Dailyhunt Logo
  • Light mode
    Follow system
    Dark mode
    • Play Story
    • App Story
FIFA World Cup 2026: ಕೇಪ್ ವರ್ದೆ ವಿರುದ್ಧ ಅರ್ಜೆಂಟೀನಾಗೆ ಜಯ

FIFA World Cup 2026: ಕೇಪ್ ವರ್ದೆ ವಿರುದ್ಧ ಅರ್ಜೆಂಟೀನಾಗೆ ಜಯ

ಮಿಯಾಮಿ: ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು 2026ರ ಫಿಫಾ ವಿಶ್ವಕಪ್‌ನ ಅತ್ಯಂತ ರೋಮಾಂಚಕ ಪಂದ್ಯದಲ್ಲಿ ಕೊನೆಗೂ ನಿಟ್ಟುಸಿರು ಬಿಟ್ಟಿದೆ. ಸಣಕಲು ಸವಾಲು ಎನಿಸಿದ್ದ ಕೇಪ್ ವರ್ದೆ ವಿರುದ್ಧ 3-2 ಗೋಲುಗಳ ಅಂತರದಿಂದ ಪ್ರಯಾಸದ ಜಯ ಸಾಧಿಸಿದ ಲಿಯೋನೆಲ್ ಮೆಸ್ಸಿ ಪಡೆ, ಪ್ರೀ-ಕ್ವಾರ್ಟರ್‌ಫೈನಲ್ (ಅಂತಿಮ 16ರ ಘಟ್ಟ) ತಲುಪಿದೆ.

ಆದರೆ, ಇಡೀ ಪಂದ್ಯದಲ್ಲಿ ವಿಶ್ವಕಪ್‌ನ ಅಂಡರ್‌ಡಾಗ್ ಕೇಪ್ ವರ್ದೆ ತೋರಿದ ಅಪ್ರತಿಮ ಹೋರಾಟ ಜಗತ್ತಿನಾದ್ಯಂತ ಫುಟ್‌ಬಾಲ್ ಪ್ರೇಮಿಗಳ ಹೃದಯ ಗೆದ್ದಿದೆ.

ಪಂದ್ಯದ ಆರಂಭದಲ್ಲಿ ಅರ್ಜೆಂಟೀನಾ ಸುಲಭವಾಗಿ ಗೆಲ್ಲಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅದ್ಭುತ ಗೋಲು ಬಾರಿಸಿ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದು ವಿಶ್ವಕಪ್ ಇತಿಹಾಸದಲ್ಲಿ ಮೆಸ್ಸಿ ಅವರ ದಾಖಲೆಯ 20ನೇ ಗೋಲು ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಆದರೆ, ಈ ಆರಂಭಿಕ ಆಘಾತಕ್ಕೆ ಎದೆಗುಂದದ ಕೇಪ್ ವರ್ದೆ ತಂಡ ದ್ವಿತೀಯಾರ್ಧದಲ್ಲಿ ತಿರುಗಿಬಿದ್ದಿತು. ತಂಡದ ಡೆರಾಯ್ ಡುವಾರ್ಟೆ(Deroy Duarte) ಭರ್ಜರಿ ಗೋಲು ದಾಖಲಿಸಿ ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು. ನಿರ್ಧಾರಿತ ಅವಧಿಯಲ್ಲಿ ಉಭಯ ತಂಡಗಳು ಮತ್ತೊಂದು ಗೋಲು ಗಳಿಸಲು ವಿಫಲವಾದ ಹಿನ್ನೆಲೆಯಲ್ಲಿ ಪಂದ್ಯವನ್ನು ಎಕ್ಸ್‌ಟ್ರಾ ಟೈಮ್‌ಗೆ ವಿಸ್ತರಿಸಲಾಯಿತು.
 ಎಕ್ಸ್‌ಟ್ರಾ ಟೈಮ್‌ನ ಆರಂಭದಲ್ಲೇ ಅರ್ಜೆಂಟೀನಾದ ಲಿಸಾಂಡ್ರೊ ಮಾರ್ಟಿನೆಜ್(Lisandro Martinez) ಗೋಲು ಹೊಡೆದು ತಂಡಕ್ಕೆ 2-1 ರ ಮುನ್ನಡೆ ತಂದುಕೊಟ್ಟಾಗ ಹಾಲಿ ಚಾಂಪಿಯನ್ನರ ಗೆಲುವು ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪಂದ್ಯ ಮುಗಿಯಲು ಕೆಲವೇ ನಿಮಿಷಗಳು ಬಾಕಿ ಇರುವಾಗ ಕೇಪ್ ವರ್ದೆಯ ಸಿಡ್ನಿ ಲೋಪ್ಸ್ ಕಬ್ರಾಲ್(Sidny Lopes Cabral) ಅಸಾಧ್ಯವಾದ ದೂರದ ವ್ಯಾಪ್ತಿಯಿಂದ (ಲಾಂಗ್ ರೇಂಜ್) ಮನಮೋಹಕ ಗೋಲು ಬಾರಿಸಿ ಇಡೀ ಕ್ರೀಡಾಂಗಣವೇ ಸ್ತಬ್ಧವಾಗುವಂತೆ ಮಾಡಿದರು. ಈ ಮೂಲಕ ಪಂದ್ಯ ಮತ್ತೆ 2-2 ರ ರೋಮಾಂಚಕ ಸಮಬಲಕ್ಕೆ ಸಾಕ್ಷಿಯಾಯಿತು.
 ಪಂದ್ಯ ಪೆನಾಲ್ಟಿ ಶೂಟೌಟ್ ಕಡೆಗೆ ಸಾಗುತ್ತಿದ್ದಾಗ, ಅರ್ಜೆಂಟೀನಾಕ್ಕೆ ಲಭಿಸಿದ ಕಾರ್ನರ್ ಕಿಕ್ ಪಂದ್ಯದ ಹಣೆಬರಹವನ್ನೇ ಬದಲಿಸಿತು. ಚೆಂಡನ್ನು ತಡೆಯುವ ಗಡಿಬಿಡಿಯಲ್ಲಿ ಕೇಪ್ ವರ್ದೆಯ ಡಿನಿ ಬೋರ್ಜ್(Diney Borge) ಅವರು ಸ್ವಯಂ ಗೋಲು (ಓನ್ ಗೋಲ್) ಬಾರಿಸುವ ದುರಂತಕ್ಕೆ ಈಡಾದರು. ಇದರಿಂದಾಗಿ ಅರ್ಜೆಂಟೀನಾ 3-2 ರ ಮುನ್ನಡೆ ಸಾಧಿಸಿತು. ಪಂದ್ಯದ ಕೊನೆಯ ಸೆಕೆಂಡ್‌ವರೆಗೂ ಕೇಪ್ ವರ್ದೆ ಆಟಗಾರರು ಗೋಲಿಗಾಗಿ ಸತತ ದಾಳಿ ನಡೆಸಿ ಅರ್ಜೆಂಟೀನಾ ರಕ್ಷಣಾ ಕೋಟೆಯನ್ನು ಪರೀಕ್ಷಿಸಿದರಾದರೂ, ಪೆನಾಲ್ಟಿಗೆ ಪಂದ್ಯವನ್ನು ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
 ಅರ್ಜೆಂಟೀನಾ ತಂಡ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಕೇಪ್ ವರ್ದೆ ತಂಡದ ಉತ್ತಮ ಪ್ರದರ್ಶನಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ವಿಶ್ವಕಪ್‌ಗೆ ಹೊಸದಾಗಿ ಪಾದಾರ್ಪಣೆ ಮಾಡಿದ್ದರೂ, ವಿಶ್ವದ ನಂಬರ್ ಒನ್ ತಂಡಕ್ಕೆ ಬೆವರಿಳಿಸಿದ ಈ ಸಾಹಸ ಕ್ರೀಡಾಲೋಕದಲ್ಲಿ ದೀರ್ಘಕಾಲ ನೆನಪಿನಲ್ಲಿ ಉಳಿಯುವಂತದ್ದಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani