Dailyhunt Logo
  • Light mode
    Follow system
    Dark mode
    • Play Story
    • App Story
ಎಸ್‌ಯುವಿ-ಕಾರು ಡಿಕ್ಕಿ; ಒಂದೇ ಕುಟುಂಬದ ನಾಲ್ವರ ಸಾವು; CCTVಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಎಸ್‌ಯುವಿ-ಕಾರು ಡಿಕ್ಕಿ; ಒಂದೇ ಕುಟುಂಬದ ನಾಲ್ವರ ಸಾವು; CCTVಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಹಾರನ್‌ಪುರ: ಉತ್ತರ ಪ್ರದೇಶದ ಸಹಾರನ್‌ಪುರ ಸಮೀಪದ ಹೆದ್ದಾರಿಯಲ್ಲಿ ವೇಗವಾಗಿ ಬಂದ ಎಸ್‌ಯುವಿ(ಸ್ಕಾರ್ಪಿಯೋ) ವಾಹನವೊಂದು ಕಾರಿಗೆ ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಡೆಹ್ರಾಡೂನ್-ಪಂಚಕುಲ ಹೆದ್ದಾರಿಯ ರಾಂಪುರ ಮಣಿಹರನ್ ಪೊಲೀಸ್ ಠಾಣಾ ವ್ಯಾಪ್ತಿಯ ಹಲ್ಗೋಯಾ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ಹರಿಯಾಣದ ಸೋನಿಪತ್ ಜಿಲ್ಲೆಯ ಬಹದ್ದೂರ್‌ಗಢ ನಿವಾಸಿಗಳಾದ ಈ ಕುಟುಂಬದ ಸದಸ್ಯರು ಟಾಟಾ ಟಿಯಾಗೋ ಕಾರಿನಲ್ಲಿ ಹರಿದ್ವಾರಕ್ಕೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಹೆದ್ದಾರಿಯಲ್ಲಿ ಕಾರನ್ನು ರಿವರ್ಸ್ (ಹಿಂದಕ್ಕೆ) ತೆಗೆಯಲು ಯತ್ನಿಸುತ್ತಿದ್ದಾಗ, ಹಿಂಬದಿಯಿಂದ ಅತಿ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ನಿಯಂತ್ರಣ ತಪ್ಪಿ ಟಾಟಾ ಟಿಯಾಗೋ ಕಾರಿನ ಹಿಂಭಾಗಕ್ಕೆ ಬಲವಾಗಿ ಗುದ್ದಿದೆ. ಡಿಕ್ಕಿಯ ತೀವ್ರತೆಗೆ ಕಾರು ರಸ್ತೆಯ ಪಕ್ಕದಲ್ಲಿದ್ದ ಡಿವೈಡರ್‌ಗೆ ಅಪ್ಪಳಿಸಿ, ಅಲ್ಲಿಂದ ಚಿಮ್ಮಿ ರಸ್ತೆಯ ಮತ್ತೊಂದು ಬದಿಯ ಡಿವೈಡರ್‌ಗೆ ಹೋಗಿ ಬಡಿದು ಸಂಪೂರ್ಣ ನುಜ್ಜುಗುಜ್ಜಾಗಿದೆ.. ಇತ್ತ ಡಿಕ್ಕಿ ಹೊಡೆದ ಸ್ಕಾರ್ಪಿಯೋ ಕಾರು ಸಹ ರಸ್ತೆಯಲ್ಲೇ ಪಲ್ಟಿಯಾಗಿದೆ. ಈ ಇಡೀ ಭೀಕರ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಪಘಾತದಲ್ಲಿ ಚರಣ್ ಸಿಂಗ್, ಅವರ ಪತ್ನಿ ಸುದೇಶ್, ಸೊಸೆ ಪ್ರೀತಿ ಮತ್ತು ಮೊಮ್ಮಗ ಶಿವಾಂಶ್ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಗಾಯಗೊಂಡಿರುವ ಪ್ರವೀಣ್, ಸಹದೇವ್ ಸೇರಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು 108 ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ನಾಲ್ವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಅತಿ ವೇಗ ಮತ್ತು ಬೇಜವಾಬ್ದಾರಿಯ ಚಾಲನೆಯೇ ಈ ಘಟನೆಗೆ ಪ್ರಾಥಮಿಕ ಕಾರಣ ಎಂದು ತಿಳಿದುಬಂದಿದೆ. ಪೊಲೀಸರು ಎರಡೂ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಸ್ಕಾರ್ಪಿಯೋ ಕಾರಿನ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಂಡು ತನಿಖೆ ತೀವ್ರಗೊಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani