ವ್ಯಾಂಕೋವರ್ (ಕೆನಡಾ): ಇಲ್ಲಿನ ಮೈದಾನದಲ್ಲಿ ಶುಕ್ರವಾರ ನಡೆದ ಫಿಫಾ ವಿಶ್ವಕಪ್‌ನ ರೋಚಕ ರೌಂಡ್ ಆಫ್ 32 ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ತಂಡವು ಅಲ್ಜೀರಿಯಾ ವಿರುದ್ಧ 2-0 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸ್ವಿಟ್ಜರ್ಲೆಂಡ್ ಟೂರ್ನಿಯ ಪ್ರಮುಖ ಘಟ್ಟವಾದ ರೌಂಡ್ ಆಫ್ 16 (ನಾಕೌಟ್) ಹಂತಕ್ಕೆ ಲಗ್ಗೆ ಇಟ್ಟಿದೆ.
ಪಂದ್ಯದ ಆರಂಭದಿಂದಲೂ ಸ್ವಿಟ್ಜರ್ಲೆಂಡ್ ಆಟಗಾರರು ಮೈದಾನದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದರು. ಪಂದ್ಯದ ಮೊದಲಾರ್ಧದಲ್ಲಿ ತಂಡದ ಸ್ಟ್ರೈಕರ್ ಬ್ರೀಲ್ ಎಂಬೊಲೊ( Breel Embolo ) ಆಕರ್ಷಕ ಗೋಲು ಹೊಡೆಯುವ ಮೂಲಕ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಇನ್ನು ದ್ವಿತೀಯಾರ್ಧದಲ್ಲೂ ಅಲ್ಜೀರಿಯಾ ತಂಡಕ್ಕೆ ಯಾವುದೇ ಚೇತರಿಕೆ ನೀಡದ ಸ್ವಿಟ್ಜರ್ಲೆಂಡ್ ಪರ ಡಾನ್ ಎನ್ಡೋಯ್(Dan Ndoye ) ಮತ್ತೊಂದು ಆಕರ್ಷಕ ಗೋಲು ಬಾರಿಸಿ ಜಯದ ಅಂತರವನ್ನು ಹೆಚ್ಚಿಸಿದರು. ಸ್ವಿಟ್ಜರ್ಲೆಂಡ್‌ನ ಬಲಿಷ್ಠ ರಕ್ಷಣಾತ್ಮಕ ಆಟದ ಮುಂದೆ ಅಲ್ಜೀರಿಯಾ ಆಟಗಾರರು ಒಂದೂ ಗೋಲು ಗಳಿಸಲು ಸಾಧ್ಯವಾಗದೆ ತೀವ್ರ ನಿರಾಶೆ ಅನುಭವಿಸಿದರು.
ಮುಂದಿನ ರೌಂಡ್ ಆಫ್ 16 ಹಂತದ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ತಂಡವು ಕೊಲಂಬಿಯಾ ಅಥವಾ ಘಾನಾ ತಂಡಗಳ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದೆ. ಇದೇ ದಿನ ನಡೆದ ಇತರ ಪಂದ್ಯಗಳಲ್ಲಿ ಬಲಿಷ್ಠ ಸ್ಪೇನ್ ತಂಡವು ಆಸ್ಟ್ರಿಯಾವನ್ನು 3-0 ಅಂತರದಿಂದ ಹಾಗೂ ಪೋರ್ಚುಗಲ್ ತಂಡವು ಕ್ರೊವೇಶಿಯವನ್ನು 2-1 ಅಂತರದಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದಿವೆ.
ಮುಂದಿನ ಹೈವೋಲ್ಟೇಜ್ ನಾಕೌಟ್ ಪಂದ್ಯದಲ್ಲಿ ಸ್ಪೇನ್ ಹಾಗೂ ಪೋರ್ಚುಗಲ್ ತಂಡಗಳು ಮುಖಾಮುಖಿಯಾಗಲಿವೆ.

