ಕಾರ್ಕಳ: ಪಶ್ಚಿಮ ಘಟ್ಟಗಳ ತಪ್ಪಲು ಹಾಗೂ ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆ ಮುಂದುವರಿದಿದ್ದು, ಹೆಬ್ರಿ ಮತ್ತು ಕಾರ್ಕಳ ತಾಲೂಕಿನಾದ್ಯಂತ ಜಲಮೂಲಗಳು ಮರುಜೀವ ಪಡೆದುಕೊಂಡಿವೆ. ಜೂನ್ ತಿಂಗಳು ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ನದಿ, ತೊರೆಗಳಲ್ಲಿ ನೀರಿನ ಹರಿವು ತೀರಾ ಕ್ಷೀಣಿಸಿತ್ತು.
ಆದರೆ ಇದೀಗ ಆಗುಂಬೆ, ಕುದುರೆಮುಖ ಸೇರಿದಂತೆ ಘಟ್ಟದ ಮೇಲ್ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಪ್ರಮುಖ ನದಿಗಳಾದ ಸೀತಾ ಮತ್ತು ಸ್ವರ್ಣಾ ನದಿಗಳ ಉಪನದಿಗಳಲ್ಲಿ ನೀರಿನ ಹರಿವು ಗಣನೀಯ ಹೆಚ್ಚಾಗಿದ್ದು, ನದಿ ಪರಿಸರಗಳು ಕಂಗೊಳಿಸುತ್ತಿದೆ.
ಹೆಬ್ರಿ ಪರಿಸರದಲ್ಲಿ ಹರಿಯುವ ಸೀತಾನದಿಗೆ ಜೀವ ತುಂಬುವ ಪ್ರಮುಖ ಉಪನದಿಗಳು ಈಗ ಪೂರ್ಣ ಪ್ರಮಾಣದಲ್ಲಿ ಹರಿಯುತ್ತಿವೆ. ಘಟ್ಟದ ಆಗುಂಬೆ, ನಸರಿಂಹ ಪರ್ವತ ಬೆಟ್ಟಗಳ ಇಳಿಜಾರುಗಳಿಂದ ಹರಿದು ಬರುವ ಜರುವತ್ತು, ತಿಂಗಳಮಕ್ಕಿ, ಕಬ್ಬಿನಾಲೆ ಹೊಳೆ, ಕೆಲಕಿಲ, ವರಂಗ ಅಡ್ಕ, ಬಲ್ಲಾಡಿ, ಗುಮ್ಮಗುಂಡಿ ಹಾಗೂ ಬಚ್ಚಪು ನದಿಗಳಲ್ಲಿ ನೀರಿನ ಹರಿವು ಅತ್ಯುತ್ತಮವಾಗಿದ್ದು, ಈ ಭಾಗದ ಕೃಷಿ ವಲಯದಲ್ಲಿ ಸಂತಸ ಮೂಡಿಸಿದೆ. ಬೇಸಗೆಯ ಬಿಸಿಲಿಗೆ ಸಂಪೂರ್ಣ ಒಣಗಿದ್ದ ಈ ಸಣ್ಣ ನದಿಗಳು ಮತ್ತು ಹೊಳೆಗಳು ಈಗ ಮೈದುಂಬಿ ಹರಿಯುತ್ತಿದ್ದು, ಸೀತಾನದಿಯ ನೀರಿನ ಮಟ್ಟ ಹೆಚ್ಚಿಸಿವೆ.
ಸ್ವರ್ಣಾ ಒಡಲು ತುಂಬಿಸಿದ ಹಳ್ಳ-ಕೊಳ್ಳಗಳು
ಉಡುಪಿ ನಗರ ಸಹಿತ, ಕಾರ್ಕಳ ಭಾಗದ ಜೀವನಾಡಿಯಾಗಿರುವ ಸ್ವರ್ಣಾ ನದಿ ಸೇರುವ ಉಪನದಿಗಳು ಮತ್ತು ಪ್ರಮುಖ ಹೊಳೆಗಳಲ್ಲೂ ನೀರಿನ ಹರಿವು ರಭಸವಾಗಿದೆ. ಹಪ್ಪನಡ್ಕ, ಚೌಕಿ, ಮಂಜಲ್‌ತಾರ್, ಹೆಗ್ಡೆಬೆಟ್ಟು, ಅಣ್ಣಾಲು, ತೀರ್ಥಟ್ಟಿ, ಸೂರಂಟೆ ಹೊಳೆ, ನಡುಹಳ್ಳ, ಹೋಟೆ ಹಳ್ಳ, ಹಂಚಿಕಟ್ಟೆ, ಎಡಪಾಡಿ ಹೊಳೆ, ಬಟ್ಟಿಹಾರ್ ಹಾಗೂ ಕನ್ಯಾಲು ಹೊಳೆಗಳಲ್ಲಿ ಉತ್ತಮ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮಳೆಗಾಲದ ಆರಂಭದಲ್ಲಿ ಬತ್ತಿಹೋಗಿದ್ದ ಜಲಮೂಲಗಳು ಈಗ ತುಂಬಿ ಹರಿಯುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೀರಿನ ಅಭಾವ ನೀಗಿದಂತಾಗಿದೆ.
ಧುಮ್ಮಿಕ್ಕುತ್ತಿರುವ ದುರ್ಗಾ, ಮಾಳ ಜಲಪಾತಗಳು
ಘಟ್ಟದ ಭಾಗದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಪ್ರಸಿದ್ಧ ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಕಾರ್ಕಳದ ಮಾಳ ಜಲಪಾತ ಹಾಗೂ ದುರ್ಗಾ ಜಲಪಾತಗಳು ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿವೆ. ಹಸುರ ಹೊದಿಕೆಯ ನಡುವೆ ಶ್ವೇತಧಾರೆಯಂತೆ ಹರಿಯುತ್ತಿರುವ ಜಲಪಾತಗಳ ಸೌಂದರ್ಯ ಇಮ್ಮಡಿಗೊಂಡಿದೆ.
ಅಜೆಕಾರು ಭಾಗದಲ್ಲಿ ಅತ್ಯಧಿಕ ಮಳೆ
ಕಳೆದ ಮೂರು ದಿನಗಳಲ್ಲಿ ಮೂರು ದಿನಗಳಲ್ಲಿ ಅಜೆಕಾರು ಪರಿಸರದಲ್ಲಿ ಹೆಚ್ಚಿನ ಮಳೆ ದಾಖಲಾಗಿದ್ದು, ಸಾಣೂರು, ಮುಂಡ್ಕೂರು, ಕೆರ್ವಾಶೆಯಲ್ಲೂ ಉತ್ತಮ ಮಳೆಯಾಗಿದೆ. ಅಜೆಕಾರಿನಲ್ಲಿ ಜುಲೈ 5ರಿಂದ 7ರ ವರೆಗೆ ಕ್ರಮವಾಗಿ 43.4 ಮಿ.ಮೀ, 72.2 ಮಿ.ಮೀ ಮತ್ತು 76.0 ಮಿ.ಮೀ ನಷ್ಟು ಮಳೆಯಾಗಿದೆ. ಸಾಣೂರಿನಲ್ಲಿ 25.8, 33.8 ಮತ್ತು 83.4 ಮಿ.ಮೀ, ಕೆರ್ವಾಶೆಯಲ್ಲಿ 12.4, 24.8, 72.4 ಮಿ.ಮೀ ಮಳೆ ಸುರಿದಿದ್ದು, ಮುಂಡ್ಕೂರು ಕೇಂದ್ರದಲ್ಲಿ ಜು. 5 ರಂದೇ 104.2 ಮಿ.ಮೀ ದಾಖಲಾಗಿದೆ. ಉಳಿದಂತೆ ಕಾರ್ಕಳದಲ್ಲಿ ಕ್ರಮವಾಗಿ 10.2, 25.4, 41.8 ಮಿ.ಮೀ, ಇರ್ವತ್ತೂರಿನಲ್ಲಿ 6.2, 42.8, 43.8 ಮಿ.ಮೀ ಹಾಗೂ ಕೆದಿಂಜೆಯಲ್ಲಿ 8.6, 17.8 ಮತ್ತು 59.0 ಮಿ.ಮೀ ಮಳೆ ದಾಖಲಾಗಿದೆ.

