ಬೆಂಗಳೂರು: ಸಾಮೂಹಿಕ ಗಣತಿ ಪತ್ರ ಹಂಚಿಕೆ ಸೇರಿದಂತೆ ಕೇಂದ್ರ ಚುನಾವಣ ಆಯೋಗದಿಂದ ನಡೆಸುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ದಿನೇದಿನೆ ವಿವಾದದತ್ತ ತಿರುಗುತ್ತಿರುವುದನ್ನು ಗಮನಿಸಿರುವ ರಾಜ್ಯ ಬಿಜೆಪಿ ಇತ್ತ ಗಂಭೀರ ನಡೆ ಇರಿಸಿದ್ದು, ಪ್ರತಿ ಬಿಎಲ್‌ಒ ನಡೆಯನ್ನೂ ಗಮನಿಸುವ ಹಾಗೂ ಇಡೀ ಪ್ರಕ್ರಿಯೆಯಲ್ಲಿ ಸದಾ ಅವರ ಜತೆಗಿರುವಂತೆ ಸಂಘಟನಾತ್ಮಕ ರಚನೆಯನ್ನು ರೂಪಿಸಲು ನಿರ್ಧರಿಸಿದೆ.
ಜೂ. 30ರಿಂದ ರಾಜ್ಯದಲ್ಲಿ ಎಸ್‌ಐಆರ್ ಆರಂಭವಾಗಿದೆ. ಸುಮಾರು 6 ತಿಂಗಳಿಗೂ ಮುಂಚಿನಿಂದಲೇ ಬಿಜೆಪಿ ವತಿಯಿಂದ ಬಿಎಲ್‌ಎ-1, ಬಿಎಲ್‌ಎ-2ಗಳಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಆದರೆ, ವಿಧಾನ ಪರಿಷತ್ ಚುನಾವಣೆ ಅಡ್ಡಮತದಾನ ಹಾಗೂ ಸಮನ್ವಯದ ಕೊರತೆಯ ಕಾರಣಕ್ಕೆ ನಿಜವಾಗಿ ಎಸ್‌ಐಆರ್ ಆರಂಭವಾದಾಗ ಇಡೀ ಸಂಘಟನೆ ಪರಿಣಾಮಕಾರಿಯಾಗಿ ಧುಮುಕಲಿಲ್ಲ. ಜೆಡಿಎಸ್ ಪಕ್ಷವೇ ಎಸ್‌ಐಆರ್ ಅಕ್ರಮಗಳನ್ನು ಹೊರಗೆಳೆಯುವುದರಲ್ಲಿ ಮೇಲುಗೈ ಸಾಧಿಸಿರುವುದರ ಹಿನ್ನೆಲೆಯಲ್ಲಿ ರವಿವಾರ ಅನೇಕ ಸಭೆಗಳನ್ನು ನಡೆಸಿದ ಬಿಜೆಪಿ, ರಾಜ್ಯ ಮಟ್ಟದ ಪ್ರತಿ ಪದಾಧಿಕಾರಿಗೂ ತಲಾ 3 ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಜಿಲ್ಲೆ, ವಿಧಾನಸಭೆ ಕ್ಷೇತ್ರ ಹಾಗೂ ಬೂತ್ ಮಟ್ಟದಲ್ಲೂ ಕೋರ್ ಕಮಿಟಿಗಳನ್ನು ರಚಿಸಿ ತೀವ್ರ ವೇಗ ನೀಡಿದೆ.
ರಾಜ್ಯ ಪದಾಧಿಕಾರಿಗಳ ಸಭೆ:
ರವಿವಾರ ಸಂಜೆ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ಈ ಸಭೆಗೂ ಮುನ್ನ ರಾಜ್ಯ ಪದಾಧಿಕಾರಿಗಳೊಂದಿಗೆ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ರಾಜ್ಯ ಉಸ್ತುವಾರಿ ಸುಧಾಕರ್ ರೆಡ್ಡಿ ಸಭೆ ನಡೆಸಿದರು. ರಾಜ್ಯ ಕೋರ್ ಕಮಿಟಿ ಸದಸ್ಯರು ತಲಾ 3 ಜಿಲ್ಲೆಗಳ ಎಸ್‌ಐಆರ್ ಉಸ್ತುವಾರಿ ವಹಿಸಿಕೊಂಡು ಪ್ರವಾಸ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಅಧ್ಯಕ್ಷ, ಬಿಎಲ್‌ಎ-1, ಎಸ್‌ಐಆರ್ ಉಸ್ತುವಾರಿಯ ಕೋರ್ ಕಮಿಟಿ ರಚಿಸಲಾಗಿದೆ. ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಶಾಸಕರು ಅಥವಾ ಪರಾಜಿತ ಅಭ್ಯರ್ಥಿಯನ್ನೊಳಗೊಂಡ ಕೋರ್ ಕಮಿಟಿ, ಬೂತ್ ಮಟ್ಟದಲ್ಲಿ ಬಿಎಲ್‌ಎ-2 ಒಳಗೊಂಡ ಐವರ ಕೋರ್ ಕಮಿಟಿ ರಚಿಸಲಾಗಿದೆ. ಈ ತಂಡವೇ ಎಸ್‌ಐಆರ್ ಪ್ರಕ್ರಿಯೆಯನ್ನು ಮುನ್ನಡೆಸಬೇಕು.
ಬಿಎಲ್‌ಒ ಜತೆಗೆ ಸದಾ ಒಬ್ಬ ಬಿಜೆಪಿ ಪ್ರತಿನಿಧಿ ಇರಬೇಕು. ಬೂತ್ ಮಟ್ಟದಲ್ಲಿ ಬಿಎಲ್‌ಒ ಎಲ್ಲಿಗೆ ತೆರಳುತ್ತಾರೆ ಎನ್ನುವುದನ್ನು ಅವರಿಂದ ತಿಳಿದುಕೊಂಡು ಕಡ್ಡಾಯವಾಗಿ ಹಾಜರಿರಬೇಕು. ಸಾಮೂಹಿಕವಾಗಿ ಎಲ್ಲೇ ಅರ್ಜಿ ವಿತರಣೆ ಅಥವಾ ಭರ್ತಿ ಮಾಡಲು ಮುಂದಾದರೆ ಕೂಡಲೇ ರಾಜ್ಯ ಸಮಿತಿಗೆ ಮಾಹಿತಿ ನೀಡಬೇಕು. ಅನರ್ಹರ ಒಂದೇ ಒಂದು ಮತವೂ ಪಟ್ಟಿಗೆ ಸೇರ್ಪಡೆ ಆಗಬಾರದು, ಅರ್ಹರಿದ್ದವರು ಒಂದು ಹೆಸರೂ ಬಿಟ್ಟುಹೋಗದಂತೆ ಕಾಯಬೇಕು. ಕರ್ನಾಟಕದಲ್ಲಿ ಚುನಾವಣೆ 2028ಕ್ಕಿದೆ ಎಂದು ಸುಮ್ಮನಿರುವಂತಿಲ್ಲ. ಇದೇ ನಮ್ಮೆದುರಿಗಿರುವ ಚುನಾವಣೆ. ಎಸ್‌ಐಆರ್ ಗೆದ್ದರೆ ಚುನಾವಣೆ ಗೆದ್ದಂತೆ ಎಂದು ಸಭೆಯಲ್ಲಿದ್ದವರಿಗೆ ಪ್ರಮುಖರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಗುಂಪು ಎಸ್‌ಐಆರ್ ವಿರುದ್ಧ ಇಂದು "ದೋಸ್ತಿ' ದೂರು:
ಬೆಂಗಳೂರು: ಎಸ್‌ಐಆರ್ ಕುರಿತು ಪ್ರತ್ಯೇಕ ದೂರುಗಳನ್ನು ಸಲ್ಲಿಸುತ್ತಿದ್ದ ಬಿಜೆಪಿ ಹಾಗೂ ಜೆಡಿಎಸ್, ಇದೀಗ ಒಟ್ಟಾಗಿ ಕಾರ್ಯಾಚರಣೆಗಿಳಿದಿವೆ. ಹೀಗಾಗಿ ಸೋಮವಾರ ಮುಖ್ಯಚುನಾವಣಾಧಿಕಾರಿಗೆ ಜಂಟಿಯಾಗಿ ದೂರು ನೀಡಲು ಮುಂದಾಗಿವೆ. ಕಲ್ಯಾಣ ಮಂಟಪ, ಶಾದಿ ಮಹಲ್, ಸಮುದಾಯ ಭವನಗಳಲ್ಲಿ ಗುಂಪುಗಳಲ್ಲಿ ಎಸ್‌ಐಆರ್ ನಡೆಸಲಾಗುತ್ತಿದೆ. ಮುಖ್ಯ ಚುನಾವಣಾಧಿಕಾರಿ ಹೇಳಿದ್ದಕ್ಕೂ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ. ಅನೇಕ ಜಿಲ್ಲೆಗಳಲ್ಲಿ ಏಕಪಕ್ಷೀಯ ಧೋರಣೆಯ ಅಧಿಕಾರಿಗಳ ಪಟ್ಟಿ ಮಾಡಲಾಗಿದೆ. ಅವರನ್ನು ಬೇರೆಡೆಗೆ ವರ್ಗಾಯಿಸಬೇಕು ಹಾಗೂ ಸಾಧ್ಯವಾದಷ್ಟೂ ಸ್ಥಾನಗಳಿಗೆ ಹೊರರಾಜ್ಯಗಳ ಅಧಿಕಾರಿಗಳನ್ನು ನೇಮಿಸಬೇಕು ಎಂದು ಮನವಿ ಮಾಡಲು ನಿರ್ಧರಿಸಲಾಗಿದೆ. ದೂರು ನೀಡುವ ವೇಳೆ ರಾಜ್ಯ ಪದಾಧಿಕಾರಿಗಳ ಜತೆಗೆ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಸಹ ಉಪಸ್ಥಿತರಿರಲಿದ್ದಾರೆ ಎಂದು ಮೂಲಗಳು ಹೇಳಿವೆ.

