Dailyhunt
Gold: ಯುದ್ಧ ಕಾಲದಲ್ಲೂ ಚಿನ್ನದ ಮುಖದಲ್ಲಿ ಮುಗುಳ್ನಗೆ

Gold: ಯುದ್ಧ ಕಾಲದಲ್ಲೂ ಚಿನ್ನದ ಮುಖದಲ್ಲಿ ಮುಗುಳ್ನಗೆ

ಮಂಗಳೂರು: ಮಧ್ಯ ಪ್ರಾಚ್ಯದಲ್ಲಿನ ಯುದ್ಧದ ಸನ್ನಿವೇಶ ಸಂಪೂರ್ಣವಾಗಿ ತಹಬದಿಗೆ ಬಾರದಿದ್ದರೂ, ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಆಭರಣ ಉದ್ದಿಮೆ ಸೇರಿದಂತೆ ವಿವಿಧ ಉದ್ದಿಮೆಗಳಲ್ಲಿ ಹೊಸ ಹುರುಪು ಮೂಡಿದೆ. ಮುಖ್ಯವಾಗಿ ಕೆಲವು ಚಿನ್ನಾಭರಣ ಮಳಿಗೆಗಳಲ್ಲಿ ಮುಂಗಡ ಬುಕ್ಕಿಂಗ್‌ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ.

ಇದು ಉದ್ದಿಮೆ ವಲಯ ದಲ್ಲಿ ಆಶಾವಾದ ಮೂಡಿಸಿದೆ.

ಅಕ್ಷಯ ತೃತೀಯದ ದಿನ ಚಿನ್ನದ ಆಭರಣ ಸಹಿತ ಹೊಸ ವಸ್ತುಗಳ ಖರೀದಿಗೆ ಗ್ರಾಹಕರು ಸಿದ್ಧರಾಗಿದ್ದರೆ, ವಿವಿಧ ಉದ್ದಿಮೆಗಳ ಮಳಿಗೆಯವರೂ ಹೊಸ ನಿರೀಕ್ಷೆಯಿಂದ ಕಾದು ನೋಡುತ್ತಿದ್ದಾರೆ.

ಅಕ್ಷಯ ತೃತೀಯದಂದು ಚಿನ್ನ ಸೇರಿದಂತೆ ಹೊಸ ವಸ್ತುಗಳ ಖರೀದಿಯಿಂದ ಶುಭಕರ ಎಂಬ ನಂಬಿಕೆ ಇದೆ. ಪ್ರಸ್ತುತ ಆಭರಣಗಳ ಮಳಿಗೆಗಳಲ್ಲೂ ಹೊಸ ಉತ್ಸಾಹ ಕಂಡು ಬರುತ್ತಿದೆ. ಹಾಗಾಗಿ ಚಿನ್ನಕ್ಕೆ ದರ ಏರಿಕೆಯಾಗಿದ್ದರೂ, ಚಿನ್ನಾಭರಣಗಳ ಖರೀದಿಯ ಉತ್ಸಾಹ ಕಡಿಮೆಯಾಗಿಲ್ಲ.

ಈ ಬಾರಿಯ ಅಕ್ಷಯ ತೃತೀಯ ಹಬ್ಬ ಎ.19 ರಂದು (ಕೆಲವು ಕಡೆ 20 ರಂದು) ಬರಲಿದ್ದು, ಹೂಡಿಕೆದಾರರು ಮತ್ತು ಗ್ರಾಹಕರು ಚಿನ್ನ ಖರೀದಿಸಲು ಕಾತರದಿಂದ ಕಾಯುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಅಂಗಡಿಗಳೂ ವಿವಿಧ ಕೊಡುಗೆಗಳನ್ನು ಘೋಷಿಸಿವೆ. ಈಗಾಗಲೇ ಬುಕ್ಕಿಂಗ್‌ ಆರಂಭಗೊಂಡಿದೆ. ಅಕ್ಷಯ ತೃತೀಯ ದಿನದಿಂದ ಒಳ್ಳೆ ಘಳಿಗೆ ನೋಡಿ, ಆಭರಣ ಖರೀದಿ ಮಾಡಲು ಸಾರ್ವಜನಿಕರು ಮುಂದಾಗಿದ್ದಾರೆ.

ಕೆ.ಎಸ್‌.ರಾವ್‌ ರಸ್ತೆಯ ಎಸ್‌. ಎಲ್‌. ಶೇಟ್‌ ಜ್ಯುವೆಲ್ಲರ್ಸ್‌ ಆಯಂಡ್‌ ಡೈಮಂಡ್‌ ಹೌಸ್‌ ಪಾಲುದಾರ ಪ್ರಶಾಂತ್‌ ಶೇಟ್‌ ಪ್ರತಿಕ್ರಿಯಿಸಿ, "ಚಿನ್ನದ ದರ ಏರಿಕೆಯ ಕಾರಣಕ್ಕೆ ಜನ ಹೆಚ್ಚು ಜಾಗ್ರತೆಯಿಂದ ಯೋಚಿಸುತ್ತಾರೆ. ತಮ್ಮಲ್ಲಿರುವ ಹಣಕ್ಕೆ ಎಷ್ಟು ಗ್ರಾಂ ದೊರೆಯುತ್ತದೆಯೋ ಅಷ್ಟು ಚಿನ್ನ ಮಾತ್ರ ಖರೀದಿಸುತ್ತಾರೆ. ಒಂದೇ ಆಭರಣ ಖರೀದಿಸುವ ಬದಲು, ಅದೇ ಹಣದಲ್ಲಿ ಹೆಚ್ಚಿನ ಆಯ್ಕೆ ನೋಡುತ್ತಿದ್ದಾರೆ. ನಮ್ಮ ಮಳಿಗೆಯಲ್ಲಿ ಈಗಾಗಲೇ ಕೊಡುಗೆಗಳು ಇದ್ದು, ಗ್ರಾಹಕರು ಖರೀದಿಸುವ ಪ್ರತಿ 10 ಗ್ರಾಂ. ಚಿನ್ನಕ್ಕೆ 4,500 ರೂ. ರಿಯಾಯಿತಿ, ಬೆಳ್ಳಿಯ ಪರಿಕರ ಮತ್ತು ಬೆಳ್ಳಿ ಆಭರಣಗಳಿಗೆ ಪ್ರತಿ ಕಿ. ಗ್ರಾಂ. ಮೇಲೆ 8000 ರೂ. ರಿಯಾಯಿತಿ, ಸಾಂಪ್ರದಾಯಿಕ ಆಂಟಿಕ್‌ ಚಿನ್ನಾಭರಣಗಳಿಗೆ ಪ್ರತಿ 10 ಗ್ರಾಂ. ಮೇಲೆ 6,500 ರೂ. ರಿಯಾಯಿತಿ ಸೇರಿದಂತೆ ವಿವಿಧ ಆಫರ್‌ ನೀಡಲಾಗುತ್ತದೆ ಎಂದು ಹೇಳುತ್ತಾರೆ.

ಪುತ್ತೂರಿನ ಜಿ.ಎಲ್. ಆಚಾರ್ಯ ಜ್ಯುವೆಲ್ಲರಿ ಶಾಪ್‌ನ ಚೇರ್‌ವೆುನ್‌ ಬಲರಾಮ ಆಚಾರ್ಯ ಅವರ ಪ್ರಕಾರ, "ಬೆಲೆ ಏರಿಕೆ ಇದ್ದರೂ, ಉತ್ತಮ ಕೊಡುಗೆಗಳು ಇರುವ ಕಾರಣಕ್ಕೆ ಅಕ್ಷಯ ತೃತೀಯ ಸಂದರ್ಭ ಚಿನ್ನದ ಖರೀದಿ ಹೆಚ್ಚಾಗಿದೆ. ಮೊದಲೇ ಬುಕ್ಕಿಂಗ್‌ ಮಾಡಿದ ಗ್ರಾಹಕರಿಗೆ ಅವರು ಖರೀದಿಸುವ ದಿನ ಅಥವಾ ಮುಂಗಡ ಬುಕ್ಕಿಂಗ್‌ ಮಾಡಿದ ದಿನ ಇದರಲ್ಲಿ ಯಾವುದು ದರ ಕಡಿಮೆ ಇದೆಯೋ ಅದೇ ಅನ್ವಯವಾಗುವ ಅವಕಾಶ ನೀಡಿದ್ದೇವೆ ಎನ್ನುತ್ತಾರೆ.

"ಆಭರಣ ಖರೀದಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಮ್ಮ ಮಳಿಗೆಯಲ್ಲೂ ಆಫರ್‌ ಘೋಷಿಸಿದ್ದೇವೆ. ಅದರಂತೆ ಚಿನ್ನಾಭರಣಗಳ ಖರೀದಿಗೆ ಪ್ರತೀ 10 ಗ್ರಾಂ.ಗೆ 2000 ರೂ.ನಿಂದ 6500 ರೂ.ವರೆಗೆ ಆಫರ್‌, ವಜ್ರಾಭರಣಗಳಿಗೆ ಪ್ರತಿ ಕ್ಯಾರೆಟ್‌ಗೆ 8000 ಡಿಸ್ಕೌಂಟ್‌, ಬೆಳ್ಳಿ, ಪ್ಲಾಟಿನಂ, ನವರತ್ನಗಳು, ದೇವರ ಫೋಟೊ, ವಾಚ್‌ ಗಿಫ್ಟ್‌ ಐಟಮ್ಸ್‌ಗಳಿಗೂ ಶೇ.5ರಷ್ಟು ರಿಯಾಯಿತಿ ನೀಡುತ್ತಿದ್ದೇವೆ ಎನ್ನುತ್ತಾರೆ ಲೇಡಿಹಿಲ್‌ ನ ಎಸ್‌.ಎಲ್‌ ಶೇಟ್‌ ಡೈಮಂಡ್‌ ಹೌಸ್‌ ಮಾಲಕ ಎಂ. ರವೀಂದ್ರ ಶೇಟ್‌. ಬಲ್ಮಠ ರಸ್ತೆಯ ಲಕ್ಷ್ಮೀದಾಸ್‌ ಜ್ಯುವೆಲ್ಲರ್ಸ್‌ ನ ಪಾಲುದಾರರಾದ ವಿಷ್ಣು ಆಚಾರ್ಯ ಹೇಳುವಂತೆ, "ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬುಕ್ಕಿಂಗ್‌ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಆಫರ್‌ಗಳನ್ನು ಇಟ್ಟಿದ್ದೇವೆ. ಟೆಂಪಲ್‌ ಜ್ಯುವೆಲ್ಲರಿ, ಆಂಟಿಕ್‌ ಜ್ಯುವೆಲ್ಲರಿ, ಡೈಮಂಡ್‌ ಜ್ಯುವೆಲ್ಲರಿ ಸೇರಿದಂತೆ ಕೆಲವೊಂದು ಆಭರಣಗಳಿಗೆ ಮೇಕಿಂಗ್‌ ಚಾರ್ಜ್‌ ಮೇಲೆ ಶೇ.40 ರಷ್ಟು ನೇರ ರಿಯಾಯಿತಿ ಇದೆ. ಅದೇ ರೀತಿ, ಆಭರಣ ಖರೀದಿಗೆ ಒಂದು ಗ್ರಾಂಗೆ 600 ರೂ. ರಿಯಾಯಿತಿ ಪಡೆಯಬಹುದು ಎನ್ನುತ್ತಾರೆ.

ವಜ್ರಾಭರಣ ಖರೀದಿಗೂ ಆಸಕ್ತಿ

ಆಭರಣ ಮಳಿಗೆಗಳಲ್ಲಿ ವೈವಿಧ್ಯಮಯ ವಿನ್ಯಾಸದ ಸಂಗ್ರಹ ಬಂದಿದ್ದು, ಚಿನ್ನದಲ್ಲಿ ರೋಸ್‌ ಗೋಲ್ಡ್, ವೈಟ್‌ ಗೋಲ್ಡ್‌ ಮಾರುಕಟ್ಟೆಯಲ್ಲಿದೆ. ಹಳೆಯ ಕಾಲದ ಆಭರಣವಾದ ಟೆಂಪಲ್‌ ಕಲೆಕ್ಷನ್‌ ಖರೀದಿಗೂ ಬೇಡಿಕೆ ಇದೆ. ಚಿನ್ನದ ಜೊತೆ ವಜ್ರಾಭರಣ ಗಳಲ್ಲಿಯೂ ಹೊಸ ವಿನ್ಯಾಸ ಮಾರುಕಟ್ಟೆಯಲ್ಲಿದೆ. ಗ್ರಾಹಕರು ಸಾಂಪ್ರದಾಯಿಕ ಶೈಲಿಯ ವಜ್ರಾಭರಣ ಖರೀದಿಯಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದು ಈ ಕ್ಷೇತ್ರದ ಪರಿಣಿತರ ಅಭಿಪ್ರಾಯ.

ಹಗುರ ಆಭರಣಗಳಿಗೆ ಬೇಡಿಕೆ

ಆಭರಣಗಳ ದರ ಏರಿಕೆಯ ಪರಿಣಾಮವಾಗಿ ಜನರು ಖರೀದಿಯಲ್ಲಿ ಎಚ್ಚರ ವಹಿಸುತ್ತಿದ್ದಾರೆ. ಹಾಗಾಗಿ ಇತ್ತೀಚೆಗೆ ದಿನಗಳಲ್ಲಿ ಹಗುರ ಆಭರಣಗಳ ಬೇಡಿಕೆ ಹೆಚ್ಚುತ್ತಿದೆ. ಇದು ಆಭರಣ ಕ್ಷೇತ್ರದಲ್ಲಿನ ಹೊಸ ಪ್ರವೃತ್ತಿ. ಇಂದಿನ ಯುವಜನರಿಗೆ ಸರಳ ಮತ್ತು ಆಧುನಿಕ ವಿನ್ಯಾಸಗಳೇ ಹೆಚ್ಚು ಇಷ್ಟ ಎನ್ನುತ್ತಾರೆ ಚಿನ್ನದ ವ್ಯಾಪಾರಿಗಳು.

Dailyhunt
Disclaimer: This content has not been generated, created or edited by Dailyhunt. Publisher: Udayavani