ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಎಥನಾಲ್ ಮಿಶ್ರಿತ ಪೆಟ್ರೋಲ್ ಅನ್ನು (ಇ20) ಶೇ.53ರಷ್ಟು ಮಂದಿ ನಿಷ್ಪ್ರಯೋಜಕ ಎಂದು ಕರೆದಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಮಧ್ಯೆಯೇ ಲೋಕಲ್ ಸರ್ಕಸ್ ಸಂಸ್ಥೆಯು ಸಮೀಕ್ಷೆಯನ್ನು ನಡೆಸಿದೆ.
316 ಜಿಲ್ಲೆಗಳ 22,567 ಪೆಟ್ರೋಲ್ ವಾಹನ ಮಾಲಿಕ ಬಳಿ ಮಾಹಿತಿ ಪಡೆದುಕೊಂಡಿದ್ದು, ಶೇ.42 ರಷ್ಟು ಜನರು ಈ ಯೋಜನೆಯನ್ನು ದುರಂತ ಎಂದು ಬಣ್ಣಿಸಿದ್ದರೆ, ಕೇವಲ ಶೇ.13 ರಷ್ಟು ಜನರು ಮಾತ್ರ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
2023ಕ್ಕಿಂತ ಮೊದಲು ತಯಾರಾದ ಪೆಟ್ರೋಲ್ ವಾಹನಗಳನ್ನು ಹೊಂದಿರುವ ಶೇ.66ರಷ್ಟು ಮಾಲಿಕರು, ಇ20 ಪೆಟ್ರೋಲ್ ಬಳಕೆಯಿಂದ ತಮ್ಮ ವಾಹನಗಳ ಮೈಲೇಜ್‌ನಲ್ಲಿ ಶೇ.10ಕ್ಕಿಂತ ಹೆಚ್ಚು ಕುಸಿತ ಕಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಶೇ.45ರಷ್ಟು ಜನರು ತಮ್ಮ ವಾಹನಗಳ ಎಂಜಿನ್ ಸವಕಳಿ ಅಥವಾ ರಿಪೇರಿ ವೆಚ್ಚದಲ್ಲಿ ಸಾಧಾರಣದಿಂದ ಗಮನಾರ್ಹ ಮಟ್ಟದ ಏರಿಕೆಯಾಗಿದೆ ಎಂದು ವರದಿ ಮಾಡಿದ್ದಾರೆ.
ಸುಮಾರು ಶೇ.31ರಷ್ಟು ಜನರು ಹಳೆಯ ಇ0 ಅಥವಾ ಇ10 ಪೆಟ್ರೋಲ್ ಖರೀದಿಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಎಂಜಿನ್ ಹಾಳಾಗಿಲ್ಲ: ಕೇಂದ್ರ ಸ್ಪಷ್ಟನೆ
ಈ ಆರೋಪಗಳಿಗೆ ಉತ್ತರ ನೀಡಿರುವ ಕೇಂದ್ರ ಇಂಧನ ಇಲಾಖೆ, ಭಾರತೀಯ ಆಟೋಮೋಟಿವ್ ಸಂಶೋಧನಾ ಸಂಸ್ಥೆ (ಎಆರ್‌ಎಐ) ನಡೆಸಿದ ಪ್ರಯೋಗಗಳಲ್ಲಿ 2023ಕ್ಕೂ ಹಿಂದಿನ ಕಾರುಗಳನ್ನು ಇ20 ಇಂಧನ ಹಾಕಿ 1 ಲಕ್ಷ ಕಿ.ಮೀ. ಓಡಿಸಿದರೂ ಅವುಗಳ ಎಂಜಿನ್‌ಗಳು ಹಾಳಾಗಿಲ್ಲ. ವಾಹನದ ವಯಸ್ಸಿನ ಆಧಾರದಲ್ಲಿ ಮೈಲೇಜ್ ಶೇ. 1ರಿಂದ 6ರಷ್ಟು ಇಳಿಕೆಯಾಗಬಹುದಷ್ಟೇ. ಹಾಗೊಮ್ಮೆ ಇ20ಯಿಂದ ಧಕ್ಕೆಯಾಗಿರುವ ಅನುಮಾನವಿದ್ದರೂ ವಾಹನ ವಿಮೆ ಕ್ಲೈಮು ಮಾಡಬಹುದು ಎಂದಿದೆ.

