ಕೊಲಂಬೊ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಆಡಲು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ ಒಸಿ) ನೀಡದ ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ಆರ್‌ಸಿಬಿ ತಂಡದ ವೇಗಿ ನುವಾನ್ ತುಷಾರ ಕೊಲಂಬೊ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣ ನೀಡಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅವರಿಗೆ ಎನ್‌ಒಸಿ ನಿರಾಕರಿಸಿತ್ತು.
ಆದರೆ 31 ವರ್ಷದ ತುಷಾರ, "ಮಾ. 31ಕ್ಕೆ ಮಂಡಳಿಯೊಂದಿಗಿನ ನನ್ನ ಗುತ್ತಿಗೆ ಮುಕ್ತಾಯಗೊಂಡಿದೆ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದು, ಗುತ್ತಿಗೆ ವಿಸ್ತರಿಸುವ ಯಾವುದೇ ಇಚ್ಛೆಯಿಲ್ಲ. ಹೀಗಾಗಿ ಫಿಟ್‌ನೆಸ್ ನೆಪವೊಡ್ಡಿ ಎನ್‌ಒಸಿ ತಡೆಹಿಡಿಯುವುದು ಸರಿಯಲ್ಲ," ಎಂದು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.
ಈ ಅರ್ಜಿಯ ವಿಚಾರಣೆ ಎ. 9ರಂದು ನಡೆಯಲಿದೆ.

