್ಯತೆಯನ್ನು ಬಯಸುವ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ 1 ಗಂಟೆ ಕಾಲ 25 ಅಂಕಗಳ ಸುಧಾರಿತ ಪತ್ರಿಕೆಯನ್ನು ತೆಗೆದುಕೊಳ್ಳಬಹುದು. ಸುಧಾರಿತ ಪತ್ರಿಕೆಯಲ್ಲಿ ಪಡೆದ ಅಂಕಗಳನ್ನು ಒಟ್ಟು ಮೊತ್ತಕ್ಕೆ ಸೇರಿಸಲಾಗುವುದಿಲ್ಲ. ಬದಲಾಗಿ ಈ ಪತ್ರಿಕೆಯಲ್ಲಿ ಶೇ.50ರಷ್ಟು ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಪ್ರತ್ಯೇಕವಾಗಿ ನಮೂದಿಸಲಾಗುತ್ತದೆ. ಈ ಹೊಸ ಪದ್ಧತಿಯ ಅಡಿಯಲ್ಲಿ ಮೊದಲ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳು 2028 ರಲ್ಲಿ ನಡೆಯಲಿವೆ.

Dailyhunt
Disclaimer: This content has not been generated, created or edited by Dailyhunt. Publisher: Udayavani