ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ರಾಜ್ಯ ಸರಕಾರ ವಿರೋಧಿಯಲ್ಲ. ಆದರೆ, ಈ ಸಂಬಂಧ ಕಾಂಗ್ರೆಸ್ ಪಕ್ಷ ಎತ್ತಿರುವ ಆಕ್ಷೇಪಗಳಿಗೆ ಚುನಾವಣಾ ಆಯೋಗ ಮೊದಲು ಸ್ಪಷ್ಟನೆ ನೀಡಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಮಂಗಳವಾರದಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಸೋಮವಾರ( ಜೂನ್ 29) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ಮುನ್ನ "ತಾರ್ಕಿಕ ವೈರುಧ್ಯ", ಕಾನೂನು ನೋಟಿಸ್ ಜಾರಿ, ಕಾರಣಸಹಿತ ಆದೇಶ ಹಾಗೂ ನ್ಯಾಯಮಂಡಳಿಯನ್ನು ಸಂಪರ್ಕಿಸಲು ಅವಕಾಶ ನೀಡುವ ಕುರಿತು ಸ್ಪಷ್ಟನೆ ಕೋರಿ ರಾಜ್ಯ ಸಚಿವ ಸಂಪುಟ ಮುಖ್ಯ ಚುನಾವಣಾ ಆಯುಕ್ತರಿಗೆ ಎಂಟು ಆಕ್ಷೇಪಣೆಗಳನ್ನು ಸಲ್ಲಿಸಿದೆ' ಎಂದು ತಿಳಿಸಿದರು.
"ಎಸ್‌ಐಆರ್ ನಡೆಸಬಾರದು ಎಂದು ನಾವು ಹೇಳುತ್ತಿಲ್ಲ. ಮತದಾರರ ಪಟ್ಟಿಯ ಪರಿಷ್ಕರಣೆ ಕಡ್ಡಾಯವಾಗಿದ್ದು, ಅದು ಚುನಾವಣಾ ಆಯೋಗದ ಹಕ್ಕು ಮಾತ್ರವಲ್ಲ, ಜವಾಬ್ದಾರಿಯೂ ಹೌದು. ಶುದ್ಧ ಮತ್ತು ನಿಖರ ಮತದಾರರ ಪಟ್ಟಿಯನ್ನು ಒದಗಿಸುವುದು ಆಯೋಗದ ಕರ್ತವ್ಯ" ಎಂದು ಹೇಳಿದರು.
ಈ ಸಂಬಂಧ ಕಾಂಗ್ರೆಸ್ ಪಕ್ಷ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೂ ತನ್ನ ಆಕ್ಷೇಪಣೆಗಳನ್ನು ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಕೇವಲ ಕಾಗುಣಿತದ ತಪ್ಪಿನ ಕಾರಣಕ್ಕೆ ಯಾರೊಬ್ಬರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ, ಪರಿಷ್ಕರಣೆ ಪ್ರಕ್ರಿಯೆ ಆರಂಭಿಸುವ ಮೊದಲು ಚುನಾವಣಾ ಆಯೋಗ ಪಕ್ಷದ ಕಳವಳಗಳಿಗೆ ಉತ್ತರಿಸಬೇಕು' ಎಂದು ಒತ್ತಾಯಿಸಿದರು.
ಈ ವಿಷಯದಲ್ಲಿ ಕಾಂಗ್ರೆಸ್ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಮುಂದುವರಿಸಲಿದ್ದು, ಕಾನೂನು ಹೋರಾಟದ ಆಯ್ಕೆಗಳನ್ನೂ ಪರಿಶೀಲಿಸಲಾಗುತ್ತಿದೆ. ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆ ಮಾಡಲಾಗುತ್ತಿದೆ ಎಂಬ ವರದಿಗಳನ್ನು ಉಲ್ಲೇಖಿಸಿ, ಬಳಸಲಾಗುತ್ತಿರುವ ತಂತ್ರಾಂಶವನ್ನು ಯಾರು ಪರಿಶೀಲಿಸಿದ್ದಾರೆ ಹಾಗೂ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದರು.
ಇತರ ರಾಜ್ಯಗಳಲ್ಲಿ ಸುಮಾರು 89 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿ, ಹೆಸರು ಅಳಿಸುವ ಮೊದಲು ಸಂಬಂಧಪಟ್ಟ ಮತದಾರರಿಗೆ ನ್ಯಾಯಮಂಡಳಿಯನ್ನು ಸಂಪರ್ಕಿಸಲು ಅವಕಾಶ ನೀಡಲಾಗಿಲ್ಲ ಎಂದು ದೂರಿದರು.
ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕಾಗಿ ಭೂಸ್ವಾಧೀನ ಕುರಿತ ಪ್ರಶ್ನೆಗೆ ಉತ್ತರಿಸಿ, ರೈತರನ್ನು ಯಾವುದೇ ಕಾರಣಕ್ಕೂ ಜಮೀನು ಮಾರಾಟಕ್ಕೆ ಒತ್ತಾಯಿಸುವುದಿಲ್ಲ. ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡಲೇಬೇಕು ಎಂದು ಯಾರೂ ಒತ್ತಾಯಿಸಲು ಸಾಧ್ಯವಿಲ್ಲ. ನಾವು ಹಿಂದೆ ಅಂತಹ ಪ್ರಯತ್ನ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಭೂ ಮಾಲೀಕರ ಒಪ್ಪಿಗೆ ಹಾಗೂ ಕಾನೂನು ಪ್ರಕಾರವೇ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ" ಎಂದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಈ ಪ್ರದೇಶದ ಅಭಿವೃದ್ಧಿಗೆ 5,000 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಹಿಂದಿನ ಬಿಜೆಪಿ ಸರಕಾರ ಇದೇ ರೀತಿಯ ಹೂಡಿಕೆಯನ್ನು ಮಾಡಿಲ್ಲ ಎಂದು ಆರೋಪಿಸಿದರು.
ಇನ್ನು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಬದಲಿಗೆ ಕೇಂದ್ರ ಸರಕಾರ "ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)" ಜಾರಿಗೆ ತರಲು ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿ, ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆ ಯೋಜನೆಯ ಶೇ.40 ಆರ್ಥಿಕ ಹೊರೆ ರಾಜ್ಯಗಳ ಮೇಲೆ ಹೊರಿಸುವುದು ಅಸಂವಿಧಾನಿಕ ಕ್ರಮ ಎಂದು ಆರೋಪಿಸಿದರು.
ಈ ಸಂಬಂಧ ಕರ್ನಾಟಕ ಸರ್ಕಾರ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

