Dailyhunt Logo
  • Light mode
    Follow system
    Dark mode
    • Play Story
    • App Story
ಎರಡು ತಿಂಗಳಲ್ಲಿ ಆರೋಗ್ಯ ಇಲಾಖೆಯ ಸಮಸ್ಯೆಗಳಿಗೆ ಪರಿಹಾರ: ಸಚಿವ ಯು.ಟಿ. ಖಾದರ್

ಎರಡು ತಿಂಗಳಲ್ಲಿ ಆರೋಗ್ಯ ಇಲಾಖೆಯ ಸಮಸ್ಯೆಗಳಿಗೆ ಪರಿಹಾರ: ಸಚಿವ ಯು.ಟಿ. ಖಾದರ್

ಬಳ್ಳಾರಿ: ರಾಜ್ಯದ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಮುಂದಿನ ಎರಡು ತಿಂಗಳೊಳಗೆ ಆರೋಗ್ಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲ ಸಿಬಂದಿಯೂ ಕಡ್ಡಾಯವಾಗಿ ಹಾಜರಿದ್ದು ಕರ್ತವ್ಯ ನಿರ್ವಹಿಸಬೇಕು.

ನೇರ ನೇಮಕಾತಿಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಈಗಾಗಲೇ 250 ವೈದ್ಯರನ್ನು ನೇಮಕ ಮಾಡಲಾಗಿದೆ. ಆಯಾ ಜಿಲ್ಲೆಗಳ ಬೇಡಿಕೆಗೆ ಅನುಗುಣವಾಗಿ ಹೊರಗುತ್ತಿಗೆ ಆಧಾರದಲ್ಲಿಯೂ ಸಿಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಹೊಸದಾಗಿ 350 ಆಯಂಬುಲೆನ್ಸ್‌ಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ಸದ್ಯ 450 ಆಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಯಾವುದೇ ಗ್ರಾಮದಿಂದ 20ರಿಂದ 25 ನಿಮಿಷಗಳೊಳಗೆ ತಾಲೂಕು ಕೇಂದ್ರವನ್ನು ತಲುಪುವ ವ್ಯವಸ್ಥೆ ಇರಬೇಕು. ನಿಗದಿತ ಸಮಯಕ್ಕೆ ಆಯಂಬುಲೆನ್ಸ್ ತಲುಪದಿದ್ದರೆ ಅದರ ಜವಾಬ್ದಾರಿ ಹೊತ್ತವರಿಗೆ 3 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಮಟ್ಟದ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಕನಿಷ್ಠ ಐದು ಐಸಿಯು ಹಾಸಿಗೆಗಳ ವ್ಯವಸ್ಥೆ ಇರಬೇಕು. ಪಿಎಚ್‌ಸಿ ಮತ್ತು ಸಿಎಚ್‌ಸಿ ಕೇಂದ್ರಗಳ ಸುಧಾರಣೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಹೆರಿಗೆ ಸೇರಿದಂತೆ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗದೊಂದಿಗೆ ಮಹಿಳಾ ಆರೋಗ್ಯ ನೀತಿ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ವೈದ್ಯರ ಕೊರತೆ ನೀಗಿಸಲು 1,000 ವೈದ್ಯರ ನೇಮಕಾತಿಗೆ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ಪಡೆಯಲು ಅವಕಾಶವಿದೆ ಎಂದರು.

ಸಿಬಂದಿ ವೇತನ ವಿಳಂಬ ಒಪ್ಪಿಕೊಂಡ ಸಚಿವ
ಆರೋಗ್ಯ ಇಲಾಖೆಯಲ್ಲಿ ಖಾಸಗಿ ಏಜೆನ್ಸಿ ಮೂಲಕ ನೇಮಕಗೊಂಡಿರುವ ಸಿಬಂದಿಗೆ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿರುವುದನ್ನು ಸಚಿವರು ಒಪ್ಪಿಕೊಂಡರು. 108 ಆಯಂಬುಲೆನ್ಸ್ ಸೇವೆಯ ಸಿಬ್ಬಂದಿಯ ಬೇಡಿಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಅವರಿಂದ ಒಂದಲ್ಲ ಒಂದು ಬೇಡಿಕೆಗಳು ಬರುತ್ತಿವೆ. ಬಜೆಟ್ ಮಿತಿಯೂ ಇದೆ. ಆದರೆ, ಅವರ ಸಮಸ್ಯೆಗಳ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದರು.

ಔಷಧಗಳ ಕೊರತೆ ಕುರಿತು ಮಾತನಾಡಿದ ಅವರು, ಟೆಂಡರ್ ಪ್ರಕ್ರಿಯೆ ವಿಳಂಬದಿಂದ ಕೆಲವು ಕಡೆ ಔಷಧಗಳ ಕೊರತೆ ಉಂಟಾಗಿದೆ. ಇದು ತಾಂತ್ರಿಕ ಸಮಸ್ಯೆಯಾಗಿದ್ದು, ಅಗತ್ಯ ಔಷಧಗಳ ಲಭ್ಯತೆ ಇದೆ. ಕೆಲವು ಔಷಧಗಳನ್ನು ಖರೀದಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೂ ಅವಕಾಶವಿದೆ. ಮುಂದಿನ ಎರಡು ತಿಂಗಳೊಳಗೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ಆಹಾರ ಕಲಬೆರಕೆ ಕಂಡುಬಂದರೆ ಲೈಸನ್ಸ್ ರದ್ದು

ರಾಜ್ಯದಲ್ಲಿ ಹೋಟೆಲ್ ಮತ್ತು ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ನಡೆಸುತ್ತಿರುವ ದಾಳಿಗಳಿಂದ ದೇಶದಲ್ಲಿ ರಾಜ್ಯದ ಗೌರವ ಹೆಚ್ಚಾಗಿದೆ. ಸಣ್ಣ ಹೋಟೆಲ್‌ಗಳಿಂದ ಹಿಡಿದು ಪಂಚತಾರಾ ಹೋಟೆಲ್‌ಗಳವರೆಗೆ ತಪಾಸಣೆ ನಡೆಸಲಾಗಿದೆ. ಈ ಕಾರ್ಯದಲ್ಲಿ ಅಧಿಕಾರಿಗಳ ಜತೆಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯವಾಗಿದೆ. ಸಾರ್ವಜನಿಕರು ಕ್ಯೂಆರ್ ಕೋಡ್ ಮೂಲಕ ದೂರು ಸಲ್ಲಿಸಬಹುದು ಎಂದು ಮನವಿ ಮಾಡಿದರು.

ದೂರುಗಳ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕೆಎಫ್‌ಸಿ ಮಳಿಗೆಯನ್ನು ಬಂದ್ ಮಾಡಿಸಲಾಗಿದೆ. ಆಹಾರದಲ್ಲಿ ಕಲಬೆರಕೆ ಮಾಡಿರುವುದು ಕಂಡುಬಂದರೆ ದಂಡ ವಿಧಿಸುವುದರ ಜತೆಗೆ ಸಂಬಂಧಪಟ್ಟ ಸಂಸ್ಥೆಯ ಪರವಾನಗಿಯನ್ನೂ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಆಹಾರದ ಗುಣಮಟ್ಟದ ಮೇಲೆ ನಿಗಾ ಇಡಲು ವಾಚ್‌ಡಾಗ್ ಸಮಿತಿ ರಚಿಸುವ ಚಿಂತನೆಯೂ ಇದೆ ಎಂದರು.

ರಾಜಕೀಯದಲ್ಲಿ ಅಭಿವೃದ್ಧಿ ಮರೆಯಾಗಬಾರದು
ರಾಜ್ಯದಲ್ಲಿ ರಾಜಕೀಯ ಕೆಸರೆರಚಾಟ ಹೆಚ್ಚಾಗಿದ್ದು, ಸರ್ಕಾರದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳು ಗೌಣವಾಗುತ್ತಿವೆ. ಆರೋಪ-ಪ್ರತ್ಯಾರೋಪಗಳು ರಾಜಕೀಯದ ಭಾಗವಾಗಿದ್ದರೂ, ಆಯಾ ಸಚಿವರು ತಮ್ಮ ಇಲಾಖೆಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಖಾಸಗಿ ಆಸ್ಪತ್ರೆಗಳು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿವೆ. ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಆಸ್ಪತ್ರೆಗಳೇ ಅನಿವಾರ್ಯವಾಗಿರುವುದರಿಂದ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Udayavani