ಉದಯವಾಣಿ

1.3M Followers

ಎಂಎಲ್‌ಸಿ ಚುನಾವಣೆ: ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಹಕ್ಕಿಲ್ಲ: ಹೈಕೋರ್ಟ್‌

04 Nov 2022.08:10 AM

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ ನಡೆಯವ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್‌ ವಿರುದ್ಧ ಕೇವಲ 6 ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ಸಲ್ಲಿಸಿದ್ದ ಚುನಾವಣ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನ್‌ ಗೌಡರ್‌ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಸಂವಿಧಾನದ ಕಲಂ 243 (6) ಮತ್ತು ಕೆಎಂಸಿ ಕಾಯ್ದೆ ಪ್ರಕಾರ ನಾಮನಿರ್ದೇಶಿತ ಸದಸ್ಯರಿಗೆ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲೂ ಮತದಾನ ಮಾಡುವ ಹಕ್ಕಿಲ್ಲ, ಅವರು ಸಲಹೆ-ಸೂಚನೆಗಳನ್ನು ನೀಡಬಹುದಷ್ಟೇ. ಹಾಗಾಗಿ ವಿಧಾನಪರಿಷತ್‌ ಚುನಾವಣೆಯಲ್ಲೂ ಮತದಾನದ ಹಕ್ಕು ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ಈ ತೀರ್ಪಿನಿಂದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕಳೆದ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದ ಬಿಜೆಪಿಯ ಎಂ.ಕೆ. ಪ್ರಾಣೇಶ್‌ ಅವರಿಗೆ ಭವಿಷ್ಯದಲ್ಲಿ ಸಂಕಷ್ಟ ಎದುರಾಗಬಹುದು. ಆದರೆ ಅವರ ಆಯ್ಕೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಪ್ರತ್ಯೇಕ ಚುನಾವಣ ತಕರಾರು ಅರ್ಜಿ ಹೈಕೋರ್ಟ್‌ನ ಮತ್ತೂಂದು ನ್ಯಾಯಪೀಠದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ ಅದು ಇತ್ಯರ್ಥವಾಗುವ ತನಕ ಈ ತೀರ್ಪು ಪ್ರಾಣೇಶ್‌ ಅವರ ಆಯ್ಕೆಯ ಮೇಲೆ ಪರಿಣಾಮ ಬೀರುವುದಿಲ್ಲ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆದ ಚುನಾವಣೆಯ ಮತದಾರರ ಪಟ್ಟಿಗೆ 4 ಪ.ಪಂ.ಗಳ 12 ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿರುವುದು ಕಾನೂನುಬಾಹಿರ ಕ್ರಮ. ನಿಯಮ ಪ್ರಕಾರ ನಾಮನಿರ್ದೇಶಿತ ಸದಸ್ಯರಿಗೆ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಭಾಗವಹಿಸಬಹುದೇ ವಿನಾ ಅವರಿಗೆ ಮತದಾನದ ಹಕ್ಕಿರುವುದಿಲ್ಲ ಎಂದು ವಾದಿಸಿದ್ದರು.

ಇದನ್ನು ಅಲ್ಲಗಳೆದಿದ್ದ ಚುನಾವಣ ಆಯೋಗ ಹಾಗೂ ಎಂ.ಕೆ. ಪ್ರಾಣೇಶ್‌ ಪರ ವಕೀಲರಿಬ್ಬರು, ನಾಮನಿರ್ದೇಶಿತರ ಸದಸ್ಯರಿಗೆ ಸಭೆಗಳಲ್ಲಿ ಮತದಾನದ ಹಕ್ಕಿಲ್ಲ ಎಂದಾಕ್ಷಣ ವಿಧಾನಪರಿಷತ್‌ ಚುನಾವಣೆಯಲ್ಲೂ ಮತದಾನದ ಹಕ್ಕಿಲ್ಲವೆಂದು ಹೇಳಲಾಗದು. ಇವೆರಡೂ ಬೇರೆ ಬೇರೆ. ನಾಮನಿರ್ದೇಶಿತರಿಗೆ ಎಂಎಲ್‌ಸಿ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲವೆಂದು ಎಲ್ಲೂ ನಿರ್ಬಂಧ ಹೇರಿಲ್ಲ ಎಂದಿದ್ದರು.

ಪ್ರಕರಣದ ಹಿನ್ನೆಲೆ:

2021ರ ನ. 9ರಂದು ಚಿಕ್ಕಮಗಳೂರು ಸೇರಿ 20 ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ 25 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಪ್ರಾಣೇಶ್‌ 1,182 ಮತ್ತು ಗಾಯತ್ರಿ 1,176 ಮತಗಳನ್ನು ಪಡೆದಿದ್ದರು. ಎಂ.ಕೆ. ಪ್ರಾಣೇಶ್‌ 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.ಫ‌ಲಿತಾಂಶ ಪ್ರಶ್ನಿಸಿ ಗಾಯತ್ರಿ ಶಾಂತೇಗೌಡ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಮೂಡಿಗೆರೆ, ಎನ್‌.ಆರ್‌. ಪುರ. ಶೃಂಗೇರಿ ಮತ್ತು ಕೊಪ್ಪ ಸ್ಥಳೀಯ ಸಂಸ್ಥೆಗಳ 12 ನಾಮನಿರ್ದೇಶಿತ ಸದಸ್ಯರಿಗೆ ಕಾನೂನುಬಾಹಿರವಾಗಿ ಮತದಾನದ ಹಕ್ಕು ನೀಡಿರುವುದರಿಂದ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆದರೆ ಸಂವಿಧಾನದ ನಿಯಮಗಳಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ವಿಧಾನಪರಿಷತ್‌ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ತಮ್ಮ ಪ್ರತಿಸ್ಪರ್ಧಿಯ ಆಯ್ಕೆ ಅಕ್ರಮ ಹಾಗೂ ಕಾನೂನುಬಾಹಿರ. ಹಾಗಾಗಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲವೆಂದು ಘೋಷಿಸಬೇಕು ಎಂದು ಕೋರಿದ್ದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags