Dailyhunt Logo
  • Light mode
    Follow system
    Dark mode
    • Play Story
    • App Story
Geriatrics: ವೃದ್ಧಾಪ್ಯ ವೈದ್ಯಶಾಸ್ತ್ರ (ಜೆರಿಯಾಟ್ರಿಕ್‌ ಮೆಡಿಸಿನ್‌) ಎಂದರೆ ಏನು ?

Geriatrics: ವೃದ್ಧಾಪ್ಯ ವೈದ್ಯಶಾಸ್ತ್ರ (ಜೆರಿಯಾಟ್ರಿಕ್‌ ಮೆಡಿಸಿನ್‌) ಎಂದರೆ ಏನು ?

ವೃದ್ಧಾಪ್ಯ ವೈದ್ಯಶಾಸ್ತ್ರ (ಜೆರಿಯಾಟ್ರಿಕ್‌ ಮೆಡಿಸಿನ್‌ - Geriatric Medicine) ಎನ್ನುವುದು ಹಿರಿಯ ನಾಗರಿಕರ ಆರೋಗ್ಯ, ದೇಹದ ಕಾರ್ಯಕ್ಷಮತೆ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಗಮನ ಹರಿಸುವ ವೈದ್ಯಕೀಯ ವಿಜ್ಞಾನದ ವಿಶೇಷ ವಿಭಾಗವಾಗಿದೆ. ಇದನ್ನು ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರಿಗೆ ಸಂಬಂಧಿಸಿದ್ದು ಎಂದು ಭಾವಿಸಲಾಗುತ್ತದೆ.

ಆದರೆ ಕೇವಲ ವಯಸ್ಸಿಗಿಂತ ಹೆಚ್ಚಾಗಿ ವ್ಯಕ್ತಿಯ ದೈಹಿಕ ವಯಸ್ಸು (Physiological age), ದೌರ್ಬಲ್ಯ ಮತ್ತು ಶಾರೀರಿಕ ಸಂಕೀರ್ಣತೆಗಳನ್ನು ಆಧರಿಸಿ ಇದು ನಿರ್ಧಾರವಾಗುತ್ತದೆ.

ವಯಸ್ಸಾಗುವುದು ಪ್ರತಿಯೊಬ್ಬರಲ್ಲೂ ನಡೆಯುವ ಒಂದು ನಿರಂತರ ಮತ್ತು ವಿಶಿಷ್ಟ ಪ್ರಕ್ರಿಯೆಯಾಗಿದೆ. ಸರಿಯಾದ ಯೋಜನೆಯೊಂದಿಗೆ ಸಾಗಿದರೆ ವೃದ್ಧಾಪ್ಯದ ಹಾದಿ ಸುಗಮವಾಗುತ್ತದೆ. ಹಿರಿಯರು ತಮ್ಮ ಆರೋಗ್ಯ, ಸ್ವಾತಂತ್ರ್ಯ ಮತ್ತು ಜೀವನದ ಗುಣಮಟ್ಟವನ್ನು ಕೊನೆಯವರೆಗೂ ಕಾಯ್ದುಕೊಳ್ಳಲು ʼಜೆರಿಯಾಟ್ರಿಶಿಯನ್‌' (ವೃದ್ಧಾಪ್ಯ ವೈದ್ಯಕೀಯ ತಜ್ಞರು) ಮಾರ್ಗದರ್ಶನ ನೀಡುತ್ತಾರೆ.

ಜನರು ʼಜೆರಿಯಾಟ್ರಿಕ್‌ ಮೆಡಿಸಿನ್‌' ಎಂದರೆ ಕೇವಲ ತೀವ್ರ ಅಸ್ವಸ್ಥರಾದ ಅಥವಾ ಹಾಸಿಗೆ ಹಿಡಿದ ವೃದ್ಧರಿಗೆ ಮಾತ್ರ ನೀಡುವ ಚಿಕಿತ್ಸೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಈ ವಿಭಾಗದ ನೈಜ ಉದ್ದೇಶ ಮತ್ತು ವ್ಯಾಪ್ತಿ ಅದಕ್ಕಿಂತ ವಿಶಾಲವಾಗಿದೆ.

ಹಿರಿಯರಿಗೆ ಪ್ರತ್ಯೇಕ ವೈದ್ಯಕೀಯ ವಿಭಾಗದ ಅಗತ್ಯವಿದೆಯೇ?

ಮಕ್ಕಳಿಗೆ ʼಪೀಡಿಯಾಟ್ರಿಶಿಯನ್‌' (ಮಕ್ಕಳ ತಜ್ಞರು) ಏಕೆ ಬೇಕು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಮಕ್ಕಳು ಕೇವಲ ಚಿಕ್ಕ ವಯಸ್ಸಿನ ವ್ಯಕ್ತಿಗಳಷ್ಟೇ ಅಲ್ಲ; ಅವರ ದೇಹ ಬೆಳೆಯುತ್ತಿರುತ್ತದೆ ಮತ್ತು ಅವರ ಅಗತ್ಯಗಳೇ ಬೇರೆಯಾಗಿರುತ್ತವೆ. ವೃದ್ಧಾಪ್ಯದಲ್ಲೂ ಇದೇ ನಿಯಮ ಅನ್ವಯಿಸುತ್ತದೆ!

ಹಿರಿಯರು ಎಂದರೆ ಕೇವಲ ವಯಸ್ಸಾದ ಯುವಕರು ಅಲ್ಲ. ವಯಸ್ಸಾದಂತೆ ದೇಹದ ಪ್ರತಿಯೊಂದು ಅಂಗದಲ್ಲೂ ನಿಧಾನವಾಗಿ ಬದಲಾವಣೆಗಳು ಉಂಟಾಗುತ್ತವೆ. ಇವು ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ರೀತಿ, ಔಷಧಗಳು ಕೆಲಸ ಮಾಡುವ ವಿಧಾನ ಮತ್ತು ಕಾಯಿಲೆಯಿಂದ ಗುಣಮುಖರಾಗುವ ವೇಗದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಹಿರಿಯರಿಗೆ ಅವರ ವಯಸ್ಸಿನ ಘನತೆಗೆ ತಕ್ಕಂತೆ ವಿಶೇಷ ಆರೈಕೆಯ ಅಗತ್ಯವಿರುತ್ತದೆ.

ಹಿರಿಯರಲ್ಲಿ ಕಂಡುಬರುವ ಮುಖ್ಯ ದೈಹಿಕ ವ್ಯತ್ಯಾಸಗಳು

1. ದೈಹಿಕ ಸಶಕ್ತತೆಯ ಕೊರತೆ: ವಯಸ್ಸಾದಂತೆ ದೇಹವು ಒತ್ತಡ ಮತ್ತು ಅನಾರೋಗ್ಯವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತದೆ.

ಯುವಕರು ಕಾಯಿಲೆಯಿಂದ ಬೇಗ ಗುಣಮುಖರಾಗುತ್ತಾರೆ.

ಆದರೆ ಹಿರಿಯರಲ್ಲಿ ಸಣ್ಣ ಮೂತ್ರಾಂಗ ಸೋಂಕು, ಹೊಸ ಔಷಧ ಅಥವಾ ಕೆಲವು ದಿನಗಳ ಹಾಸಿಗೆ ವಿಶ್ರಾಂತಿಯೂ ಕೂಡ ತೀವ್ರ ಗೊಂದಲ, ಬೀಳುವುದು, ನಡೆಯಲು ಸಾಧ್ಯವಾಗದಿರುವುದು ಅಥವಾ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಯನ್ನು ತರಬಹುದು.

2. ವಿಭಿನ್ನ ರೋಗಲಕ್ಷಣಗಳು: ಕಾಯಿಲೆಗಳು ಪುಸ್ತಕದಲ್ಲಿ ವಿವರಿಸಿದಂತೆ ಕಾಣಿಸಿಕೊಳ್ಳುವುದಿಲ್ಲ. ಉದಾಹರಣೆಗೆ: ಯುವಕರಲ್ಲಿ ಮೂತ್ರಾಂಗ ಸೋಂಕು ಆದರೆ ಉರಿ ಮತ್ತು ತುರ್ತು ಮೂತ್ರ ವಿಸರ್ಜನೆ ಕಾಣಿಸುತ್ತದೆ. ಆದರೆ ಹಿರಿಯರಲ್ಲಿ ಯಾವುದೇ ಉರಿ ಅಥವಾ ಜ್ವರವಿಲ್ಲದೆ, ಹಠಾತ್‌ ಗೊಂದಲದ ವಾತಾವರಣ ಕಾಣಿಸಿಕೊಳ್ಳಬಹುದು.

ಅದೇ ರೀತಿ, ಹಿರಿಯರಲ್ಲಿ ಹೃದಯಾಘಾತ ಸಂಭವಿಸಿದಾಗ ಎದೆನೋವು ಕಾಣಿಸಿಕೊಳ್ಳದೆ ಇರಬಹುದು. ಇದರಿಂದಾಗಿ ರೋಗನಿರ್ಣಯ ತಡವಾಗುವ ಅಥವಾ ತಪ್ಪಿಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

3. ನಿಧಾನಗತಿಯ ಚೇತರಿಸಿಕೊಳ್ಳುವಿಕೆ: ರೋಗ ಗುಣವಾದ ಅನಂತರವೂ ಸ್ನಾಯುಗಳ ದೌರ್ಬಲ್ಯ ಮತ್ತು ಕ್ರಿಯಾಶೀಲತೆಯ ಕೊರತೆಯಿಂದಾಗಿ ಹಿರಿಯರು ತಮ್ಮ ಹಳೆಯ ಆರೋಗ್ಯ ಸ್ಥಿತಿಗೆ ಮರಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ.

ಹಿರಿಯರು ಎದುರಿಸುವ ಪ್ರಮುಖ ಆರೋಗ್ಯ ಸವಾಲುಗಳು

ವಯಸ್ಸಾದಂತೆ ಅನೇಕ ಅಂಗಗಳು ಒಂದೇ ಬಾರಿಗೆ ಪ್ರಭಾವಕ್ಕೊಳಗಾಗುವುದರಿಂದ, ಅನಾರೋಗ್ಯಗಳು ಪ್ರತ್ಯೇಕವಾಗಿ ಬರುವುದಿಲ್ಲ. ಇವುಗಳನ್ನು ಜೆರಿಯಾಟ್ರಿಕ್‌ ಸಿಂಡ್ರೋಮ್ಸ್‌ ಎನ್ನಲಾಗುತ್ತದೆ.

 ನೆನಪಿನ ಶಕ್ತಿಯ ಕುಸಿತ: ಹೆಸರುಗಳು ಮರೆತುಹೋಗುವುದು, ದಿನನಿತ್ಯದ ದಾರಿ ಮರೆಯುವುದು - ಇವು ಡಿಮೆನ್ಷಿಯಾ ಅಥವಾ ಆಲ್ಹೈಮರ್ಸ್‌ನ ಆರಂಭಿಕ ಲಕ್ಷಣಗಳಾಗಿರಬಹುದು.

 ಸ್ನಾಯು ಕ್ಷಯ ಮತ್ತು ದೌರ್ಬಲ್ಯ: ಸ್ನಾಯುಗಳ ಶಕ್ತಿ ಕಡಿಮೆಯಾಗಿ ದೇಹ ದೌರ್ಬಲ್ಯಕ್ಕೊಳಗಾಗುತ್ತದೆ. ಇದರಿಂದ ಬೀಳುವ ಅಪಾಯ ಹೆಚ್ಚಾಗುತ್ತದೆ.

 ಇಂದ್ರಿಯಗಳ ಶಕ್ತಿ ಕುಂದುವುದು: ಕಣ್ಣು ಕಾಣದಿರುವುದು ಮತ್ತು ಕಿವಿ ಕೇಳದಿರುವುದು ಸಂವಹನವನ್ನು ಕಷ್ಟಕರವಾಗಿಸಿ, ಹಿರಿಯರನ್ನು ಸಮಾಜದಿಂದ ಒಂಟಿಯಾಗಿಸುತ್ತವೆ.

 ಮಾನಸಿಕ ಸವಾಲುಗಳು: ಒಂಟಿತನ, ಖನ್ನತೆ, ಆತಂಕ ಮತ್ತು ನಿದ್ರಾಹೀನತೆ ಒಟ್ಟಾರೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತವೆ.

 ಅಜೀರ್ಣ ಮತ್ತು ಶಾರೀರಿಕ ತೊಂದರೆಗಳು: ಹಸಿವಾಗದಿರುವುದು, ತೂಕ ಇಳಿಕೆ, ಮಲಬದ್ಧತೆ ಮತ್ತು ಮೂತ್ರ ನಿಯಂತ್ರಣ ಸಿಗದಂತಿರುವುದು ʼವಯಸ್ಸಾದ ಮೇಲೆ ಸಾಮಾನ್ಯ' ಎಂದು ನಿರ್ಲಕ್ಷಿಸಲ್ಪಡುತ್ತವೆ, ಆದರೆ ಇವುಗಳಿಗೆ ಚಿಕಿತ್ಸೆ ಸಾಧ್ಯವಿದೆ.

 ಹೆಚ್ಚಿನ ಔಷಧಗಳ ಬಳಕೆ: ಹಿರಿಯರು ಹಲವು ದೀರ್ಘ‌ಕಾಲದ ಕಾಯಿಲೆಗಳಿಗೆ ಒಂದೇ ಬಾರಿಗೆ ಅನೇಕ ಮಾತ್ರೆಗಳನ್ನು ಸೇವಿಸುತ್ತಾರೆ. ಇವುಗಳ ಪರಸ್ಪರ ಪ್ರತಿಕ್ರಿಯೆಯಿಂದ ಅಡ್ಡ ಪರಿಣಾಮಗಳು, ತಲೆಸುತ್ತು ಅಥವಾ ಗೊಂದಲ ಉಂಟಾಗಬಹುದು.

ಜೆರಿಯಾಟ್ರಿಶಿಯನ್‌ ಪಾತ್ರವೇನು?

ಜೆರಿಯಾಟ್ರಿಕ್‌ ಮೆಡಿಸಿನ್‌ ಕೇವಲ ರೋಗಗಳಿಗೆ ಮಾತ್ರೆಗಳನ್ನು ಬರೆಯುವುದಲ್ಲ; ಅದು ವ್ಯಕ್ತಿಯನ್ನು ಸಮಗ್ರವಾಗಿ ನೋಡುವುದು.

ವೈದ್ಯರು ಸಮಗ್ರ ವೃದ್ಧಾಪ್ಯ ವಿಶ್ಲೇಷಣೆ (Comprehensive Geriatric Assessment &CGA) ಎಂಬ ಸಮಗ್ರ ಪರೀಕ್ಷೆಯ ಮೂಲಕ ಹಿರಿಯರ ನೆನಪಿನ ಶಕ್ತಿ ಮತ್ತು ದೈಹಿಕ ಚಲನವಲನ, ಆಹಾರ ಮತ್ತು ಪೋಷಣೆ, ಪ್ರಸ್ತುತ ತೆಗೆದುಕೊಳ್ಳುತ್ತಿರುವ ಔಷಧಗಳ ಪರಿಶೀಲನೆ, ಮಾನಸಿಕ ಸ್ಥಿತಿ, ನಿದ್ರೆ ಮತ್ತು ಮೂತ್ರಪಿಂಡದ ಆರೋಗ್ಯ, ಆರೈಕೆದಾರರ ಒತ್ತಡ - ಇವೆಲ್ಲವನ್ನೂ ಮೌಲ್ಯಮಾಪನ ಮಾಡಿ, ಪ್ರತಿಯೊಬ್ಬರಿಗೂ ಸೂಕ್ತವಾದ ಪ್ರತ್ಯೇಕ ಚಿಕಿತ್ಸಾ ಯೋಜನೆಯನ್ನು ರೂಪಿಸುತ್ತಾರೆ.

ಅನಗತ್ಯ ಔಷಧಗಳನ್ನು ಕಡಿಮೆ ಮಾಡುವುದು ಇವರ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ.

ಜೆರಿಯಾಟ್ರಿಕ್‌ ಮೆಡಿಸಿನ್‌ ಎನ್ನುವುದು ಯಾವುದೋ ಒಂದು ನಿರ್ದಿಷ್ಟ ಅಂಗದ ಚಿಕಿತ್ಸೆಯಲ್ಲ. ಇದು ಜೀವನದ ಒಂದು ಹಂತದ ಆರೈಕೆ. ಈ ವ್ಯಕ್ತಿಗೆ ಯಾವ ಕಾಯಿಲೆ ಇದೆ ಎಂದು ಕೇಳುವ ಬದಲು, ಈ ವ್ಯಕ್ತಿ ಹೇಗೆ ತನ್ನ ಸ್ವತಂತ್ರ ಜೀವನವನ್ನು ಸಾರ್ಥಕವಾಗಿ ನಡೆಸಬಹುದು ಎಂದು ಆಲೋಚಿಸುವುದೇ ಈ ವಿಭಾಗದ ಮುಖ್ಯ ಉದ್ದೇಶ.

ಜೆರಿಯಾಟ್ರಿಕ್‌ ಮೆಡಿಸಿನ್‌ನ ಅಂತಿಮ ಗುರಿ ಆಯುಷ್ಯಕ್ಕೆ ವರ್ಷಗಳನ್ನು ಸೇರಿಸುವುದಷ್ಟೇ ಅಲ್ಲ, ಆ ವರ್ಷಗಳಿಗೆ ಜೀವನದ ಉತ್ಸಾಹವನ್ನು ತುಂಬುವುದು.

-ಡಾ| ಅಕ್ಷತಾ ರಾವ್‌

ಅಸಿಸ್ಟೆಂಟ್‌ ಪ್ರೊಫೆಸರ್‌

ಜೆರಿಯಾಟ್ರಿಕ್‌ ಮೆಡಿಸಿನ್‌ ವಿಭಾಗ, ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಜೆರಿಯಾಟ್ರಿಕ್‌ ಮೆಡಿಸಿನ್‌ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಅತ್ತಾವರ, ಮಂಗಳೂರು)

Dailyhunt
Disclaimer: This content has not been generated, created or edited by Dailyhunt. Publisher: Udayavani