ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಹೊಸ ಡಿಜಿಟಲ್ ವೇದಿಕೆ EPFO 3.0 ಅಡಿಯಲ್ಲಿ ಮಹತ್ವದ ಸೇವೆಯನ್ನು ಪರಿಚಯಿಸಲು ಸಜ್ಜಾಗಿದೆ. ಇದರಡಿ, ಸದಸ್ಯರು ತಮ್ಮ ಭವಿಷ್ಯ ನಿಧಿ (PF) ಹಣವನ್ನು ನೇರವಾಗಿ UPI ಆಯಪ್ ಹಾಗೂ EPF-ಲಿಂಕ್ ಮಾಡಿದ ATMಗಳ ಮೂಲಕ ಹಿಂಪಡೆಯಲು ಸಾಧ್ಯವಾಗಲಿದೆ.
ಮೂಲಗಳ ಪ್ರಕಾರ, ಈ ಹೊಸ ಸೌಲಭ್ಯವು ಜೂನ್ ಅಂತ್ಯದೊಳಗೆ ಜಾರಿಗೆ ಬರಲಿದ್ದು, ಈ ಕುರಿತು ಕೇಂದ್ರ ಕಾರ್ಮಿಕ ಸಚಿವ ಮನ್‌ಸುಖ್ ಮಾಂಡವಿಯಾ ಶೀಘ್ರದಲ್ಲೇ ಅದ್ಜಿಕೃತ ಘೋಷಣೆ ಹೊರಡಿಸಲಿದ್ದಾರೆ.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಸಹಭಾಗಿತ್ವದಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರ ಯಶಸ್ವಿ ಪರೀಕ್ಷೆಯೂ ಈಗಾಗಲೇ ಪೂರ್ಣಗೊಂಡಿದೆ.
ಶೇ. 75 ರಷ್ಟು ಹಣ ತಕ್ಷಣವೇ ಖಾತೆಗೆ!
ಹೊಸ ನಿಯಮದ ಪ್ರಕಾರ, ಬಳಕೆದಾರರು ತಮ್ಮ ಇಪಿಎಫ್ ಬ್ಯಾಲೆನ್ಸ್‌ನ ಶೇಕಡಾ 75 ರಷ್ಟು ಹಣವನ್ನು ಯುಪಿಐ ಅಥವಾ ಯುಪಿಐ ಚಾಲಿತ ಎಟಿಎಂ ಬಳಸಿ ತಕ್ಷಣವೇ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಪ್ರಸ್ತುತ ಪಿಎಫ್ ಹಣವನ್ನು ಹಿಂಪಡೆಯಲು ಕ್ಲೈಮ್‌ಗಳನ್ನು ಸಲ್ಲಿಸಿ, ಅದಕ್ಕೆ ಅನುಮೋದನೆ ಸಿಗುವವರೆಗೆ ಕಾಯಬೇಕಾಗಿತ್ತು. ಆದರೆ ಈ ಹೊಸ ವೈಶಿಷ್ಟ್ಯದಿಂದಾಗಿ ಕಾಗದದ ಕೆಲಸ (Paperwork) ಮತ್ತು ಅನಗತ್ಯ ವಿಳಂಬ ತಪ್ಪಲಿದ್ದು, ಪಾರದರ್ಶಕತೆ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು. ಆದರೆ, ನಿವೃತ್ತಿ ನಿಧಿಯ ಭದ್ರತೆಗೆ ಯಾವುದೇ ಧಕ್ಕೆಯಾಗದಂತೆ ವಂಚನೆ ತಡೆಗಟ್ಟಲು ಇಪಿಎಫ್‌ಒ ಯಾವ ರೀತಿಯ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
EPFO 3.0ರ ಪ್ರಮುಖ ಬದಲಾವಣೆಗಳು:
- ಪಿಎಫ್ ಕ್ಲೇಮ್‌ಗಳ ಆಟೋ-ಸೆಟಲ್‌ಮೆಂಟ್ ಮಿತಿ 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ.
- ಇನ್ನು ಮುಂದೆ ಚಂದಾದಾರರು ಹಲವಾರು ದಾಖಲೆಗಳನ್ನು ಸಲ್ಲಿಸುವ ಬದಲು, 'ಉಮಂಗ್' (UMANG) ಆಯಪ್ ಮೂಲಕ ಮುಖದ ಗುರುತು ಪತ್ತೆ ಹಚ್ಚುವ (Face Authentication Technology) ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಗುರುತನ್ನು ಸುಲಭವಾಗಿ ಪರಿಶೀಲಿಸಬಹುದು.

