ಸ್ಟಾಡೆ (ಜರ್ಮನಿ):ಉತ್ತರ ಜರ್ಮನಿಯ ಸ್ಟಾಡೆ ನಗರದಲ್ಲಿರುವ ಯುವ ಕಲ್ಯಾಣ ಕೇಂದ್ರವೊಂದರಲ್ಲಿ ಸೋಮವಾರ(ಜೂನ್ 29) ನಡೆದ ಗುಂಡಿನ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರಲ್ಲಿ ಓರ್ವ ಪ್ರಮುಖ ಶಂಕಿತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೃತಪಟ್ಟವರ ವಯಸ್ಸು ಅಥವಾ ದಾಳಿಯ ಹಿಂದಿನ ಉದ್ದೇಶದ ಕುರಿತು ಪೊಲೀಸರು ಇನ್ನೂ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.
ಹ್ಯಾಂಬರ್ಗ್ ನಗರದ ಪಶ್ಚಿಮ ಭಾಗದಲ್ಲಿರುವ ಈ ಕೇಂದ್ರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಳಿಕ ಸಾರ್ವಜನಿಕರು ಆ ಪ್ರದೇಶಕ್ಕೆ ತೆರಳದಂತೆ ಪೊಲೀಸರು ಮನವಿ ಮಾಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಹಾಗೂ ಸಾರ್ವಜನಿಕರಿಗೆ ಯಾವುದೇ ಹೆಚ್ಚುವರಿ ಅಪಾಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಭಾರೀ ಸಂಖ್ಯೆಯಲ್ಲಿ ತುರ್ತು ಸೇವಾ ಸಿಬಂದಿ ಹಾಗೂ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

