ಇತ್ತೀಚಿನ ದಿನಗಳಲ್ಲಿ ʼಎನರ್ಜಿ ಪಾನೀಯಗಳು' ಯುವಜನತೆಯ ಅಚ್ಚುಮೆಚ್ಚಿನ ಪಾನೀಯವಾಗಿ ಮಾರ್ಪಟ್ಟಿದೆ. ಬಣ್ಣಬಣ್ಣದ ಈ ಪಾನೀಯಗಳನ್ನು ಕುಡಿಯುವುದು ಇಂದಿನ ದಿನಗಳಲ್ಲಿ ಒಂದು ಫ್ಯಾಷನ್ ಆಗಿದೆ. ಕೇವಲ 20 ರೂಪಾಯಿಯಿಂದ ಸಿಗುವ ಇಂತಹ ಪಾನೀಯಗಳು ಯುವಜನತೆಯನ್ನೂ ಮಂತ್ರಮುಗ್ಧರನ್ನಾಗಿಸುತ್ತಿವೆ.
ಆದರೆ, ಕ್ಷಣಿಕ ಶಕ್ತಿಯನ್ನು ನೀಡುವ ಈ ಪಾನೀಯಗಳ ಒಳಗೆ ಅಡಗಿರುವ ಅಪಾಯಗಳು ಮಾತ್ರ ಅಕ್ಷರಶಃ ಭಯಾನಕ.
ಹೃದಯದ ಮೇಲಿನ ಮಾರಣಾಂತಿಕ ಪರಿಣಾಮ
ಎನರ್ಜಿ ಪಾನೀಯ ಸೇವನೆ ಅತ್ಯಂತ ಭೀಕರ ಪರಿಣಾಮ ಬೀರುವುದು ಹೃದಯದ ಮೇಲೆ. ಇದರಲ್ಲಿರುವ ಅತಿಯಾದ ಕೆಫಿನ್ ಮತ್ತು ಟೌರಿನ್ ಹೃದಯದ ವಿದ್ಯುತ್ ತರಂಗಗಳನ್ನು ತತ್‌ಕ್ಷಣವೇ ಬದಲಾಯಿಸುತ್ತವೆ. ಸಂಶೋಧನೆಗಳ ಪ್ರಕಾರ, ಕೇವಲ ಒಂದು ಬಾಟಲಿ ಎನರ್ಜಿ ಪಾನೀಯ ಸೇವನೆ ಹೃದಯದ ಬಡಿತದ ವೇಗವನ್ನು ಹೆಚ್ಚು ಕಡಿಮೆ ಮಾಡುವುದರಿಂದ ಹೃದಯದ ಬಡಿತದ ನಿರ್ದಿಷ್ಟ ಲಯವನ್ನು ತಪ್ಪಿಸಿ, ಮಾರಣಾಂತಿಕ 'ಅರಿತ್ಮಿಯಾ'ಗೆ ಕಾರಣವಾಗುತ್ತದೆ. ಯುವ ಜನರಲ್ಲಿ ಯಾವುದೇ ಪೂರ್ವಭಾವಿ ಹೃದಯ ಕಾಯಿಲೆ ಇಲ್ಲದಿದ್ದರೂ, ಎನರ್ಜಿ ಪಾನೀಯಗಳಿಂದಾಗಿ ಹಠಾತ್ ಹೃದಯಾಘಾತ ಸಂಭವಿಸುವ ಅಪಾಯವಿದೆ.
ನರಮಂಡಲ ಮತ್ತು ಮೆದುಳಿನ ಮೇಲಿನ ದುಷ್ಪರಿಣಾಮಗಳು
ಹೆಚ್ಚಿನ ಪ್ರಮಾಣದ ಕೆಫಿನ್ ನರಮಂಡಲವನ್ನು ವಿಪರೀತವಾಗಿ ಉತ್ತೇಜಿಸುತ್ತದೆ. ಇದರಿಂದ ನಿದ್ರಾಹೀನತೆ, ವಿಪರೀತ ಆತಂಕ ಮತ್ತು ಕೈಕಾಲು ನಡುಕ ಶುರುವಾಗುತ್ತದೆ. ದೀರ್ಘಕಾಲದ ಬಳಕೆ ಮನುಷ್ಯನನ್ನು ಭ್ರಮೆಗೆ ತಳ್ಳುತ್ತದೆ. ವೈದ್ಯಕೀಯ ಅಧ್ಯಯನಗಳ ಪ್ರಕಾರ, ದಿನಕ್ಕೆ 400 ಎಂ.ಜಿ ಗಿಂತ ಹೆಚ್ಚು ಕೆಫಿನ್ ಸೇವಿಸಿದವರಲ್ಲಿ ಇಲ್ಲದ ಶಬ್ದಗಳು ಕೇಳಿಸುವ ಮತ್ತು ಇಲ್ಲದ ವಸ್ತುಗಳು ಕಾಣಿಸುವ ತೀವ್ರ ಮಾನಸಿಕ ಅಸ್ವಸ್ಥತೆಗಳು ಕಾಣಿಸಿಕೊಳ್ಳುತ್ತವೆ.
ಜೀರ್ಣಾಂಗವ್ಯೂಹ ಮತ್ತು ಮೂತ್ರಪಿಂಡದ ಸಮಸ್ಯೆಗಳು
ಎನರ್ಜಿ ಪಾನೀಯಗಳಲ್ಲಿರುವ ಹೆಚ್ಚಿನ ಪ್ರಮಾಣದ ಸಿಟ್ರಿಕ್ ಆಮ್ಲ ಮತ್ತು ಕೃತಕ ಬಣ್ಣಗಳು ಹೊಟ್ಟೆಯಲ್ಲಿ ಅಲ್ಸರ್ ಮತ್ತು ತೀವ್ರ ಆಯಸಿಡಿಟಿಯನ್ನು ಉಂಟು ಮಾಡುತ್ತವೆ. ಜತೆಗೆ ಕೆಫಿನ್ ಒಂದು ಪ್ರಬಲ 'ಡೈಯುರೆಟಿಕ್' ಆಗಿರುವುದರಿಂದ, ಇದು ದೇಹದಲ್ಲಿರುವ ನೀರಿನ ಅಂಶವನ್ನು ಮೂತ್ರದ ಮೂಲಕ ಅತಿಯಾಗಿ ಹೊರ ಹಾಕಿ ತೀವ್ರ ನಿರ್ಜಲೀಕರಣ ಉಂಟುಮಾಡುತ್ತದೆ. ಇದು ಮೂತ್ರಪಿಂಡಗಳ ಮೇಲೆ ಅಪಾರ ಒತ್ತಡವನ್ನು ಹೇರಿ, ಶಾಶ್ವತ ಕಿಡ್ನಿ ವೈಫಲ್ಯಕ್ಕೆ ದಾರಿ ಮಾಡಿಕೊಡುತ್ತದೆ.
ಹಲ್ಲುಗಳ ಸವೆತ, ಮೂಳೆಗಳ ದೌರ್ಬಲ್ಯ
ಎನರ್ಜಿ ಪಾನೀಯಗಳ ಪಿಎಚ್ ಮಟ್ಟ ಬಹಳ ಕಡಿಮೆಯಿರುತ್ತದೆ (ಅತ್ಯಂತ ಆಮ್ಲೀಯ ಗುಣ). ಇದು ನೇರವಾಗಿ ಹಲ್ಲುಗಳ ಎನಾಮೆಲ್ ಅನ್ನು ಕರಗಿಸುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲೇ ಹಲ್ಲುಗಳು ಹುಳುಕಾಗುತ್ತವೆ. ಅತಿಯಾದ ಕೆಫಿನ್ ಮೂಳೆಗಳಿಂದ ಕ್ಯಾಲ್ಸಿಯಂ ಅಂಶ ಹೀರಿಕೊಳ್ಳುವುದರಿಂದ ಮೂಳೆಗಳು ಟೊಳ್ಳಾಗುತ್ತವೆ.
ಏಕೆ ಈ ಪಾನೀಯಗಳು ಮಾರಣಾಂತಿಕ ?
ಮಿತಿಮೀರಿದ ಕೆಫಿನ್
ಸಾಮಾನ್ಯ ಕಾಫಿಯಲ್ಲಿರುವ ಕೆಫಿನ್‌ಗೂ ಎನರ್ಜಿ ಪಾನೀಯಗಳಲ್ಲಿರುವ ಕೆಫಿನ್‌ಗೂ ಬಹಳ ವ್ಯತ್ಯಾಸವಿದೆ. ಬಿಸಿ ಕಾಫಿಯನ್ನು ನಾವು ಗುಟುಕು ಹಾಕುತ್ತ ಕುಡಿಯುತ್ತೇವೆ. ಆದರೆ ಎನರ್ಜಿ ಪಾನೀಯಗಳನ್ನು ವೇಗವಾಗಿ ಕುಡಿಯಲಾಗುತ್ತದೆ. ಇದರಿಂದ ಕೇವಲ 15 ನಿಮಿಷಗಳಲ್ಲಿ ಭಾರೀ ಪ್ರಮಾಣದ ಕೆಫಿನ್ ಮೆದುಳು ಮತ್ತು ರಕ್ತವನ್ನು ಸೇರುತ್ತದೆ. ಇದು ರಕ್ತನಾಳಗಳನ್ನು ಸಂಕುಚಿತಗೊಳಿಸಿ, ರಕ್ತದೊತ್ತಡವನ್ನು ಏಕಾಏಕಿ ವಿಪರೀತವಾಗಿ ಏರಿಸುತ್ತದೆ.
ಅತಿಯಾದ ಸಕ್ಕರೆಯ ಪ್ರಮಾಣ
ಒಂದು 250 ಎಂಎಲ್ ಎನರ್ಜಿ ಪಾನೀಯದಲ್ಲಿ ಸರಾಸರಿ 7 ರಿಂದ 9 ಚಮಚದಷ್ಟು ಸಕ್ಕರೆ ಇರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ರಾಕೆಟ್‌ನಂತೆ ಮೇಲಕ್ಕೇರಿಸುತ್ತದೆ. ಮೇಲಿಂದ ಮೇಲೆ ಇದನ್ನು ಸೇವಿಸುವುದರಿಂದ ದೇಹದಲ್ಲಿ ʼಇನ್ಸುಲಿನ್ ರೆಸಿಸ್ಟೆನ್ಸ್' ಉಂಟಾಗಿ, ಸಣ್ಣ ವಯಸ್ಸಿನಲ್ಲೇ ಟೈಪ್-2 ಡಯಾಬಿಟೀಸ್ ಬರುತ್ತದೆ. ಅಲ್ಲದೆ, ಇದು ತ್ವರಿತ ತೂಕ ಹೆಚ್ಚಳ ಮತ್ತು ಲಿವರ್‌ನಲ್ಲಿ ಕೊಬ್ಬು ಶೇಖರಣೆಗೂ ಕಾರಣವಾಗುತ್ತದೆ.
ಟೌರಿನ್-ಗುರಾನಾದ ಮಾರಕ ಸಮ್ಮಿಶ್ರಣ
ಈ ಪಾನೀಯಗಳಲ್ಲಿ ಶಕ್ತಿ ಹೆಚ್ಚಿಸಲು ಟೌರಿನ್ ಎಂಬ ಅಮೈನೋ ಆಮ್ಲ ಮತ್ತು ಗುರಾನಾ ಎಂಬ ಸಸ್ಯದ ಸಾರವನ್ನು ಕೃತಕವಾಗಿ ಬಳಸಲಾಗುತ್ತದೆ. ಗುರಾನಾದಲ್ಲಿ ನೈಸರ್ಗಿಕವಾಗಿ ಕಾಫಿ ಬೀಜಕ್ಕಿಂತ 4 ಪಟ್ಟು ಹೆಚ್ಚು ಕೆಫಿನ್ ಅಡಗಿರುತ್ತದೆ. ಈ ಕೆಫಿನ್, ಸಕ್ಕರೆ ಮತ್ತು ಟೌರಿನ್‌ಗಳ ಮಾರಕ ಸಮ್ಮಿಶ್ರಣವು ಹೃದಯದ ಸ್ನಾಯುಗಳಿಗೆ ಅತಿಯಾದ ಉತ್ತೇಜನ ನೀಡಿ, ಹೃದಯದ ಬಡಿತವನ್ನು ಅಸ್ತವ್ಯಸ್ತಗೊಳಿಸುತ್ತದೆ. ಹೃದಯದ ಬಡಿತವನ್ನು ಅಸ್ತವ್ಯಸ್ತಗೊಳಿಸುತ್ತದೆ.
ಆಲ್ಕೋಹಾಲ್ ಜತೆಗಿನ ಸಮ್ಮಿಶ್ರಣದ ಅಪಾಯ
ಯುವಕರು ಮದ್ಯದೊಂದಿಗೆ ಎನರ್ಜಿ ಪಾನೀಯಗಳನ್ನು ಬೆರೆಸಿ ಕುಡಿಯುವುದು ಇತ್ತೀಚಿನ ಟ್ರೆಂಡ್. ಎನರ್ಜಿ ಪಾನೀಯಗಳು ಮೆದುಳನ್ನು ಉತ್ತೇಜಿತ ಸ್ಥಿತಿಯಲ್ಲಿಡುತ್ತದೆ. ಆದರೆ ಮದ್ಯ ದೇಹದ ವ್ಯವಸ್ಥೆಯನ್ನು ಕುಗ್ಗಿಸುತ್ತದೆ. ಇದರಿಂದಾಗಿ ಮನುಷ್ಯನಿಗೆ ತಾನು ಎಷ್ಟು ಮದ್ಯ ಕುಡಿದಿದ್ದೇನೆ ಎಂಬ ಅರಿವೇ ಇರುವುದಿಲ್ಲ.
ಮಾರುಕಟ್ಟೆಯ ಜಾಲಕ್ಕೆ ಮರುಳಾಗದಿರಿ!
ತಂಪು ಪಾನೀಯ ಕಂಪೆನಿಗಳು ತಮ್ಮ ಜಾಹೀರಾತುಗಳಲ್ಲಿ ಈ ಪಾನೀಯಗಳನ್ನು ಕುಡಿದರೆ ʼರೆಕ್ಕೆ ಬರುತ್ತದೆ', ʼತತ್ ಕ್ಷಣ ಮಿಂಚಿನ ಶಕ್ತಿ ಬರುತ್ತದೆ', ʼಸಾಹಸ ಕ್ರೀಡೆಗಳನ್ನು ಸುಲಭವಾಗಿ ಮಾಡಬಹುದು' ಎಂದು ಬಿಂಬಿಸುತ್ತವೆ. ಇದು ಹದಿಹರೆಯದವರ ಮತ್ತು ಮಕ್ಕಳ ಎಳೆಯ ಮನಸ್ಸಿನ ಮೇಲೆ ಪ್ರಬಲ ಪ್ರಭಾವ ಬೀರುತ್ತದೆ.
ಅವನೀಶ್ ಭಟ್,
ಸವಣೂರು

